ರಾಮನಗರ: ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣ ಅವ್ವೇರಹಳ್ಳಿ ರೇವಣಸಿದ್ಧೇಶ್ವರ ಮಹಾರಥೋತ್ಸವ ಗುರುವಾರ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿಸಲಾಯಿತು.
ದಾಸೋಹ ಮಠದ ಶ್ರೀ ರಾಜಶೇಖರ ಶಿವಾಚಾರ್ಯ ಸ್ವಾಮೀಜಿ, ಮಾಜಿ ಶಾಸಕ ಕೆ. ರಾಜು, ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ, ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ.ರುದ್ರೇಶ್, ಇಒ ಸುಮಿತ್ರ, ಅಧಿಕಾರಿ ಯೇಸುರಾಜ್ ಮತ್ತಿತರ ಗಣ್ಯರ ಸಮ್ಮುಖದಲ್ಲಿ ರಥೋತ್ಸವಕ್ಕೆ ಅದ್ದೂರಿ ಚಾಲನೆ ನೀಡಿದರು.
ರಥೋತ್ಸವಕ್ಕೆ ಮಂಡ್ಯ, ಮೈಸೂರು, ಚಾಮರಾಜನಗರ, ತುಮಕೂರು, ಬೆಂಗಳೂರು ಮುಂತಾದ ಕಡೆಯಿಂದ ಆಗಮಿಸಿದ್ದ ಭಕ್ತಾದಿಗಳು ರಥಕ್ಕೆ ಹೂ, ಹಣ್ಣು, ಬಾಳೆಹಣ್ಣು, ಜವನ ಎಸೆದು, ಜೈ ರೇವಣಸಿದ್ದೇಶ್ವರ, ಜೈ ಜೈ ರೇವಣಸಿದ್ದೇಶ್ವರ ಎಂದು ಜೈಕಾರ ಹಾಕುತ್ತಾ ಜನಪದ ಕಲಾ ಮೇಳದೊಡನೆ ಹೆಜ್ಜೆ ಹಾಕಿ ರಥ ಎಳೆದು ಕೃತಾರ್ಥರಾದರು.ಅಗ್ನಿಕೊಂಡ: ಗುರುವಾರ ಬೆಳಿಗ್ಗೆ ಬಸವೇಶ್ವರ ಅಗ್ನಿಕೊಂಡ ಮಹೋತ್ಸವ ಯಾವುದೇ ಅಡೆತಡೆ ಇಲ್ಲದೆ ಸುಗಮವಾಗಿ ನಡೆಯಿತು. ಅರ್ಚಕ ರುದ್ರೇಶ್ ಬಸವೇಶ್ವರನ ಹಲಗೆ ದೇವರು ಹಿಡಿದು ಅಗ್ನಿಕೊಂಡ ಪ್ರವೇಶಿಸಿದರು.
ರಥೋತ್ಸವದಲ್ಲಿ ವೀರಗಾಸೆ, ನಂದಿ ದ್ವಜ, ಜನಪದ ಕಲಾತಂಡಗಳ ಮೆರುಗು ಜಾತ್ರೆಗೆ ಮತ್ತಷ್ಟು ಕಳೆಕಟ್ಟಿತು. ಧಾರ್ಮಿಕ ದತ್ತಿ ಇಲಾಖೆ ಮುನ್ನೆಚ್ಚರಿಕೆ ವಹಿಸಿ ಕುಡಿಯುವ ನೀರು, ಆ್ಯಂಬುಲೆನ್ಸ್, ಅಗ್ನಿಶಾಮಕ ವಾಹನ, ವೈದ್ಯರು ಸೇವೆ ಒದಗಿಸಲಾಗಿತ್ತು. ರಾಮನಗರ ಗ್ರಾಮಾಂತರ ವೃತ್ತ ನಿರೀಕ್ಷಕ ರಮೇಶ್, ನಗರ ವೃತ ನಿರೀಕ್ಷಕ ಲಕ್ಷ್ಮಯ್ಯ ನೇತೃತ್ವದಲ್ಲಿ ಸೂಕ್ತ ಪೋಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ರೇವಣಸಿದ್ದೇಶ್ವರಸ್ವಾಮಿ ಅಭಿವೃಧ್ಧಿ ಸೇವಾ ಟ್ರಸ್ಟ್ ಮತ್ತು ಶ್ರೀ ರೇವಣಸಿದ್ದೇಶ್ವರ ಬೆಟ್ಟದ ದಾಸೋಹ ಮಠದಲ್ಲಿ ಬಸವಲಿಂಗರಾಜ ಸ್ವಾಮೀಜಿ, ರಾಜಶೇಖರ ಶಿವಾಚಾರ್ಯ ಸ್ವಾಮೀಜಿ ಹಾಗೂ ಕೆ.ಜಿ. ಹೊಸಹಳ್ಳಿ, ಅವ್ವೇರಹಳ್ಳಿ, ಗ್ರಾಮಸ್ಥರಿಂದ ದಾಸೋಹ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಭಕ್ತಾಧಿಗಳು ಮಜ್ಜಿಗೆ, ಪಾನಕ ಕೋಸಂಬರಿ ವಿತರಿಸಿದರು.
ರಾಮನಗರ ತಾಲೂಕಿನ ಅವ್ವೇರಹಳ್ಳಿ ರೇವಣಸಿದ್ದೇಶ್ವರ ಮಹಾ ರಥೋತ್ಸವ ಸಹಸ್ರಾರು ಭಕ್ತಾದಿಗಳ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.