ಕನ್ನಡಪ್ರಭ ವಾರ್ತೆ ಮಂಡ್ಯ
ಯಾವುದೇ ಪ್ರಶಸ್ತಿಗಳು ವ್ಯಕ್ತಿಗೆ ಸಿಗುವಂತಹದ್ದಲ್ಲ, ಅವರು ಮಾಡಿರುವ ಸಾಧನೆ ಮತ್ತು ವ್ಯಕ್ತಿತ್ವಕ್ಕೆ ಸಿಗುವಂತದ್ದು. ಪ್ರಶಸ್ತಿಗಳು ಜವಾಬ್ದಾರಿಯನ್ನು ಹೆಚ್ಚಿಸುವುದರ ಜೊತೆಗೆ ಇನ್ನಷ್ಟು ಸಾಧನೆ ಮಾಡುವುದಕ್ಕೆ ಉತ್ತೇಜನ ನೀಡುತ್ತವೆ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಹೇಳಿದರು.ನಗರದ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘದ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು.
ಪ್ರಶಸ್ತಿಗಳನ್ನು ಪಡೆದಾಕ್ಷಣ ಅಲ್ಲಿಗೇ ತಮ್ಮ ಜವಾಬ್ದಾರಿ, ಕೆಲಸ ಮುಗಿಯಿತು ಎಂದಲ್ಲ. ಅದರಿಂದ ಪ್ರೇರಣೆ ಪಡೆದು ಇನ್ನಷ್ಟು ಉತ್ತಮ ಕೆಲಸಗಳಿಗೆ ಮುಂದಾಗಬೇಕು. ಪ್ರಶಸ್ತಿಗಳು ವ್ಯಕ್ತಿಗೆ ಸಮಾಜದಲ್ಲಿ ಗೌರವ- ಘನತೆಯನ್ನು ಹೆಚ್ಚಿಸುತ್ತವೆ ಎಂದು ಹೇಳಿದರು.ಮಾತೃಭಾಷೆಯನ್ನು ಮರೆತರೆ ತಾಯಿಯನ್ನು ಮರೆತಂತೆ. ಹಾಗಾಗಿ ಪ್ರತಿಯೊಬ್ಬರೂ ಕನ್ನಡ ಪ್ರಜ್ಞೆಯನ್ನು ಸದಾಕಾಲ ಜಾಗೃತಗೊಳಿಸಿಕೊಂಡು ಬದುಕಬೇಕು. ಬೇರೆ ಭಾಷೆಗಳಲ್ಲಿ ಎಷ್ಟೇ ಪರಿಣತಿಯನ್ನು ಸಾಧಿಸಿದರೂ ಪರಿಪೂರ್ಣ ವ್ಯಕ್ತಿತ್ವ, ಭಾವನೆ ವ್ಯಕ್ತಪಡಿಸಲು ಮಾತೃಭಾಷೆಯಿಂದ ಮಾತ್ರ ಸಾಧ್ಯ. ಅದರಿರಂದ ಮಾತ್ರ ವ್ಯಕ್ತಿಯ ಜೀವನ ಪರಿಪೂರ್ಣವಾಗುತ್ತದೆ ಎಂದರು.
ಪ್ರತಿ ಮನೆಯಲ್ಲಿ ಕನ್ನಡ ಜ್ಯೋತಿ ಬೆಳಗಬೇಕು. ಅದು ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗಬಾರದು. ಇಂಗ್ಲೀಷ್ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದು ತಪ್ಪಲ್ಲ. ನಾವು ಯಾವುದೇ ಭಾಷೆಯನ್ನು ದ್ವೇಷಿಸಬಾರದು. ಬೇರೆ ಭಾಷೆಗಳನ್ನು ಕಲಿಯುವುದರೊಂದಿಗೆ ಕನ್ನಡ ಭಾಷೆಯನ್ನು ಮಕ್ಕಳಿಗೆ ಕಲಿಸುವುದು ಅತಿ ಮುಖ್ಯ. ಎರಡೂವರೆ ಸಾವಿರ ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡ ಭಾಷೆ, ಸಂಸ್ಕೃತಿ, ಪರಂಪರೆ, ಭಾಷೆಯ ಬೆಳವಣಿಗೆಯನ್ನು ಮಕ್ಕಳಿಗೆ ತಿಳಿಸಿಕೊಡುವ ಮೂಲಕ ಕನ್ನಡದ ಬಗ್ಗೆ ಪ್ರೀತಿಯನ್ನು ಅವರ ಮನಸ್ಸಿನಲ್ಲಿ ಹುಟ್ಟಿಸಬೇಕು ಎಂದು ಹೇಳಿದರು.ಕನ್ನಡವನ್ನು ಹೆಚ್ಚು ಹೆಚ್ಚು ಬಳಸಿದಷ್ಟು ಭಾಷೆ ಬೆಳವಣಿಗೆ ಹೊಂದುತ್ತದೆ. ಕನ್ನಡ ಭಾಷೆಯನ್ನು ತಾಂತ್ರಿಕವಾಗಿ ಬೆಳೆಸುವಲ್ಲಿ ನಾವು ಸೋತಿದ್ದೇವೆ. ಈ ಬಗ್ಗೆ ಎಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಭಾಷೆಯನ್ನು ಎಲ್ಲರೂ ಬಳಸುವುದರೊಂದಿಗೆ ಅದರ ಜೀವಂತಿಕೆಯನ್ನು ಕಾಪಾಡಿಕೊಂಡು ಶ್ರೀಮಂತಿಕೆಯನ್ನು ಹೆಚ್ಚಿಸುವುದಕ್ಕೆ ಎಲ್ಲರೂ ಸಂಕಲ್ಪ ಮಾಡಬೇಕಿದೆ ಎಂದು ನುಡಿದರು.
ಕನ್ನಡ ರಾಜ್ಯೋತ್ಸವ ಪ್ರಶಸ್ತಿ ರಾಜ್ಯಮಟ್ಟದಲ್ಲಿ ಮಾತ್ರ ನೀಡುವಂತಹದ್ದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ರಾಜ್ಯೋತ್ಸವ ಪ್ರಶಸ್ತಿ ನೀಡುವುದಿಲ್ಲ. ಕೆಲವೊಂದು ಜಿಲ್ಲೆಗಳು ಹಿಂದಿನಿಂದಲೂ ಸಂಪ್ರದಾಯಬದ್ಧವಾಗಿ ನಡೆಸಿಕೊಂಡು ಬಂದಿರುವುದರಿಂದ ಅದನ್ನು ನಾವು ಮುನ್ನಡೆಸುತ್ತಿದ್ದೇವೆ. ಪ್ರಶಸ್ತಿ ನೀಡುವಾಗ ಕೆಲವೊಂದು ವ್ಯತ್ಯಾಸಗಳಾಗಿರುವುದನ್ನು ಪ್ರೊ.ಜಯಪ್ರಕಾಶಗೌಡರು ನಮ್ಮ ಗಮನಕ್ಕೆ ತಂದಿದ್ದು, ಮುಂದಿನ ವರ್ಷದಿಂದ ಇನ್ನೂ ವ್ಯವಸ್ಥಿತ ರೀತಿಯಲ್ಲಿ ನಡೆಸುವ ಭರವಸೆ ನೀಡಿದರು.ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ಮಾತನಾಡಿ, ಕರ್ನಾಟಕ ಸಂಘದಿಂದ ಒಂದಲ್ಲ ಒಂದು ಸಾಂಸ್ಕೃತಿಕ ಚಟುವಟಿಕೆಗಳು ಪ್ರತಿ ತಿಂಗಳು ನಡೆಯುತ್ತಿರುತ್ತವೆ. ಉತ್ತಮವಾದ ಕಾರ್ಯಕ್ರಮಗಳನ್ನು ಆಯೋಜಿಸುವಲ್ಲಿ ಸದಾ ಮುಂದಿದೆ. ಪ್ರೊ.ಬಿ.ಜಯಪ್ರಕಾಶಗೌಡರ ಆಶಯದಂತೆ ರೈತ ಸಭಾಂಗಣದ ಮೂಲ ವಿನ್ಯಾಸಕ್ಕೆ ಧಕ್ಕೆಯಾಗದಂತೆ ನವೀಕರಣ ಮಾಡುವುದಕ್ಕೆ ಈಗಾಗಲೇ ೫ ಕೋಟಿ ರು. ಬಿಡುಗಡೆ ಪ್ರಕ್ರಿಯೆಯಲ್ಲಿದೆ. ಅವರು ಮಾಡುವ ಯಾವುದೇ ಕೆಲಸಗಳಿಗೂ ನಮ್ಮ ಪರಿಪೂರ್ಣ ಬೆಂಬಲವಿರುವುದಾಗಿ ಹೇಳಿದರು.
ಕರ್ನಾಟಕ ಸಂಘದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿರುವವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು. ವೇದಿಕೆಯಲ್ಲಿ ಕೊಮ್ಮೇರಹಳ್ಳಿ ವಿಶ್ವಮಾನವ ಕ್ಷೇತ್ರದ ಶ್ರೀ ಪುರುಷೋತ್ತಮಾನಂದನಾಥ ಸ್ವಾಮೀಜಿ, ಮಾಜಿ ಶಾಸಕ ಎಂ.ಶ್ರೀನಿವಾಸ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಬಿ.ಜಯಪ್ರಕಾಶಗೌಡ, ಯಶೋಧರಾ ದಾಸಪ್ಪ ಇದ್ದರು.