ಕನ್ನಡಪ್ರಭ ವಾರ್ತೆ ಮಂಗಳೂರು
ಬೆಂಜನಪದವಿನ ಅಕ್ಷಯಪಾತ್ರ ಮಂಗಳೂರು ಕ್ಯಾಂಪಸ್‌ನಲ್ಲಿ ಅಕ್ಷಯಪಾತ್ರ ಫೌಂಡೇಶನ್‌ನ ಹಸಿರು ಸಂಕಲ್ಪ ಉದ್ಘಾಟನೆ ಮತ್ತು ಇಸ್ಕಾನ್ ಮಂಗಳೂರಿನ ಗೋವರ್ಧನ ಹಿಲ್ಸ್‌ಕೇಂದ್ರದ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಯೋಜನೆಯ ಪ್ರಾರಂಭ ಕಾರ್ಯಕ್ರಮ ಜ.28ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದೆ.ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಇಸ್ಕಾನ್ ಕೊಡಿಯಾಲ್‌ಬೈಲ್ ಅಧ್ಯಕ್ಷರಾದ ಗುಣಕರ ರಾಮದಾಸ, ಕಾರ್ಯಕ್ರಮದಲ್ಲಿ ವಿಧಾನಸಭೆ ಸ್ಪೀಕರ್ ಯು.ಟಿ. ಖಾದರ್, ಶಾಸಕರಾದ ರಾಜೇಶ್ ನಾಯ್ಕ್, ವೇದವ್ಯಾಸ ಕಾಮತ್, ಗುರ್ಮೆ ಸುರೇಶ್ ಶೆಟ್ಟಿ, ಅಶೋಕ್ ಕುಮಾರ್ ರೈ, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿಪಂ ಸಿಇಒ ಡಾ.ಆನಂದ್ ಕೆ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ, ಉದ್ಯಮಿಗಳಾದ ಕನ್ಯಾನ ಸದಾಶಿವ ಶೆಟ್ಟಿ, ಶಶಿಧರ ಶೆಟ್ಟಿ ಬರೋಡ, ಪ್ರಮುಖರಾದ ಪ್ರತಾಪ್ ಮಧುಕರ್ ಕಾಮತ್, ಗೋಪಿನಾಥ ಕಾಮತ್, ಕಿಶೋರ್ ಆಳ್ವ, ಐಕಳಬಾವ ದೇವಿಪ್ರಸಾದ ಶೆಟ್ಟಿ, ಕರ್ನೂರು ಮೋಹನ ರೈ, ಪದ್ಮರಾಜ್ ಪೂಜಾರಿ ಭಾಗವಹಿಸುವರು ಎಂದು ತಿಳಿಸಿದರು.
ಪ್ರತಿದಿನ 20,000 ಮಕ್ಕಳಿಗೆ ಪೌಷ್ಠಿಕ ಊಟವನ್ನು ಒದಗಿಸುತ್ತಿರುವ ಅಕ್ಷಯಪಾತ್ರ ಫೌಂಡೇಶನ್ ಒಂದು ಕೋಟಿ ರು. ಮೌಲ್ಯದ ಹಸಿರು ಸಂಕಲ್ಪವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಇದರಲ್ಲಿ ಶೂನ್ಯ ರಾಸಾಯನಿಕ ಜೈವಿಕ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಸ್ಥಾಪನೆ ಮತ್ತು ಪರಿಸರ ಸ್ನೇಹಿ ಸಸ್ಯಾರೋಪಣಾ ಅಭಿಯಾನ ಸೇರಿವೆ. ಪ್ರತಿದಿನ 50 ಲಕ್ಷ ಲೀಟರ್ ತ್ಯಾಜ್ಯ ನೀರನ್ನು ಸಂಸ್ಕರಣೆ ಮಾಡಿ ಉದ್ಯಾನವನ ಸಹಿತ ಇತರ ಉದ್ದೇಶಕ್ಕೆ ಬಳಸುವ ಗುರಿ ಹೊಂದಲಾಗಿದೆ ಎಂದು ಹೇಳಿದರು.ಇಸ್ಕಾನ್ ಮಂಗಳೂರು ತನ್ನ ಗೋವರ್ಧನ ಹಿಲ್ಸ್ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ಕೇಂದ್ರವನ್ನು ಅಧಿಕೃತವಾಗಿ ಪ್ರಾರಂಭಿಸಲಿದ್ದು, ಸಮಗ್ರ ಶಿಕ್ಷಣ, ಕೌಶಲ್ಯ ಅಭಿವೃದ್ಧಿ, ಮತ್ತು ಆಧ್ಯಾತ್ಮಿಕ ಕಲ್ಯಾಣವನ್ನು ಉತ್ತೇಜಿಸುವ ದೃಷ್ಟಿಯಿಂದ ಈ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಈ ಕೇಂದ್ರದಲ್ಲಿ ದೇವಸ್ಥಾನ, ಯೋಗ ಕೇಂದ್ರ, ಶಾಲೆ, ಗುರುಕುಲ ಸ್ಥಾಪನೆಗೊಳ್ಳಲಿದೆ ಎಂದು ಅವರು ಹೇಳಿದರು.
ಇಸ್ಕಾನ್ ಮಂಗಳೂರು ಉಪಾಧ್ಯಕ್ಷ ಸನಂದನ ದಾಸ, ಮಾಧ್ಯಮ ಸಂಯೋಜಕ ಸುಂದರ ಗೌರದಾಸ, ಮಾಧ್ಯಮ ಕನ್ಸಲ್ಟೆಂಟ್ ಎಂ.ವಿ. ಮಲ್ಯ ಇದ್ದರು.