ಕನ್ನಡಪ್ರಭ ವಾರ್ತೆ ಬೇಲೂರುಯುವ ಜನಾಂಗ ಎಚ್ಚೆತ್ತುಕೊಳ್ಳಲು ಏಡ್ಸ್ ಬಗ್ಗೆ ಹೆಚ್ಚು ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎಂದು ಹಿರಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಶ್ರೀಮತಿ ಸಲ್ಮಾ ಹೇಳಿದರು.ಪಟ್ಟಣದ ಸರ್ಕಾರಿ ಆಸ್ಪತ್ರೆ ಮುಂಭಾಗದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಜಾಗೃತಿ ಜಾಥಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಯಾವುದೇ ರೋಗವು ಮಾರಕವಾಗಿರುವುದಿಲ್ಲ. ಅದರ ಬಗ್ಗೆ ಹೆಚ್ಚಿನ ಜಾಗೃತಿ ಇರಬೇಕು. ಎಚ್‌ಐವಿ ರೋಗವು ಸ್ಪರ್ಶದಿಂದಾಗಲಿ ಊಟ ಮಾಡುವುದರಿಂದಾಗಲಿ ಬರುವುದಿಲ್ಲ. ಅದರ ಬಗ್ಗೆ ಸುರಕ್ಷಿತ ಜೀವನ ಅನುಸರಿಸುವುದರಿಂದ ಆರೋಗ್ಯಕರ ಜೀವನ ನಡೆಸಬಹುದು. ಇದಲ್ಲದೆ ಏಡ್ಸ್ ಪೀಡಿತರ ಮೇಲೆ ಭೇದಭಾವ ತೋರುವುದು ಕಾನೂನಾತ್ಮಕ ಅಪರಾಧ. ಯಾರಿಗಾದರೂ ಎಚ್‌ಐವಿ ಪಾಸಿಟಿವ್ ಇದ್ದರೆ ಅವರ ಬಗ್ಗೆ ಅಸಡ್ಡೆ ತೋರದೆ ಅವರಿಗೆ ನಮ್ಮಂತೆ ಬದುಕುವ ಸಾಧ್ಯತೆ ಇದೆ .ಅಂತಹವರಿಗೆ ಮಾನಸಿಕವಾಗಿ ದೈರ್ಯ ತುಂಬುವುದು ಎಲ್ಲರ ಕರ್ತವ್ಯ ಎಂದರು.ಆಡಳಿತ ವೈದ್ಯಾಧಿಕಾರಿ ಡಾ. ಜಯಲಕ್ಷ್ಮೀ ನಾಯಕ್ ಮಾತನಾಡಿ, ಏಡ್ಸ್ ಬಗ್ಗೆ ಜನರಿಗೆ ಇರುವ ತಪ್ಪು ಕಲ್ಪನೆಗಳು ಮತ್ತು ಭಯಗಳು ಈಗಲೂ ದೊಡ್ಡ ಸವಾಲಾಗಿವೆ. ಎಚ್‌ಐವಿ ರೋಗಿಗಳು ಸಾಮಾನ್ಯ ಜೀವನ ನಡೆಸಬಹುದು, ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಪಡೆದರೆ ಅವರು ಆರೋಗ್ಯಕರ ಬದುಕನ್ನು ಮುಂದುವರಿಸಬಹುದಾಗಿದೆ. ಆದಾಗ್ಯೂ ಸಮಾಜದ ಬೆಂಬಲ, ಸಹಾನುಭೂತಿ ಮತ್ತು ಸರಿಯಾದ ಮಾಹಿತಿ ಅವರಿಗಾಗಿ ಅತ್ಯಂತ ಅಗತ್ಯ ಎಂದರು. ಲಯನ್ಸ್ ಕ್ಲಬ್ ಅಧ್ಯಕ್ಷೆ ತಾರಾಮಣಿ ಸುರೇಶ್ ಹಾಗೂ ಕಾವೇರಿ ಕ್ಲಿನಿಕ್ ವೈದ್ಯಾಧಿಕಾರಿ ಡಾ . ಚಂದ್ರಮೌಳಿ ಮಾತನಾಡಿದರು. ಈ ವೇಳೆ ತಾಲೂಕು ಆರೋಗ್ಯ ಅಧಿಕಾರಿ ಡಾ. ವಿಜಯ್, ಲಯನ್ಸ್ ಸಂಸ್ಥೆ ಅಧ್ಯಕ್ಷೆ ತಾರಾಮಣಿ ಸುರೇಶ್, ವಕೀಲರ ಸಂಘದ ಅಧ್ಯಕ್ಷ ಕೆ ಎಲ್ ನಟರಾಜ್,ಕಾರ್ಯದರ್ಶಿ ಸುನೀಲ್ ಕುಮಾರ್, ಶಿವಮರಿಯಪ್ಪ, ಧರಣೇಶ್, ಉಷಾ, ದಯಾನಂದ್, ಆದರ್ಶ ಪುಟ್ಟಸ್ವಾಮಿ ಇತರರು ಇದ್ದರು.