ಹಿರಿಯ ನಾಗರಿಕರಿಗೆ ಮಾನಸಿಕ ಒತ್ತಡವಾಗದಂತೆ ನೋಡಿಕೊಳ್ಳಿ: ಎಸ್.ಕೆ. ಜನಾರ್ದನ

KannadaprabhaNewsNetwork | Published : Oct 17, 2024 12:11 AM

ಸಾರಾಂಶ

ಹಿರಿಯ ನಾಗರಿಕರಿಗೆ ದೈಹಿಕ ಮಾನಸಿಕ ಒತ್ತಡ ಹಿಂಸೆಯಾಗದಂತೆ ನೋಡಿಕೊಳ್ಳುವ ಕಾಳಜಿ ಕಿರಿಯರಿಗೆ ಅತ್ಯವಶ್ಯವಾಗಿ ಬೇಕಾಗಿದೆ ಎಂದು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶ ಎಸ್.ಕೆ. ಜನಾರ್ದನ ಹೇಳಿದರು.

ಹಾನಗಲ್ಲ: ಹಿರಿಯ ನಾಗರಿಕರಿಗೆ ದೈಹಿಕ ಮಾನಸಿಕ ಒತ್ತಡ ಹಿಂಸೆಯಾಗದಂತೆ ನೋಡಿಕೊಳ್ಳುವ ಕಾಳಜಿ ಕಿರಿಯರಿಗೆ ಅತ್ಯವಶ್ಯವಾಗಿ ಬೇಕಾಗಿದೆ. ಅಲ್ಲದೆ ಹಿರಿಯರ ರಕ್ಷಣೆಗೆ ಇರುವ ಕಾನೂನುಗಳ ಮೂಲಕ ಅವರಿಗೆ ಗೌರವಯುತ ಜೀವನ ನೀಡುವಲ್ಲಿ ಯಶಸ್ವಿಯಾಗೋಣ ಎಂದು ಕಾನೂನು ಸೇವಾ ಸಮಿತಿ ಸದಸ್ಯ ಕಾರ್ಯದರ್ಶಿ, ಸಿವಿಲ್ ನ್ಯಾಯಾಧೀಶ ಎಸ್.ಕೆ. ಜನಾರ್ದನ ಹೇಳಿದರು.ಮಂಗಳವಾರ ಪಟ್ಟಣದ ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯವಾದಿಗಳ ಸಂಘ, ತಾಲೂಕು ಆರೋಗ್ಯ ಇಲಾಖೆ ಸಂಯುಕ್ತವಾಗಿ ಆಯೋಜಿಸಿದ ಹಿರಿಯ ನಾಗರಿಕರ ದಿನಾಚರಣೆ ಹಾಗೂ ವಿಶ್ವ ಮಾನಸಿಕ ಆರೋಗ್ಯ ದಿನ ಹಾಗೂ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ವೃದ್ಧಾಪ್ಯದಲ್ಲಿ ಮಕ್ಕಳು ಸರಿಯಾಗಿ ನೋಡಿಕೊಳ್ಳದಿದ್ದರೆ ಮಕ್ಕಳಿಗೆ ನೀಡಿದ ಆಸ್ತಿಯನ್ನು ಮರಳಿ ಪಡೆಯಲು ಹಿರಿಯರಿಗೆ ಅವಕಾಶವಿದೆ. ಇದಕ್ಕಾಗಿ ಅರ್ಜಿ ಸಲ್ಲಿಸಿದಲ್ಲಿ ೯೦ ದಿನಗಳಲ್ಲಿ ತಂದೆ-ತಾಯಿಗಳಿಗೆ ಪುನಃ ಆಸ್ತಿ ದೊರಕಿಸಿಕೊಡುವ ಅಧಿಕಾರ ಕಾನೂನಿನಲ್ಲಿದೆ. ಹಿರಿಯರನ್ನು ಗೌರವಿಸೋಣ. ಅದರಲ್ಲಿಯೇ ಕೌಟುಂಬಿಕ ಸ್ವಾಸ್ಥ್ಯವಿದೆ ಎಂದರು.ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ವಿಶ್ವನಾಥ ಪಾಟೀಲ ಮಾತನಾಡಿ, ದೈಹಿಕ-ಮಾನಸಿಕ ಆರೋಗ್ಯಕ್ಕಾಗಿ ನಿತ್ಯ ನಿರಂತರ ಚಟುವಟಿಕೆಯುಕ್ತವಾಗಿರಬೇಕು. ಅನಾರೋಗ್ಯವಿದ್ದಾಗ ಸರಿಯಾದ ಸಮಯಕ್ಕೆ ವೈದ್ಯರನ್ನು ಕಂಡು ಮಾರ್ಗದರ್ಶನ ಪಡೆಯಬೇಕು. ತಮಗಿರುವ ಅನಾರೋಗ್ಯದ ಬಗ್ಗೆ ಹಿರಿಯರು ಕುಟುಂಬದವರೊಂದಿಗೆ ಸಮಾಲೋಚಿಸಿ ಪರಿಹಾರ ಪಡೆಯಬೇಕು ಎಂದರು.ವಕೀಲರ ಸಂಘದ ಅಧ್ಯಕ್ಷ ಟಿ.ಬಿ. ಸವಣೂರ ಮಾತನಾಡಿ, ಇಂದು ವಿದ್ಯಾರ್ಥಿಗಳ ದಿನವೂ ಆಗಿದೆ. ಎಪಿಜೆ ಅಬ್ದುಲ್ ಕಲಾಂ ಅವರ ಜನ್ಮದಿನವೂ ಹೌದು. ಒಳ್ಳೆಯ ಶಿಕ್ಷಕರಿಂದ ಮಾತ್ರ ಒಳ್ಳೆಯ ಸಮಾಜ ಎಂಬ ಅಬ್ದುಲ್ ಕಲಾಂ ಅವರ ಆಶಯ ಈಡೇರಬೇಕಾಗಿದೆ. ಮಕ್ಕಳನ್ನು ಸಮಾಜಮುಖಿಯಾಗಿ ಬೆಳೆಸಲು ಮುಂದಾಗಬೇಕಾಗಿದೆ ಎಂದರು.ಶ್ರೀ ಕುಮಾರೇಶ್ವರ ಶಿಕ್ಷಣ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ. ರಾಘವೇಂದ್ರ ಮಾಡಳ್ಳಿ ಅಧ್ಯಕ್ಷತೆವಹಿಸಿದ್ದರು.

Share this article