ಮೌನ, ನಿರಂತರ ಪ್ರಯತ್ನವೇ ನಿಜವಾದ ಯೋಗ

KannadaprabhaNewsNetwork |  
Published : Jun 22, 2026, 01:15 AM IST
23 | Kannada Prabha

ಸಾರಾಂಶ

ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ ಎಂಬ ಧ್ಯೇಯದೊಂದಿಗೆ ಈ ಬಾರಿ ಯೋಗ ದಿನ ನಡೆಯುತ್ತಿರುವುದು ಅತ್ಯಂತ ಮುಖ್ಯ

ಕನ್ನಡಪ್ರಭ ವಾರ್ತೆ ಮೈಸೂರು

ಯೋಗದ ಮೊದಲನೇ ಲಕ್ಷಣವೇ ನಿಶ್ಯಬ್ದ ಮತ್ತು ಮೌನ. ಯಾವುದೇ ಕೆಲಸವನ್ನು ಆಯಾ ಕಾರ್ಯಕ್ಕೆ ತಕ್ಕಂತೆ ಶ್ರದ್ಧೆಯಿಂದ ಮಾಡುವುದೇ ನಿಜವಾದ ಯೋಗ ಎಂದು ಅವಧೂತ ದತ್ತ ಪೀಠದ ಕಿರಿಯ ಪೀಠಾಧಿಪತಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ತಿಳಿಸಿದರು.

ನಗರದ ಅವಧೂತ ದತ್ತ ಪೀಠದಲ್ಲಿ ವಿಶ್ವ ಯೋಗ ದಿನಾಚರಣೆ ಹಾಗೂ ವಿಶ್ವ ಸಂಗೀತ ದಿನಾಚರಣೆಯ ಅಂಗವಾಗಿ ಭಾನುವಾರ ಆಯೋಜಿಸಿದ್ದ ವಿಶೇಷ ಯೋಗಾಭ್ಯಾಸ ಹಾಗೂ ಪ್ರದರ್ಶನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರ ಆಶೀರ್ವಾದ ಹಾಗೂ ಆದೇಶದಂತೆ ಆಶ್ರಮದಲ್ಲಿ ಕಳೆದ 50 ವರ್ಷಗಳಿಂದ ದತ್ತ ಕ್ರಿಯಾ ಯೋಗವನ್ನು ಕಲಿಸಿ ಕೊಡಲಾಗುತ್ತಿದ್ದು, ಸಾಧಕ ಬೋಧಕರು ಇದರ ಯಶಸ್ವಿ ಪ್ರಚಾರ ಮಾಡುತ್ತಿದ್ದಾರೆ ಎಂದು ಸ್ಮರಿಸಿದರು.

ಆರೋಗ್ಯಕರ ವಯಸ್ಸಾಗುವಿಕೆಗಾಗಿ ಯೋಗ ಎಂಬ ಧ್ಯೇಯದೊಂದಿಗೆ ಈ ಬಾರಿ ಯೋಗ ದಿನ ನಡೆಯುತ್ತಿರುವುದು ಅತ್ಯಂತ ಮುಖ್ಯವಾಗಿದೆ. ಯಾರೂ ಕಾಲವನ್ನು ತಡೆಯಲು ಸಾಧ್ಯವಿಲ್ಲ, ಆದರೆ ಕಾಲದಿಂದ ನಮ್ಮಲ್ಲಿ ಆಗುವ ಬದಲಾವಣೆಗಳನ್ನು ಯೋಗದ ಮೂಲಕ ಧನಾತ್ಮಕವಾಗಿ ರೂಪಿಸಿಕೊಳ್ಳಬಹುದು. ಕಾಲದ ಪ್ರಭಾವವು ನಮ್ಮ ಮೇಲೆ ಸರಿಯಾದ ರೀತಿಯಲ್ಲಿ ಬೀರುವಂತೆ ಮಾಡಲು ಯೋಗ ಸಹಕಾರಿಯಾಗಿದೆ ಎಂದರು.

ಇತ್ತೀಚೆಗೆ ನಡೆದ ಮಹಾ ಸಂಕಲ್ಪ ದಿವಸದಂದು ಮೈಸೂರಿನಲ್ಲಿ 1200 ಯೋಗ ಉಪಾಧ್ಯಾಯರು ಹಾಗೂ 1,20,000 ಹೆಚ್ಚು ಜನ ಸಾಮಾನ್ಯರು ಒಟ್ಟಾಗಿ ಯೋಗಾಭ್ಯಾಸ ಮಾಡಲು ನಿರ್ಧರಿಸಿರುವುದು ಶ್ಲಾಘನಿಯ. ಈ ಯೋಗದ ಪ್ರಚಾರ ಹೀಗೆಯೇ ಮುಂದುವರಿಯಬೇಕು. ಮುಂದಿನ ವರ್ಷ ನಮ್ಮ ಕರ್ನಾಟಕದಲ್ಲಿ ಕನಿಷ್ಠ 2 ಕೋಟಿ ಜನರು ಯೋಗಾಭ್ಯಾಸ ಮಾಡುವಂತಾಗಬೇಕು. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಇಂದಿನಿಂದಲೇ ಪ್ರಯತ್ನವನ್ನು ಪ್ರಾರಂಭಿಸಬೇಕು ಮತ್ತು ತಮ್ಮ ಬಂಧು- ಮಿತ್ರರಿಗೆ ಯೋಗದ ಮಹತ್ವವನ್ನು ತಿಳಿಸಿಕೊಡಬೇಕು ಎಂದು ಅವರು ಕರೆ ನೀಡಿದರು.

ಲೈವ್ ಯೋಗ

ದತ್ತ ಕ್ರಿಯಾ ಯೋಗದ ವ್ಯಾಪ್ತಿಯು ಜಾಗತಿಕ ಮಟ್ಟದಲ್ಲಿದ್ದು, ದಿನದ ಮೊದಲ ಸೂರ್ಯನ ಕಿರಣಗಳು ಬೀಳುವ ನ್ಯೂಜಿಲ್ಯಾಂಡ್ ದೇಶದಿಂದ ಹಿಡಿದು ಪಶ್ಚಿಮದ ಅಮೆರಿಕದ ಕ್ಯಾಲಿಫೋರ್ನಿಯಾವರೆಗಿನ ಆಶ್ರಮದ ಎಲ್ಲಾ ಶಾಖೆಗಳಲ್ಲೂ ಯೋಗಾಭ್ಯಾಸ ನಡೆಯುತ್ತಿದೆ. ಸತತ 24 ಗಂಟೆಗಳ ಕಾಲ ದತ್ತ ಕ್ರಿಯಾ ಯೋಗದ ನೇರಪ್ರಸಾರ (ಲೈವ್) ನಡೆಯುವ ಸಂಕಲ್ಪ ಯಶಸ್ವಿಯಾಗಿ ನೆರವೇರುತ್ತಿದೆ ಎಂದು ಶ್ರೀಗಳು ತಿಳಿಸಿದರು.

ಆಶ್ರಮದ ಕ್ರಿಯಾ ಯೋಗ ಶಿಕ್ಷಕರಾದ ಫಣೀಶ್ರೀ ಅವರ ಮಾರ್ಗದರ್ಶನದಲ್ಲಿ ಮಕ್ಕಳು ಸಿದ್ಧಪಡಿಸಿದ್ದ ಸಂಗೀತ ಹಾಗೂ ಯೋಗ ಪ್ರದರ್ಶನ ಕಾರ್ಯಕ್ರಮವು ಎಲ್ಲರ ಗಮನ ಸೆಳೆಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಣ ಕೇವಲ ಸರ್ಕಾರಿ ನೌಕರಿಗಾಗಿ ಅಲ್ಲ: ಶಾಸಕ ಎಚ್.ಡಿ.ತಮ್ಮಯ್ಯ
ಆರೋಗ್ಯವಂತರಾಗಿ ಬದುಕಲು ಯೋಗಾಭ್ಯಾಸ ಅಗತ್ಯ