ಸುಸಜ್ಜಿತ ಪಾದಚಾರಿ ರಸ್ತೆ ನಿರ್ಮಾಣಕ್ಕೆ ಟೆಂಡರ್‌

KannadaprabhaNewsNetwork | Published : Jan 25, 2025 1:02 AM

ಸಾರಾಂಶ

ಚಿಂತಾಮಣಿ ನಗರದ ಪರಿಮಿತಿಯೊಳಗೆ ನಡೆಯುತ್ತಿದ್ದ ಅಪಘಾತಗಳಿಗೆ ಪಾದಚಾರಿ ಒತ್ತುವರಿಯೇ ಪ್ರಮುಖ ಕಾರಣವಾಗಿದೆ. ಅಧಿಕಾರಿಗಳು ಆಗಿಂದಾಗ್ಗೆ ವ್ಯಾಪಾರಸ್ಥರಿಗೆ ತಿಳಿವಳಿಕೆ ನೀಡಿ ವ್ಯಾಪಾರ, ವಹಿವಾಟುಗಳನ್ನು ನಿಮ್ಮ ಇತಿಮಿತಿಯೊಳಗೆ ಮಾಡಿಕೊಳ್ಳುವಂತೆ ಮನವರಿಕೆ ಮಾಡಿಕೊಟ್ಟಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ.

ಕನ್ನಡಪ್ರಭ ವಾರ್ತೆ ಚಿಂತಾಮಣಿ

ಶೇ. ೯೦ಕ್ಕಿಂತಲೂ ಹೆಚ್ಚು ಜನರು ಸ್ವಯಂ ಪ್ರೇರಿತರಾಗಿ ಪಾದಚಾರಿ ಒತ್ತುವರಿಯನ್ನು ತೆರವುಗೊಳಿಸಿದ್ದಾರೆ. ಯಾವುದೇ ತಾರತಮ್ಯವಿಲ್ಲದೆ ಜೋಡಿ ರಸ್ತೆ, ಪಿಸಿಆರ್ ಕಾಂಪ್ಲೆಕ್ಸ್‌ನಿಂದ ಕನ್ನಂಪಲ್ಲಿ ಓಟಿಕೆರೆಯವರೆಗೆ ಪಾದಚಾರಿ ಒತ್ತುವರಿಯನ್ನು ನಗರಸಭೆ ತೆರವುಗೊಳಿಸಿದ್ದು ಕೆಲವೇ ತಿಂಗಳುಗಳಲ್ಲಿ ಸುಸಜ್ಜಿತ ಪಾದಚಾರಿ ಮಾರ್ಗ ನಿರ್ಮಾಣಗೊಳ್ಳಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ. ಸುಧಾಕರ್ ನುಡಿದರು.

ನಗರಭಾಗದಲ್ಲಿ ವಾಹನಗಳನ್ನು ರಸ್ತೆ ಬದಿಯಲ್ಲಿ ಎಲ್ಲೆಂದರಲ್ಲಿ ವಾಹನಗಳನ್ನು ನಿಲ್ಲಿಸುವುದರಿಂದ ಹಾಗೂ ಪಾದಚಾರಿ ಮಾರ್ಗದಲ್ಲಿ ವ್ಯಾಪಾರಸ್ಥರು ವ್ಯಾಪಾರ ವಹಿವಾಟು ನಡೆಸುತ್ತಿದ್ದ ಕಾರಣ ಈ ತೆರವು ಕಾರ್ಯಾಚರಣೆ ಅನಿವಾರ್ಯವಾಗಿತ್ತು. ಚಿಂತಾಮಣಿ ನಗರವನ್ನು ಮಾದರಿ ನಗರವನ್ನಾಗಿಸುವುದೇ ನನ್ನ ಉದ್ದೇಶ ಎಂದು ಅವರು ಪತ್ರಕರ್ತರಿಗೆ ತಿಳಿಸಿದರು.

ಅಪಘಾತಕ್ಕೆ ಒತ್ತುವರಿ ಕಾರಣ

ಚಿಂತಾಮಣಿ ನಗರದ ಪರಿಮಿತಿಯೊಳಗೆ ನಡೆಯುತ್ತಿದ್ದ ಅಪಘಾತಗಳಿಗೆ ಪಾದಚಾರಿ ಒತ್ತುವರಿಯೇ ಪ್ರಮುಖ ಕಾರಣವಾಗಿದೆ. ಅಧಿಕಾರಿಗಳು ಆಗಿಂದಾಗ್ಗೆ ವ್ಯಾಪಾರಸ್ಥರಿಗೆ ತಿಳಿವಳಿಕೆ ನೀಡಿ ವ್ಯಾಪಾರ, ವಹಿವಾಟುಗಳನ್ನು ನಿಮ್ಮ ಇತಿಮಿತಿಯೊಳಗೆ ಮಾಡಿಕೊಳ್ಳುವಂತೆ ಮನವರಿಕೆ ಮಾಡಿಕೊಟ್ಟಿದ್ದರೆ ಈ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂದರು.

ಕೆಲವರು ತಮ್ಮ ಅಂಗಡಿ ಮುಂದೆ ಪಾದಚಾರಿ ರಸ್ತೆಯನ್ನು ಒತ್ತುವರಿ ಮಾಡಿಕೊಂಡಿರುವುದು ಸಹ ಈ ಅವ್ಯವಸ್ಥೆಗೆ ಕಾರಣ. ಅಂಗಡಿಗಳ ಮುಂಭಾಗದಲ್ಲಿ ನೆರಳು ಬೇಕಿದ್ದರೆ ಆಧುನಿಕ ವಿಧಾನದ ರೋಲಿಂಗ್ ಟಾರ್ಪಲ್‌ಗಳಿದ್ದು ಅದನ್ನು ಅಳವಡಿಸಿಕೊಳ್ಳಬಹುದು. ಆದರೆ ಕಬ್ಬಿಣದ ತಗಡುಗಳನ್ನು ಅಳವಡಿಸಿ ಅಂಗಡಿಗಳನ್ನು ವಿಸ್ತರಣೆ ಮಾಡಿಕೊಂಡಿರುವುದು ಸರಿಯಲ್ಲಿ ಎಂದು ಹೇಳಿದರು.

ಪಾದಚಾರಿ ರಸ್ತೆಗೆ ಟೆಂಡರ್‌

ಪಾದಚಾರಿ ರಸ್ತೆ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಪಾದಚಾರಿ ಮಾರ್ಗವನ್ನು ಆಧುನಿಕ ರೀತಿಯಲ್ಲಿ ಸುಸಜ್ಜಿತವಾಗಿ ನಿರ್ಮಾಣ ಮಾಡಲಾಗುವುದು. ಪಾದಚಾರಿ ಮಾರ್ಗ ಹಾಗೂ ೮.೨೫ ಕೋಟಿ ವೆಚ್ಚದ ಪಾದಚಾರಿ ಹಾಗೂ ರಸ್ತೆ ಅಭಿವೃದ್ಧಿಗೂ ಬೇರೆ ರೀತಿಯ ವ್ಯವಸ್ಥೆಯನ್ನು ಕಲ್ಪಿಸುವುದಾಗಿ ನುಡಿದರು.

ನಗರದ ಬೆಂಗಳೂರು ರಸ್ತೆಯ ಆಯ್ದ ಭಾಗ ಹಾಗೂ ಚೇಳೂರು ರಸ್ತೆಯ ಡಾಂಬರೀಕರಣವನ್ನು 5 ಕೋಟಿ ರು .ವೆಚ್ಚದಲ್ಲಿ ಮಾಡಲಾಗುವುದು. ಚಿಕ್ಕಬಳ್ಳಾಪುರದಿಂದ ಮುಳಬಾಗಿಲಿನವರೆಗಿನ (ಎಂ.ಜಿ.ರಸ್ತೆ) ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿರೊಂದಿಗೆ ಮಾತುಕತೆ ನಡೆಸಿದ್ದು ಕಾಮಗಾರಿ ಆರಂಭಗೊಂಡು ಶ್ರೀಘ ಮುಗಿಯಲಿದೆ ಎಂದರು.

Share this article