ಆಯುರ್ವೇದಕ್ಕೆ ಇಂದು ಜಗತ್ತಿನಾದ್ಯಂತ ಮನ್ನಣೆ

KannadaprabhaNewsNetwork |  
Published : May 03, 2026, 01:30 AM IST
ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರ್ಯಾಂಕ್‌ ವಿಜೇತ ವಿದ್ಯಾರ್ಥಿಗೆ ಘಟಿಕೋತ್ಸವ ಪ್ರಮಾಣ ಪತ್ರ ನೀಡಿ ಗೌರವಿಸಿದರು.ರಾಘವೇಂದ್ರ ಮೆಡಿಕಲ್‌ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆಯ ವಿದ್ಯಾರ್ಥಿಗಳೊಂದಿಗೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ, ಶಾಸಕ ಎಂ. ಚಂದ್ರಪ್ಪ, ಮಾದಾರ ಚೆನ್ನಯ್ಯ ಸ್ವಾಮೀಜಿ, ಮುಂತಾದ ಗಣ್ಯರು. | Kannada Prabha

ಸಾರಾಂಶ

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರ್‍ಯಾಂಕ್‌ ವಿಜೇತ ವಿದ್ಯಾರ್ಥಿಗಳಿಗೆ ಘಟಿಕೋತ್ಸವ ಪ್ರಮಾಣ ಪತ್ರ ನೀಡಿ ಗೌರವಿಸಿದರು.

ಕನ್ನಡಪ್ರಭ ವಾರ್ತೆ ಹೊಳಲ್ಕೆರೆ

ಆಯುರ್ವೇದಕ್ಕೆ ಇದೀಗ ಜಗತ್ತಿನಾದ್ಯಂತ ಮನ್ನಣೆ ದೊರೆಯುತ್ತಿದೆ. ಅದನ್ನು ಕುರಿತು ವಿಸ್ತಾರವಾದ ವ್ಯಾಸಂಗಕ್ಕೆ ಭಾರತ ಬುನಾದಿ ಒದಗಿಸುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ತಿಳಿಸಿದರು.

ತಾಲೂಕಿನ ಮಲ್ಲಾಡಿಹಳ್ಳಿಯಲ್ಲಿ ಶನಿವಾರ ನಡೆದ ರಾಘವೇಂದ್ರ ಆಯುರ್ವೇದ ಮೆಡಿಕಲ್‌ ಕಾಲೇಜು ಮತ್ತು ಆಸ್ಪತ್ರೆಯ ಘಟಿಕೋತ್ಸವ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

ಅತ್ಯಂತ ಜನಪ್ರಿಯವಾಗುತ್ತಿರುವ ವೈದ್ಯಶಾಸ್ತ್ರವನ್ನು ಸೂಕ್ತ ರೀತಿಯಲ್ಲಿ ಭಾರತೀಯರು ಬಳಸಿಕೊಳ್ಳಬೇಕು. ಪ್ರಾಚೀನ ವೈದ್ಯ ಪರಂಪರೆಯಲ್ಲಿ ಆಯುರ್ವೇದಕ್ಕೆ ಬಹಳ ಮಹತ್ವ ಇದೆ. ಆದರೆ ಜನರು ಅಲೋಪತಿ ಚಿಕಿತ್ಸಾ ಪದ್ಧತಿಗೆ ಹೆಚ್ಚು ಆಕರ್ಷಿತರಾಗುತ್ತಿದ್ದಾರೆ ಎಂದರು.

ಆಲೋಪತಿ ವೈದ್ಯಕೀಯ ಶಾಸ್ತ್ರ ನಮ್ಮಲ್ಲಿ ಬರುವುದಕ್ಕೆ ಪೂರ್ವದಲ್ಲಿಯೇ ಆಯುರ್ವೇದ ಚಿಕಿತ್ಸಾ ಕ್ರಮಗಳು ಜಾರಿಯಲ್ಲಿದ್ದವು ಎಂದು ತಿಳಿಸಿದರು.ಸುಮಾರು ಎಂಟು ದಶಕಗಳ ಹಿಂದೆ ಎಲ್ಲಿಂದಲೋ ಬಂದು ನೆಲೆಸಿದ ಶ್ರೀ ರಾಘವೇಂದ್ರ ಸ್ವಾಮೀಜಿ ಹಾಗೂ ಅವರ ಒಡನಾಡಿ ಸೂರ್‌ದಾಸ್‌ಜಿ ಮಲ್ಲಾಡಿಹಳ್ಳಿಯನ್ನು ಆಯುರ್ವೇದದ ಕೇಂದ್ರವನ್ನಾಗಿ ರೂಪಿಸಿದರು. ಅವರ ಪರಿಶ್ರಮದಿಂದ ಮಲ್ಲಾಡಿಹಳ್ಳಿಯನ್ನು ಕೇಂದ್ರವನ್ನಾಗಿಟ್ಟುಕೊಂಡು ರಾಜ್ಯದ ಹಲವು ಕಡೆ ಆಯುರ್ವೇದ ಚಿಕಿತ್ಸಾ ಕ್ರಮಗಳು ಚಾಲ್ತಿಗೆ ಬಂದಿವೆ. ನಾಡಿನ ತುಂಬ ತಿರುಗಾಡಿ ಜನರಿಂದ ಭಿಕ್ಷೆ ಬೇಡಿ ಮಲ್ಲಾಡಿಹಳ್ಳಿಯಲ್ಲಿ ಸ್ವಾಮೀಜಿ ಬೃಹತ್‌ ಆಶ್ರಮ ಸ್ಥಾಪಿಸಿ ಇಲ್ಲಿ ಉತ್ತಮ ಆರೋಗ್ಯ ಮತ್ತು ಶಿಕ್ಷಣಕ್ಕೆ ಇಲ್ಲಿ ಅವಕಾಶ ಮಾಡಿಕೊಟ್ಟಿದ್ದಾರೆ. ಅವರು ಸ್ಥಾಪಿಸಿದ ಸಂಸ್ಥೆಯಲ್ಲಿ ಲಕ್ಷಾಂತರ ಮಕ್ಕಳು ವಿದ್ಯಾಭ್ಯಾಸ ಮಾಡಿ ಮುಂದೆ ಬಂದಿರುವುದು ಸಾರ್ಥಕ ಸೇವೆಯ ರೂಪಕವಾಗಿದೆ ಎಂದರು.

ಈ ಸಂಸ್ಥೆಯಲ್ಲಿ ಓದಿದ 15 ಜನ ವಿದ್ಯಾರ್ಥಿಗಳು ಆಯುರ್ವೇದದಲ್ಲಿ ರ್‍ಯಾಂಕ್‌ ಗಳಿಸಿ ಉನ್ನತ ಸಾಧನೆ ಮಾಡಿದ್ದಾರೆ. ಅವರ ಸತತ ಪರಿಶ್ರಮದ ಸಾಧನೆ ಮುಂದಿನ ಜನಾಂಗಕ್ಕೆ ಮಾದರಿಯಾಗುವಂತಹುದು. ಅವರು ಯೋಗ ಮತ್ತು ಆಯುರ್ವೇದವನ್ನು ಬೆಳೆಸಲು ಮುಂದಾಗಲಿ ಎಂದರು.

ಮುಖ್ಯ ಅತಿಥಿಯಾಗಿದ್ದ ಹೊಳಲ್ಕೆರೆ ಶಾಸಕ ಎಂ.ಚಂದ್ರಪ್ಪ ಮಾತನಾಡಿ, ನಾನು ಶಾಸಕನಾಗಿ ಬಂದಾಗ ಅನೇಕ ಕಡೆಗಳಲ್ಲಿ ಮಲ್ಲಾಡಿಹಳ್ಳಿ ಗ್ರಾಮಕ್ಕೆ ರಸ್ತೆಗಳ ಸಂಪರ್ಕ ಇರಲಿಲ್ಲ ನನ್ನ ಅನುದಾನದಡಿಯಲ್ಲಿ ರಸ್ತೆ, ಚರಂಡಿ ಮತ್ತು ನೀರಿನ ವ್ಯವಸ್ಥೆಗಳನ್ನು ಕಲ್ಪಿಸಿಕೊಡುತ್ತಾ ಮಲ್ಲಾಡಿಹಳ್ಳಿಯ ಸೇವಾ ಕ್ಷೇತ್ರಕ್ಕೆ ನನ್ನದೊಂದು ಚಿಕ್ಕಕೊಡುಗೆಯನ್ನು ನೀಡುತ್ತಾ ಬಂದಿದ್ದೇನೆ. ಎಂದರು.

ರಾಜೀವಗಾಂಧಿ ವಿಶ್ವವಿದ್ಯಾನಿಲಯದ ಉಪ ಕುಲಪತಿ ಡಾ.ಬಿ.ಸಿ.ಭಗವಾನ್ ಮಾತನಾಡಿ, ವೈದ್ಯ ಎನ್ನುವುದು ಕೇವಲ ಹುದ್ದೆಯಲ್ಲ, ಅದರಲ್ಲಿ ಸವಾಲುಗಳಿವೆ ರೋಗಿಯನ್ನು ಆರೋಗ್ಯಕರವಾಗಿ ಉಳಿಸುವಂತಹ ಹೆಚ್ಚಿನ ಕರ್ತವ್ಯ ವೈದ್ಯನ ಮೇಲಿದೆ. ಯಾವುದೇ ಅಡ್ಡಪರಿಣಾಮಗಳಿಲ್ಲದ ಆಯುರ್ವೇದ ಪದ್ಧತಿಯನ್ನು ಶಾಸ್ತ್ರೋಕ್ತವಾಗಿ ಕಲಿತು, ಉಳಿಸಿ, ಬೆಳೆಸುವಂತಹ ಹೊಣೆಗಾರಿಕೆ ಆಯುರ್ವೇದ ವೈದ್ಯರ ಮೇಲಿದೆ ಎಂದರು.

ಇದೇ ಸಂದರ್ಭದಲ್ಲಿ ರಾಜ್ಯಮಟ್ಟದಲ್ಲಿ ರ‍್ಯಾಂಕ್ ಪಡೆದ ಆಯುರ್ವೇದ ಕಾಲೇಜಿನ ವಿದ್ಯಾರ್ಥಿಗಳಾದ ಪ್ರೇರಣಾ ಅಣಜಿ, ಚಂದನಾ ಪಾಟೀಲ್, ಶಿರಿಷಾ, ಉಜ್ವಲಾ ಕೆ, ಭವ್ಯಶ್ರೀ ಆರ್, ನಿಶಾ, ಮದನ್, ಭೂಮಿಕಾ ಟಿ.ಆರ್, ಮತ್ತು ಸಂಜನಾ ಪೊಟ್ಲೆ ಹಾಗೂ ಅಂತಿಮ ವರ್ಷದಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನದೊಂದಿಗೆ ಪದವಿ ಪ್ರದಾನ ಮಾಡಲಾಯಿತು.

ದಿವ್ಯ ಸಾನ್ನಿಧ್ಯ ವಹಿಸಿದ್ದ ಮಲ್ಲಾಡಿಹಳ್ಳಿ ಅನಾಥ ಸೇವಾಶ್ರಮದ ಅಧ್ಯಕ್ಷರಾದ ಡಾ.ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿಯವರು ಮಾತನಾಡಿ, ತಿರುಕನೆಂಬ ಹೆಸರನ್ನೊತ್ತು ಜೋಳಿಗೆಯ ಮೂಲಕ ಬಿಕ್ಷೆ ಬೇಡಿ ಆಶ್ರಮವನ್ನು ನಿರ್ಮಿಸಿದ ರಾಘವೇಂದ್ರ ಸ್ವಾಮೀಜಿಯವರ ಮತ್ತು ಸೂರುದಾಸ್‌ಜಿ ಸ್ವಾಮೀಜಿಯವರ ಕನಸನ್ನು ಸಾಕಾರ ಮಾಡಲು ಹಗಲಿರುಳು ಶ್ರಮಿಸಲು ನಾನು ಮತ್ತು ವಿಶ್ವಸ್ತರೆಲ್ಲರೂ ಬದ್ಧರಾಗಿದ್ದೇವೆ. ಮುಂದಿನ ದಿನಗಳಲ್ಲಿ ಆಶ್ರಮದಲ್ಲಿ ವಿದ್ಯಾಭ್ಯಾಸ ಮಾಡಿ ರ‍್ಯಾಂಕ್‌ಗಳಿಸುವ ವಿದ್ಯಾರ್ಥಿಗಳಿಗೆ ವಿಶ್ವಸ್ತ ಸಮಿತಿಯ ವತಿಯಿಂದ ನಗದು ಬಹುಮಾನಗಳನ್ನು ನೀಡಲಾಗುತ್ತದೆ ಎಂದರು. ಆಶ್ರಮದ ಬೆಳವಣಿಗೆಗೆ ಗ್ರಾಮಸ್ಥರ, ಸುತ್ತಮುತ್ತಲಿನ ಎಲ್ಲಾ ಗ್ರಾಮಗಳ ಎಲ್ಲಾ ಸಮಾಜದವರ ಸಹಕಾರ ಅತ್ಯಂತ ಮುಖ್ಯ ಎಂದರು.

ಆಂಧ್ರ ಮತ್ತು ಮಧ್ಯಪ್ರದೇಶದ ಬುಡಕಟ್ಟು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ತೇಜಸ್ವಿ ವೆಂಕಪ್ಪ ಕಟ್ಟಿಮನಿ, ಭಾರತ ಸರ್ಕಾರದ ಟಿಕೆಡಿಎಲ್ ವಿಭಾಗಾಧ್ಯಕ್ಷ ಡಾ.ವಿಶ್ವ ಜನನಿ ಜೆ. ಸತ್ತಿಗೇರಿ, ತಿರುವನಂತಪುರದ ಹಿರಿಯ ವಿಜ್ಞಾನಿ ಡಾ.ಶಶಿಧರ ಬಿ. ಸೋಮಪ್ಪ ಚಿತ್ರದುರ್ಗ ಜಿಲ್ಲಾ ಆಯುಷ್ ಅಧಿಕಾರಿ ಡಾ.ಚಂದ್ರಕಾಂತ್ ನಾಗಸಮುದ್ರ, ಆಶ್ರಮದ ಉಪಾಧ್ಯಕ್ಷರಾದ ರಾಘವೇಂದ್ರ ಪಾಟೀಲ, ಡಾ.ಶ್ರೀಕಂಠಮೂರ್ತಿ, ಕಾರ್ಯದರ್ಶಿ ಎಸ್.ಕೆ.ಬಸವರಾಜನ್, ಖಜಾಂಚಿ ಡಾ.ಜಿ.ಎನ್.ಮಲ್ಲಿಕಾರ್ಜುನಪ್ಪ ಆಶ್ರಮದ ವಿಶ್ವಸ್ತರುಗಳು, ವ್ಯವಸ್ಥಾಪಕರಾದ ಡಿ.ಕೆ.ಚಂದ್ರಪ್ಪ, ಆಯುರ್ವೇದ ಕಾಲೇಜಿನ ಪ್ರಾಚಾರ್ಯ ಡಾ.ಶ್ರೀಪತಿ ನಾಗೋಳ್, ಶಾಲಾ ಕಾಲೇಜುಗಳ ಮುಖ್ಯ1ಸ್ಥರು, ಅಧ್ಯಾಪಕರು ಮತ್ತು ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಟ ಚೇತನ್‌ ಹೇಳಿಕೆಯಿಂದ ರಾಜ್‌ ಅಭಿಮಾನಿಗಳಿಗೆ ಅವಮಾನ
ಧರ್ಮದ ನೆಲೆಗಟ್ಟಿನಲ್ಲಿ ಭಾರತ ಇದೆ: ವಿರೂಪಾಕ್ಷಪ್ಪ