ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಪ್ರತಿಯೊಬ್ಬರೂ ಸೊಳ್ಳೆಗಳ ಬಗ್ಗೆ ಎಚ್ಚರವಹಿಸಿ ಮಲೇರಿಯಾ, ಡೆಂಘೀ, ಚಿಕೂನ್ ಗುನ್ಯಾ ರೋಗಗಳಿಂದ ದೂರವಿರಬೇಕು ಎಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ ಬೆನ್ನೂರ ಹೇಳಿದರು.ಪಟ್ಟಣ ಸಮೀಪದ ಗಂಜಾಂನ ಸರ್ಕಾರಿ ಪ್ರೌಢ ಶಾಲೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳ ಕಚೇರಿ ಹಾಗೂ ಸಾರ್ವಜನಿಕ ಆಸ್ಪತ್ರೆ ಶ್ರೀರಂಗಪಟ್ಟಣ ವತಿಯಿಂದ ಆಯೋಜಿಸಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರತಿ ವರ್ಷ ಜೂನ್ ತಿಂಗಳಾದ್ಯಂತ ಮಲೇರಿಯಾ ರೋಗ ಹರಡುವ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಈ ವರ್ಷ ಹೆಚ್ಚು ಸಮಾನತೆ ಜಗತ್ತಿಗೆ ಮಲೇರಿಯಾ ವಿರುದ್ಧದ ಹೋರಾಟವನ್ನು ತೀವೃಗೊಳಿಸೋಣ ಎಂಬ ಧ್ಯೇಯ ವಾಕ್ಯದೊಂದಿಗೆ ಜನಸಾಮಾನ್ಯರಲ್ಲಿ ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳ ತಡೆಗಟ್ಟುವಿಕೆ ಮತ್ತು ನಿಯಂತ್ರಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.ಸೊಳ್ಳೆಗಳ ಬೆಳವಣಿಗೆ ಹಂತಗಳು ಹಾಗೂ ಜೀವನ ಚಕ್ರ ಕುರಿತು ಮಕ್ಕಳಿಗೆ ಮಾಹಿತಿ ನೀಡುತ್ತ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು. ನೀರಿನ ಸಂಗ್ರಹಗಳ ಪರಿಕರಗಳನ್ನು ವಾರಕ್ಕೆರಡು ಬಾರಿ ಸ್ವಚ್ಛವಾಗಿ ತೊಳೆಯಬೇಕು ಎಂದರು.
ಮಲಗುವಾಗ ತಪ್ಪದೆ ಸೊಳ್ಳೆ ಪರದೆ ಬಳಸಿ, ಘನ ತ್ಯಾಜ್ಯ ವಸ್ತುಗಳನ್ನು ಸರಿಯಾಗಿ ವಿಲೇವಾರಿ ಮಾಡಬೇಕು. ಜ್ವರ ಬಂದಾಗ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.ನಂತರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ.ಸಿ ಚಂದನ ಮಲೇರಿಯಾ, ಡೆಂಘೀ, ಚಿಕನ್ ಗುನ್ಯಾ ರೋಗದ ಲಕ್ಷಣಗಳು, ಚಿಕಿತ್ಸೆ, ಪತ್ತೆ ಹಚ್ಚುವಿಕೆ ಕುರಿತಂತೆ ಹಾಗೂ ಸ್ವಯಂ ರಕ್ಷಣಾ ವಿಧಾನಗಳ ಕುರಿತು ಮಕ್ಕಳಿಗೆ ಮಾಹಿತಿ ನೀಡಿದರು.
ಈ ವೇಳೆ ಮುಖ್ಯ ಶಿಕ್ಷಕ ಬಸವರಾಜ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮಹಾದೇವಮ್ಮ, ಸಹ ಶಿಕ್ಷಕರಾದ ಕೆ.ಎನ್ ಚಂದ್ರಮ್ಮ, ಪಿ.ಕೆ ಕುಮದ್ವತಿ, ಎಚ್.ಎನ್ ಪುಷ್ಪಲತಾ, ಆರ್. ವಿಜಯ, ಎಚ್.ಆರ್ ರವಿಕುಮಾರ್, ಜೆ.ಎಸ್ ರಾಜಮ್ಮ ಸೇರಿದಂತೆ ಶಾಲಾ ವಿಯಾರ್ಥಿಗಳು ಇದ್ದರು.ಐಐಟಿ ಪರೀಕ್ಷೆಯಲ್ಲಿ ಉತ್ತೀರ್ಣ ಕೆ.ಮೋನಿಕಾಗೆ ಸನ್ಮಾನ
ಕೆ.ಆರ್.ಪೇಟೆ:ಐಐಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಉಚಿತ ಪ್ರವೇಶ ಪಡೆದ ತಾಲೂಕಿನ ಕಾಳೇನಹಳ್ಳಿಯ ಕುಮಾರ್ ಅವರ ಪುತ್ರಿ ಕೆ.ಮೋನಿಕಾ ಅವರನ್ನು ಪ್ರಗತಿ ಶಾಲೆ ಪರವಾಗಿ ಸನ್ಮಾನಿಸಲಾಯಿತು.ಈ ವೇಳೆ ಶಾಲೆ ಅಧ್ಯಕ್ಷೆ ಟಿ.ಶೈಲಜಾ ಮಾತನಾಡಿ, ಕೆ.ಮೋನಿಕಾ ಐಐಟಿ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದು ಕಾಲೇಜು ಅಭ್ಯಾಸಕ್ಕೆ ಆಯ್ಕೆಯಾಗಿದ್ದಾರೆ. ಅವರಿಗೆ ಸರ್ಕಾರದಿಂದ ಎಲ್ಲಾ ಸೌಲಭ್ಯಗಳು ಉಚಿತವಾಗಿ ದೊರೆಯುತ್ತದೆ ಎಂದರು.ಗುಜರಾತಿನ ಗಾಂಧಿನಗರದ ಐಐಟಿ ಕಾಲೇಜಿಗೆ ಪ್ರಥಮ ಸುತ್ತಿನಲ್ಲಿ ಆಯ್ಕೆಯಾಗಿದ್ದಾರೆ. ಯಾವುದೇ ಸೌಲಭ್ಯಗಳಿಲ್ಲದ ಕಾಳೇನಹಳ್ಳಿಯ ಗ್ರಾಮೀಣ ಪ್ರತಿಭೆಗೆ ಉತ್ತಮ ಅವಕಾಶ ಸಿಕ್ಕಿರುವುದು ಅಭಿನಂದನಾರ್ಹ. ಇದು ಇತರ ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮುಂದುವರಿಸಲು ಪ್ರೇರಣೆಯಾಗಿದೆ ಎಂದರು.
ಪ್ರತಿಭಾನ್ವಿತ ವಿದ್ಯಾರ್ಥಿನಿ ಕೆ.ಮೋನಿಕಾಗೆ ಶಾಲು ಹೊದಿಸಿ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಲಾಯಿತು. ಜಿಲ್ಲಾ ಮಾಧ್ಯಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಕಾಳೇಗೌಡ, ಪ್ರಗತಿ ಶಾಲೆ ಸಿಇಒ ಎಂ.ಕೆ.ಮೋನಿಕಾ ಹಾಗೂ ಪೋಷಕರಾದ ಕುಮಾರ್, ರೇಖಾ ಭಾಗವಹಿಸಿದ್ದರು.