ಮುಂಡರಗಿ: ಇಲ್ಲಿನ ಕಲಾ ಶಿಕ್ಷಣ- ಸಂಸ್ಕೃತಿ ಪ್ರತಿಷ್ಠಾನದ 2025ರ ಸಾಹಿತ್ಯ ಗೌರವ ಪ್ರಶಸ್ತಿ ಹಾಗೂ ಪುಸ್ತಕ ಪ್ರಶಸ್ತಿ ಪ್ರಕಟಿಸಿದ್ದು, ವಿಜಯಪುರದ ಮಕ್ಕಳ ಸಾಹಿತಿ ಜಂಬೂನಾಥ ಕಂಚ್ಯಾಣಿ ಅವರಿಗೆ ಗೌರವ ಪ್ರಶಸ್ತಿ, ಮಸ್ಕಿಯ ಸಾಹಿತಿ ಗುಂಡೂರಾವ್ ದೇಸಾಯಿ ಅವರು ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಡಾ. ನಿಂಗು ಸೊಲಗಿ ತಿಳಿಸಿದ್ದಾರೆ. ಸಾಹಿತ್ಯ ಹಾಗೂ ಶಿಕ್ಷಣ ಸಂವರ್ಧನೆಯಲ್ಲಿ ಸಕ್ರಿಯವಾಗಿದ್ದ ಮುಂಡರಗಿಯ ಶಿಕ್ಷಕಿ ಕಲಾವತಿ ನಿಂಗು ಸೊಲಗಿಯವರ ಸ್ಮರಣೆಯಲ್ಲಿ 2023ರಿಂದ ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಾ ಬಂದಿದ್ದು, ಗೌರವ ಪ್ರಶಸ್ತಿ ₹10 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದ್ದರೆ, ಪುಸ್ತಕ ಪ್ರಶಸ್ತಿಯು ₹5 ಸಾವಿರ ನಗದು ಹಾಗೂ ಪ್ರಶಸ್ತಿ ಫಲಕ ನೀಡಿ ಗೌರವಿಸಲಾಗುತ್ತಿದೆ.
ಅದೇ ರೀತಿ ಪುಸ್ತಕ ಸಾಹಿತ್ಯ ಪ್ರಶಸ್ತಿಗೆ ಆಯ್ಕೆಯಾಗಿರುವ ಗುಂಡೂರಾವ್ ದೇಸಾಯಿಯವರ ಕಳೆದ ಒಂದೂವರೆ ದಶಕದಿಂದ ಮಕ್ಕಳ ಸಾಹಿತ್ಯ ರಚನೆಯಲ್ಲಿ ತುಂಬಾ ಪ್ರಯೋಗಶೀಲರಾಗಿದ್ದು, ಹಲವು ಕೃತಿಗಳನ್ನು ರಚಿಸಿದ್ದಾರೆ. 2025 ಮಕ್ಕಳಿಗಾಗಿ ಪ್ರಕಟಗೊಂಡ ಇವರ ''ಚಾರ್ಲಿ ಚಾರ್ಲಿ ವ್ಹೇರ್ ಆರ್ ಯು'' ಮಕ್ಕಳ ಕಥಾ ಕೃತಿ ವಿಭಿನ್ನವಾಗಿದ್ದು, ಈ ಕೃತಿಯು ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಶಂಕರ ಹಲಗತ್ತಿ, ಚಂದ್ರಗೌಡ ಕುಲಕರ್ಣಿ, ವಿವೇಕಾನಂದಗೌಡ ಪಾಟೀಲ, ಬಸವರಾಜ ಗಾರ್ಗಿ, ಮಲ್ಲಿಕಾರ್ಜುನ ಸೊಲಗಿ, ಡಾ. ನಿಂಗು ಸೊಲಗಿ ಇದ್ದರು.ಏ. 25ರಂದು ಧಾರವಾಡ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಜರುಗಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.