ಭಟ್ಕಳದಲ್ಲಿ ವೈದ್ಯರಿಗೆ ಆಧುನಿಕ ಚಿಕಿತ್ಸಾ ವಿಧಾನದ ಅರಿವು ಕಾರ್ಯಕ್ರಮ

KannadaprabhaNewsNetwork |  
Published : Oct 30, 2026, 02:45 AM IST
ಭಟ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಿಗೆ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಿತು. | Kannada Prabha

ಸಾರಾಂಶ

ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ವೈದ್ಯರು ತಮ್ಮ ವೃತ್ತಿಪರ ಜ್ಞಾನವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವ ಅಗತ್ಯವನ್ನು ಈ ಕಾರ್ಯಾಗಾರ ಒತ್ತಿ ಹೇಳಿತು.

ಭಟ್ಕಳ: ವೈದ್ಯಕೀಯ ಕ್ಷೇತ್ರದ ಆಧುನಿಕ ಚಿಕಿತ್ಸಾ ವಿಧಾನಗಳ ಕುರಿತು ವೈದ್ಯರಿಗೆ ಅರಿವು ಮೂಡಿಸಲು ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರ ಹಾಗೂ ಭಾರತೀಯ ವೈದ್ಯಕೀಯ ಸಂಘದ(ಐಎಂಎ) ಸ್ಥಳೀಯ ಶಾಖೆಯ ಸಹಯೋಗದಲ್ಲಿ ಸರ್ಕಾರಿ ಆಸ್ಪತ್ರೆಯಲ್ಲಿ ನಿರಂತರ ವೈದ್ಯಕೀಯ ಶಿಕ್ಷಣ(ಸಿಎಂಇ) ಕಾರ್ಯಕ್ರಮ ನಡೆಯಿತು.

ಭಾರತೀಯ ವೈದ್ಯಕೀಯ ಸಂಘದ ಶಾಖೆಯ ಅಧ್ಯಕ್ಷ ಡಾ. ಅಬ್ದುಲ್ ಖಾಧಿರ್ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಮಂಗಳೂರಿನ ಎ.ಜೆ. ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ಹೃದಯ, ಎದೆ ಹಾಗೂ ರಕ್ತನಾಳ ಶಸ್ತ್ರಚಿಕಿತ್ಸಾ ತಜ್ಞ ಡಾ. ಸಂಭ್ರಮ್ ಶೆಟ್ಟಿ ಅವರು ಹೃದಯ, ಎದೆ ಮತ್ತು ರಕ್ತನಾಳ ಶಸ್ತ್ರಚಿಕಿತ್ಸೆಯಲ್ಲಿನ ಇತ್ತೀಚಿನ ಚಿಕಿತ್ಸಾ ವಿಧಾನಗಳ ಕುರಿತು ಉಪನ್ಯಾಸ ನೀಡಿದರು.

ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನ, ಶಸ್ತ್ರಚಿಕಿತ್ಸೆಯ ನಂತರ ರೋಗಿಗಳ ಆರೈಕೆ ಹಾಗೂ ಈ ಕ್ಷೇತ್ರದಲ್ಲಿ ಮೂಡಿಬರುತ್ತಿರುವ ಹೊಸ ವೈದ್ಯಕೀಯ ಬೆಳವಣಿಗೆಗಳ ಬಗ್ಗೆ ವಿವರಿಸಿದರು.

ಆಸ್ಪತ್ರೆಯ ಸಲಹೆಗಾರ ಜಠರ ರೋಗ ಮತ್ತು ಯಕೃತ್ತಿನ ತಜ್ಞ ಡಾ. ರಾಘವೇಂದ್ರ ಪ್ರಸಾದ ಅವರು ಕೆರಳಿಸುವ ಕರುಳಿನ ಸಹಲಕ್ಷಣಗಳ (ಇರಿಟೇಬಲ್ ಬವೆಲ್ ಸಿಂಡ್ರೋಮ್) ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ವೈದ್ಯಕೀಯ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳಿಗೆ ಅನುಗುಣವಾಗಿ ವೈದ್ಯರು ತಮ್ಮ ವೃತ್ತಿಪರ ಜ್ಞಾನವನ್ನು ನಿರಂತರವಾಗಿ ವೃದ್ಧಿಸಿಕೊಳ್ಳುವ ಅಗತ್ಯವನ್ನು ಈ ಕಾರ್ಯಾಗಾರ ಒತ್ತಿ ಹೇಳಿತು.

ಈ ಸಂದರ್ಭದಲ್ಲಿ ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ಹತ್ತು ವರ್ಷ ಸೇವೆ ಸಲ್ಲಿಸಿ, ಪ್ರಸ್ತುತ ಕುಮಟಾ ತಾಲೂಕು ಆಸ್ಪತ್ರೆಗೆ ವರ್ಗಾವಣೆಯಾಗಿರುವ ಡಾ. ಲಕ್ಷ್ಮೀಶ ನಾಯ್ಕ ಅವರನ್ನು ಸನ್ಮಾನಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘದ ಭಟ್ಕಳ ಶಾಖೆಯ ಕಾರ್ಯದರ್ಶಿ ಜನಾರ್ದನ ಮೊಗೇರ ಹಾಗೂ ಉತ್ತರ ಕನ್ನಡ ಜಿಲ್ಲಾ ಸರ್ಕಾರಿ ವೈದ್ಯಾಧಿಕಾರಿಗಳ ಸಂಘದ ಅಧ್ಯಕ್ಷೆ ಡಾ. ಸವಿತಾ ಕಾಮತ್ ಉಪಸ್ಥಿತರಿದ್ದರು. ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಅರುಣ್ ಕುಮಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಾಲೂಕು ವ್ಯಾಪ್ತಿಯ ವಿವಿಧ ವೈದ್ಯರು ಕಾರ್ಯಾಗಾರದಲ್ಲಿ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ರೇಪ್‌ ಮಾಡಿದ್ದಕ್ಕಾಗಿ ಅಪಹರಣ ಮೂಲಕ ಪ್ರತೀಕಾರ
ಉತ್ತರ ಪಾಲಿಕೆಯಲ್ಲಿ 18 ಜಂಕ್ಷನ್‌ ಗುರುತು