ಮೈಕ್ರೋ ಫೈನಾನ್ಸ್‌, ಚಿಟ್‌ಫಂಡ್ಸ್‌ ಹಾವಳಿ ತಪ್ಪಿಸಿ

KannadaprabhaNewsNetwork |  
Published : Jan 25, 2025, 01:02 AM IST
ವಿಜಯಪುರದ ಜಿಲ್ಲಾ ಪಂಚಾಯತ ಸಭಾಭವನದಲ್ಲಿ ಮಹಿಳಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಮಾತನಾಡಿದರು. | Kannada Prabha

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಮೈಕ್ರೊ ಫೈನಾನ್ಸ್ ಹಾಗೂ ಚಿಟ್ ಫಂಡ್ಸ್ ಹಾವಳಿಗಳಿಂದ ಮಹಿಳೆಯರು ಅನುಭವಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಮೈಕ್ರೊ ಫೈನಾನ್ಸ್ ಹಾಗೂ ಚಿಟ್ ಫಂಡ್ಸ್ ಹಾವಳಿಗಳಿಂದ ಮಹಿಳೆಯರು ಅನುಭವಿಸುತ್ತಿರುವ ತೊಂದರೆಗಳನ್ನು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ.ನಾಗಲಕ್ಷ್ಮೀ ಚೌಧರಿ ಸೂಚಿಸಿದರು.

ನಗರದ ಜಿಪಂ ಸಭಾಭವನದಲ್ಲಿ ಮಹಿಳಾ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಂಡ್ಯ ಜಿಲ್ಲೆಯಂತೆ ವಿಜಯಪುರ ಜಿಲ್ಲೆಯಲ್ಲಿಯೂ ಕೆಲವು ಫೈನಾನ್ಸ್ ಕಂಪನಿಗಳಿಂದ ತಡರಾತ್ರಿವರೆಗೂ ಮನೆಗೆ ಬಂದು ಕಂತು ತುಂಬಲು ಹಾಗೂ ಸಾಲ ಮರುಪಾವತಿಸುವಂತೆ ಕಿರುಕುಳ ನೀಡುತ್ತಿರುವ ಕುರಿತು ಇಲ್ಲಿಯ ಮಹಿಳೆಯರು ದೂರು ನೀಡಿದ್ದಾರೆ. ಈ ಕುರಿತು ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯರ ಮೇಲೆ ನಡೆಯುವ ಲೈಂಗಿಕ ಕಿರುಕುಳ ತಡೆಯಲು ಎಲ್ಲ ಇಲಾಖೆಗಳಲ್ಲಿ ಆಂತರಿಕ ದೂರು ಸಮಿತಿ ರಚಿಸಲು ಶೀಘ್ರ ಕ್ರಮ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು. ಕಳೆದ ಎರಡು ದಿನಗಳಿಂದ ಗ್ರಾಮೀಣ ಪ್ರದೇಶಗಳಿಗೆ ಭೇಟಿ ನೀಡಿದಾಗ, ಮಹಿಳೆಯರು ಮಲ ಮೂತ್ರ ವಿಸರ್ಜನೆಗೆ ತೆರಳಿದ್ದಾಗ ಕೆಲವು ಕಿಡಗೇಡಿಗಳು ವಿಡಿಯೋ ಚಿತ್ರೀಕರಣ ಮಾಡಲು ಯತ್ನಿಸಿ ಕಿರುಕುಳ ನೀಡುತ್ತಿದ್ದಾರೆ ಎಂಬ ದೂರುಗಳು ಬಂದಿವೆ. ಈ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿ, ಸ್ಥಳಿಯ ಪೊಲೀಸ್ ಠಾಣಾಧಿಕಾರಿಗಳು ಮಹಿಳಾ ದೂರುದಾರರಿಗೆ ತಮ್ಮ ಸಹೋದರಿಯರಿಗೆ ತೊಂದರೆಯಾಗುತ್ತಿದೆ ಎಂದು ಸ್ಪಂದನೆ ನೀಡಬೇಕು ಎಂದರು.

ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ಗ್ರೂಪ್-ಡಿ ಮಹಿಳಾ ಸಿಬ್ಬಂದಿಗೆ ನಿಗದಿಪಡಿಸಿದ ವೇತನಕ್ಕೆ ಬದಲಾಗಿ ಅರ್ಧ ಸಂಬಳ ನೀಡುತ್ತಿದ್ದಾರೆ ಎಂದು ದೂರು ಬಂದಿದೆ. ಇಂತಹ ದೂರುಗಳು ಇರುವ ಟೆಂಡರ್ ಪಡೆದ ಏಜೆನ್ಸಿಗಳನ್ನು ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು. ಕೆಲವು ಗ್ರಾಮಗಳಲ್ಲ್ಲಿ ವಿಧವೆ, ಒಂಟಿ ಮಹಿಳೆಯರಿಗೆ ಪಡಿತರ ಚೀಟಿ ದೊರೆಯದೆ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಅಂತಹ ಮಹಿಳೆಯರಿಗೆ ಸೌಲಭ್ಯ ಕಲ್ಪಸಡಬೇಕು ಎಂದು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪನಿರ್ದೇಶಕರಿಗೆ ತಿಳಿಸಿದರು.

ಗ್ರಾಮಗಳಲ್ಲಿನ ಕೆಲವು ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟ ಮಾಡುತ್ತಿರುವುದಾಗಿ ಕೆಲವು ಮಹಿಳೆಯರು ನೀಡಿದ್ದಾರೆ. ಕಿರಾಣಿ ಅಂಗಡಿಗಳಲ್ಲಿ ಸುಲಭವಾಗಿ ಸಾರಾಯಿ ದೊರೆಯುವುದರಿಂದ ಗಂಡಂದಿರು ಕುಡಿದು ಬಂದು ಮಹಿಳೆಯರಿಗೆ ತೊಂದರೆ ಕೊಡುತ್ತಾರೆ ಎಂದು ಸಾಕಷ್ಟು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ. ಈ ಬಗ್ಗೆ ಸಂಬಂಧಿಸಿದ ಅಧಿಕಾರಿಗಳು ಕಿರಾಣಿ ಅಂಗಡಿಗಳಲ್ಲಿ ಸಾರಾಯಿ ಮಾರಾಟವಾಗದಂತೆ ಆಗಾಗ ಪರಿಶೀಲನೆ ನಡೆಸುವಂತೆ ಸೂಚಿಸಿದರು.

ಗ್ರಾಮೀಣ ಪ್ರದೇಶಗಳಲ್ಲಿ ಕೇವಲ ಪ್ರಾಥಮಿಕ ಶಾಲೆಗಳಿರುವದರಿಂದ ಮುಂದಿನ ವಿದ್ಯಾಭ್ಯಾಸಕ್ಕೆ ನಗರ ಪ್ರದೇಶಗಳಿಗೆ ಹೆಣ್ಣು ಮಕ್ಕಳನ್ನು ಕಳುಹಿಸಲು ಹೆಚ್ಚಿನ ತಾಯಂದಿರು ಹಿಂದೇಟು ಹಾಕುತ್ತಿದ್ದಾರೆ. ಪ್ರೌಢ ಹಾಗೂ ಕಾಲೇಜು ಶಿಕ್ಷಣಗಳನ್ನು ಗ್ರಾಮಗಳಲ್ಲಿಯೇ ನೀಡಲು ವ್ಯವಸ್ಥೆ ಮಾಡಿದಲ್ಲಿ ಬಾಲ್ಯ ವಿವಾಹ ಕಡಿಮೆಯಾಗಿ ಬಾಲಕಿಯರಿಗೆ ಉನ್ನತ ಶಿಕ್ಷಣ ಪಡೆದುಕೊಳ್ಳಲು ಅನುಕೂಲವಾಗಲಿದೆ ಎಂದು ಅಭಿಪ್ರಾಯ ಪಟ್ಟರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರು, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಶಂಕರ್ ಮಾರಿಹಾಳ, ಮುಖ್ಯ ಯೋಜನಾಧಿಕಾರಿ ನಿಂಗಪ್ಪ ಗೋಠೆ, ಜಿಪಂ ಉಪ ಕಾರ್ಯದರ್ಶಿ ವಿಜಯಕುಮಾರ, ಜಿಪಂ ಯೋಜಾನಾ ನಿರ್ದೇಶಕ ಬಿ.ಎಸ್.ರಾಠೋಡ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ಸಿ.ಕೆ.ಚೌಹಾಣ, ಸ್ಪೀಪ್ ರಾಯಭಾರಿ ರಾಜೇಶ ಪವಾರ ಮುಂತಾದವರು ಇದ್ದರು.--------

ಕೋಟ್‌....

ನರೇಗಾ ಯೋಜನೆಯಡಿ ಮಹಿಳೆಯರಿಗೆ ಉದ್ಯೋಗ ದೊರೆಯುತ್ತಿಲ್ಲವೆಂದು ದೂರು ಬಂದಿವೆ. ಶೇ.೫೦ರಷ್ಟು ಮಹಿಳೆಯರಿಗೆ ನರೇಗಾದಡಿ ಉದ್ಯೋಗ ನೀಡುವ ವ್ಯವಸ್ಥೆ ಆಗಬೇಕು. ಮತ್ತು ವೇತನವನ್ನು ಕೂಡಾ ಸರಿಯಾಗಿ ನೀಡದೆ ಸತಾಯಿಸುತ್ತಿರುವ ಬಗ್ಗೆ ದೂರು ಇರುವುದರಿಂದ ಸಂಬಂಧಿಸಿದ ಗ್ರಾಮ ಪಂಚಾಯಿತಿ ಅಧಿಕಾರಿಗಳು ಅಲ್ಲಿನ ಮಹಿಳೆಯರ ಸಮಸ್ಯೆ ನಿವಾರಿಸಬೇಕು.

- ಡಾ.ನಾಗಲಕ್ಷ್ಮೀ ಚೌಧರಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!