ಅಯೋಧ್ಯೆ ರಾಮಮಂದಿರ ಮಂತ್ರಾಕ್ಷತೆ ವಿವಿಧೆಡೆ ರವಾನೆ

KannadaprabhaNewsNetwork |  
Published : Dec 05, 2023, 01:30 AM IST
ಅಯೋಧ್ಯೆ ರಾಮಮಂದಿರ ಮಂತ್ರಾಕ್ಷತೆಯನ್ನು ಹಸ್ತಾಂತರಿಸಲಾಯಿತು. | Kannada Prabha

ಸಾರಾಂಶ

ಅಯೋಧ್ಯೆ ಪುಣ್ಯ ಕ್ಷೇತ್ರದಿಂದ ಆಗಮಿಸಿರುವ ಪವಿತ್ರ ಮಂತ್ರಾಕ್ಷತೆಯನ್ನು ವಿವಿಧ ಕೇಂದ್ರಗಳಿಗೆ ವಿತರಿಸುವ ಕಾರ್ಯಕ್ರಮ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಮಂಗಳೂರು ಮಹಾನಗರ ವತಿಯಿಂದ ನಗರದ ಬಾಳಂಭಟ್‌ ಹಾಲ್‌ನಲ್ಲಿ ಸೋಮವಾರ ನಡೆಯಿತು.

ಕನ್ನಡಪ್ರಭ ವಾರ್ತೆ ಮಂಗಳೂರು

ಅಯೋಧ್ಯೆ ಪುಣ್ಯ ಕ್ಷೇತ್ರದಿಂದ ಆಗಮಿಸಿರುವ ಪವಿತ್ರ ಮಂತ್ರಾಕ್ಷತೆಯನ್ನು ವಿವಿಧ ಕೇಂದ್ರಗಳಿಗೆ ವಿತರಿಸುವ ಕಾರ್ಯಕ್ರಮ ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ ಮಂಗಳೂರು ಮಹಾನಗರ ವತಿಯಿಂದ ನಗರದ ಬಾಳಂಭಟ್‌ ಹಾಲ್‌ನಲ್ಲಿ ಸೋಮವಾರ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಆಶೀರ್ವಚನ ನೀಡಿದ ಚಿತ್ರಾಪುರ ಮಠದ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ರಾಮನ ಆರಾಧನೆಯೆಂದರೆ ಧರ್ಮದ ಆರಾಧನೆ. ಅನೇಕ ಮಂದಿಯ ತ್ಯಾಗ, ಬಲಿದಾನದಿಂದ ರಾಮಮಂದಿರ ನಿರ್ಮಾಣವಾಗುತ್ತಿದೆ. ರಾಮನಂತೆ ಬದುಕುವ ಮೂಲಕ ಧರ್ಮಾಚರಣೆ ಪಾಲನೆ ಮಾಡುವ ಜವಾಬ್ದಾರಿ ಎಲ್ಲರದ್ದೂ ಆಗಿದೆ. ಅಯೋಧ್ಯೆಯಲ್ಲಿ ರಾಮ ದೇವರ ಪ್ರಾಣಪ್ರತಿಷ್ಠೆ ನಡೆಯುವಾಗ ವಿಶೇಷವಾಗಿ ರಾಮನಾಮ ಜಪ ಸೇರಿದಂತೆ ರಾಮನ ಆರಾಧನೆ ಎಲ್ಲೆಡೆ ನಡೆಯಬೇಕು ಎಂದು ಆಶಿಸಿದರು.ಅಯೋಧ್ಯೆ ಕ್ಷೇತ್ರದಲ್ಲಿ ರಾಮ ಮಂತ್ರ ಅಭಿಮಂತ್ರಿಸಿರುವ ಮಂತ್ರಾಕ್ಷತೆ ಎಲ್ಲರ ಮನೆಗೆ ತಲುಪಲಿದ್ದು, ಅದನ್ನು ಭಕ್ತಿಯಿಂದ ಸ್ವೀಕರಿಸಬೇಕು. ಮಂತ್ರಾಕ್ಷತೆ ಪಡೆದು ಶ್ರೀ ರಾಮನ ಚಿಂತನೆಯನ್ನು ಮಾಡಬೇಕು. ಮಂತ್ರಾಕ್ಷತೆ ಹಿಂದು ಸಮಾಜದ ಒಗ್ಗಟ್ಟಿಗೆ ಕಾರಣವಾಗಲಿ ಎಂದು ಸ್ವಾಮೀಜಿ ಹೇಳಿದರು.ವಿಶ್ವ ಹಿಂದು ಪರಿಷತ್‌ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್‌ ಮಾತನಾಡಿ, ಹಿಂದೂಗಳ ದೊಡ್ಡ ಕನಸಾಗಿದ್ದ ಅಯೋಧ್ಯೆ ಶ್ರೀರಾಮ ಮಂದಿರವು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಚಾಣಾಕ್ಷತನ, ಯೋಜನೆ ಮತ್ತು ಯೋಚನೆಗಳಿಂದ ವ್ಯವಸ್ಥಿತವಾಗಿ ನಿರ್ಮಾಣವಾಗುತ್ತಿದೆ. ಈ ಪರ್ವ ಸಂದರ್ಭದಲ್ಲಿ ನಾವೆಲ್ಲರೂ ರಾಮನ ನಡೆ ಮತ್ತು ಕೃಷ್ಣನ ಬೋಧನೆಯಂತೆ ಬದುಕುವ ಸಂಕಲ್ಪ ಮಾಡಬೇಕು ಎಂದು ಹೇಳಿದರು.ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ದಕ್ಷಿಣ ಪ್ರಾಂತ ಸಹಕಾರ್ಯವಾಹ ಪಿ.ಎಸ್‌. ಪ್ರಕಾಶ್‌ ಮಾತನಾಡಿ, ಜ.22ರಂದು ಅಯೋಧ್ಯೆ ರಾಮಮಂದಿರದಲ್ಲಿ ದೇವರ ಪ್ರಾಣಪ್ರತಿಷ್ಠೆ ನಡೆಯಲಿದ್ದು, ಅಂದು ಎಲ್ಲ ಹಿಂದುಗಳು ತಮ್ಮ ಮನೆಗಳಲ್ಲಿ ಸಂಜೆ ಕನಿಷ್ಠ 5 ದೀಪ ಬೆಳಗಿಸಬೇಕು. ಉತ್ತರ ದಿಕ್ಕಿಗೆ ಅಯೋಧ್ಯೆಯ ಕಡೆಗೆ ಮುಖ ಮಾಡಿ ಆರತಿ ಬೆಳಗಬೇಕು ಎಂದು ಕರೆ ನೀಡಿದರು.ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಸಂಘಚಾಲಕ್‌ ಡಾ. ಸತೀಶ್‌ ರಾವ್‌, ವಿಹಿಂಪ ಜಿಲ್ಲಾಧ್ಯಕ್ಷ ಎಚ್‌.ಕೆ. ಪುರುಷೋತ್ತಮ, ವಿದ್ವಾನ್‌ ಡಾ. ಸತ್ಯಕೃಷ್ಣ ಭಟ್‌ ಇದ್ದರು.ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ವೇದವ್ಯಾಸ ಕಾಮತ್‌, ಡಾ.ವೈ. ಭರತ್‌ ಶೆಟ್ಟಿ, ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ವಿಹಿಂಪ ಪ್ರಾಂತ ಸಹಕಾರ್ಯದರ್ಶಿ ಶರಣ್‌ ಪಂಪ್‌ವೆಲ್‌ ಮೊದಲಾದವರು ಭಾಗವಹಿಸಿದ್ದರು. ವಿಹಿಂಪ ಜಿಲ್ಲಾ ಕಾರ್ಯದರ್ಶಿ ಶಿವಾನಂದ ಮೆಂಡನ್‌ ನಿರೂಪಿಸಿ, ವಂದಿಸಿದರು.ಜ.1ರಿಂದ ಮನೆ ಮನೆಗೆ ಮಂತ್ರಾಕ್ಷತೆಬಾಳಂ ಭಟ್‌ ಸಭಾಂಗಣದಲ್ಲಿ ಮಂತ್ರಾಕ್ಷತೆಯ ಕುಂಭಗಳಿಗೆ ಪೂಜೆ ಸಲ್ಲಿಸಿದ ಬಳಿಕ ರಥಬೀದಿ ವೆಂಕಟರಮಣ ದೇವಸ್ಥಾನದ ಮುಂಭಾಗದ ಮೂಲಕ ಸಾಗಿ ಶರವು ಮಹಾಗಣಪತಿ ದೇವಸ್ಥಾನಕ್ಕೆ ಮಂತ್ರಾಕ್ಷತೆಯನ್ನು ಮೆರವಣಿಗೆಯಲ್ಲಿ ಹೊತ್ತು ತರಲಾಯಿತು. ಶರವು ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ನಗರದ ವಿವಿಧೆಡೆಗೆ ಮಂತ್ರಾಕ್ಷತೆ ಕೊಂಡೊಯ್ಯಲಾಯಿತು.ಮಂತ್ರಾಕ್ಷತೆಯನ್ನು ಮನೆ ಮನೆಗೆ ತಲುಪಿಸುವ ಅಭಿಯಾನ ಜ.1ರಿಂದ 15ರವಗೆಗೆ ನಡೆಯಲಿದೆ. ಜತೆಗೆ ಅಯೋಧ್ಯೆ ಕ್ಷೇತ್ರ, ರಾಮನ ಭಾವಚಿತ್ರ ಮತ್ತು ಕರಪತ್ರ ನೀಡಲಾಗುವುದು. ಗ್ರಾಮದ ದೇವಸ್ಥಾನಗಳಲ್ಲಿ ಭಜನೆ, ಸತ್ಸಂಗ, ಸಂತರಿಂದ ಮಾತು, ರಾಮ ಮಂತ್ರ ಪಠಣ ನಡೆಯಲಿದೆ. ಜ.7ರಂದು ಒಂದೇ ದಿನ ಮಂಗಳೂರು ವಿಭಾಗದ ಎಲ್ಲ ಮನೆಗಳಿಗೂ ತೆರಳಿ ಮಂತ್ರಾಕ್ಷತೆ ನೀಡಲು ನಿರ್ಧರಿಸಲಾಗಿದೆ ಎಂದು ಪಿ.ಎಸ್‌. ಪ್ರಕಾಶ್‌ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಯಕತ್ವ ಗೊಂದಲ ಮಧ್ಯೆ 13 ಕೈ ಶಾಸಕರು ವಿದೇಶಕ್ಕೆ :
ವಿದ್ಯಾರ್ಥಿಗಳ ಗೋಳು, ಕೇಳೋರು ಯಾರು?