- ಚನ್ನಗಿರಿಯಲ್ಲಿ ಶ್ರೀ ಗುಳ್ಳಮ್ಮ ದೇವಿ ದೇವಸ್ಥಾನ ಪ್ರವೇಶೋತ್ಸವ ಕಾರ್ಯಕ್ರಮ

- - -

ಕನ್ನಡಪ್ರಭ ವಾರ್ತೆ ಚನ್ನಗಿರಿ

ಧರ್ಮದ ನೆಲೆಗಟ್ಟಿನ ಮೇಲೆ ನಮ್ಮ ದೇಶವಿದ್ದು, ಭಾರತೀಯರಾದ ನಾವುಗಳು ದೇವರುಗಳ ಬಗ್ಗೆ ಅಪಾರವಾದ ಭಯ ಭಕ್ತಿ ಹೊಂದಿದ್ದು, ಇದರಿಂದ ನಮಗೆ ಉತ್ತಮವಾದ ಫಲಗಳು ಸಿಗಲು ಸಾಧ್ಯ ಎಂದು ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಹೇಳಿದರು. ಶುಕ್ರವಾರ ಸಂಜೆ ಪಟ್ಟಣದ ಮಡಿವಾಳರ ಬೀದಿಯಲ್ಲಿ ಶ್ರೀ ಗುಳ್ಳಮ್ಮ ದೇವಿ ದೇವಸ್ಥಾನ ಪ್ರವೇಶೋತ್ಸವ ಕಾರ್ಯಕ್ರಮ ನಿಮಿತ್ತ ಏರ್ಪಡಿಸಿದ್ದ ಧಾರ್ಮಿಕ ಸಮಾರಂಭದಲ್ಲಿ ಅವರು ಮಾತನಾಡಿದರು. ಶ್ರೀಗುಳ್ಳಮ್ಮ ದೇವಾಲಯ ನಿರ್ಮಾಣದ ಆರಂಭದಲ್ಲಿ ನಾನು ₹30 ಲಕ್ಷಗಳನ್ನು ದೇವಾಲಯ ನಿರ್ಮಾಣಕ್ಕೆ ನೀಡಿದ್ದೆ. ಮಠಾಧೀಶರ ಮಾರ್ಗದರ್ಶನದಲ್ಲಿ ನಡೆದಾಗ ಜೀವನ ಪಾವನವಾಗುವ ಜೊತೆಗೆ ಕಾಲಮಾನಕ್ಕೆ ತಕ್ಕಂತೆ ಸಮೃದ್ಧವಾಗಿ ಮಳೆ-ಬೆಳೆ ಆಗುವುದು. ಶಕ್ತಿ ದೇವರನ್ನು ಭಯ-ಭಕ್ತಿಗಳಿಂದ ಪೂಜಿಸುತ್ತಾ ಆರಾಧಿಸಿದಾಗ ಸಕಲ ಸಂಪತ್ತುಗಳು ದೊರೆಯಲಿವೆ ಎಂದರು.

ಪಟ್ಟಣದ ಹಿರೇಮಠದ ಡಾ. ಶ್ರೀ ಕೇದಾರಲಿಂಗ ಶಿವಶಾಂತವೀರ ಶಿವಾಚಾರ್ಯ ಮಹಾಸ್ವಾಮಿಗಳು ಮಾತನಾಡಿ, ಇಂದಿನ ಮಾನವ ಜನಾಂಗದಲ್ಲಿ ವಿದ್ಯಾವಂತ, ಜ್ಞಾನವಂತ, ಬುದ್ಧಿವಂತರಾದವರೆಲ್ಲಾ ಮಾನವೀಯ ಮೌಲ್ಯಗಳನ್ನೇ ಕಳೆದುಕೊಳ್ಳುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಮಾಜಿ ಶಾಸಕರಾದ ಮಾಡಾಳು ವಿರೂಪಾಕ್ಷಪ್ಪ ಅವರಂಥವರು ಗುರು, ಹಿರಿಯರಲ್ಲಿ ಭಯ- ಭಕ್ತಿಗಳನ್ನು ತೋರುತ್ತಿದ್ದಾರೆ. ಅಧಿಕಾರದಲ್ಲಿ ಇರಲಿ, ಬಿಡಲಿ ಯಾವುದೇ ಹಮ್ಮು ಬಿಮ್ಮುಗಳನ್ನು ತೋರದೇ ಸಮಾನ ಚಿತ್ತದಿಂದ ನಡೆಯುವಂತಹ ಸಾತ್ವಿಕರಾಗಿರುವ ಮಾಡಾಳು ವಿರೂಪಾಕ್ಷಪ್ಪ ಅವರು ಹಿರೇಮಠವನ್ನು ನಿರ್ಮಾಣ ಮಾಡುವ ಆರಂಭದಲ್ಲಿ ₹25 ಲಕ್ಷ ನೀಡಿದ್ದರು. ಅದರಿಂದ ಆರಂಭಿಸಿ ಭಕ್ತರಿಂದ ಭಿಕ್ಷೆ ಬೇಡಿ ₹1 ಕೋಟಿ ವೆಚ್ಚದಲ್ಲಿ ಮಠವನ್ನು ನಿರ್ಮಿಸಿದ್ದೇವೆ ಎಂದರು.


ಚಿತ್ರದುರ್ಗದ ಶ್ರೀ ಮಡಿವಾಳ ಮಾಚಿದೇವ ಗುರುಪೀಠದ ಶ್ರೀ ಬಸವ ಮಾಚಿದೇವ ಮಹಾಸ್ವಾಮಿಗಳು ಮಾತನಾಡಿ, ನಾಯಕ, ಹಾಲುಮತ, ಮಡಿವಾಳ, ವೀರಶೈವ , ಕುಂಬಾರ ಸಮಾಜಗಳ ಬಂಧುಗಳೆಲ್ಲರೂ ಒಂದಾಗಿ ಶ್ರೀ ಗುಳ್ಳಮ್ಮ ದೇವಿಯ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ. ಈ ಸೇವೆ ಕಂಡಾಗ ಇದು ಜಾತಿಯ ಸೂಚಕವಾದ ದೇವಾಲಯ ವಾಗದೇ ಸರ್ವರಿಗೂ ಬೆಳಕನ್ನು ಸೂಚಿಸುವಂತಹ ಜ್ಯೋತಿಯ ಸಂಕೇತವಾಗಿದೆ ಎಂದರು.

ಹಾಲಸ್ವಾಮಿ ವಿರಕ್ತ ಮಠದ ಶ್ರೀ ಬಸವ ಜಯಚಂದ್ರ ಮಹಾಸ್ವಾಮಿಗಳು ಮಾತನಾಡಿ, ಚನ್ನಗಿರಿ ಕ್ಷೇತ್ರದಲ್ಲಿ ಮಾಡಾಳು ವಿರೂಪಾಕ್ಷಪ್ಪ ಶಾಸಕರಾಗಿದ್ದ ಸಂದರ್ಭ ಮಂದಿರ, ಮಸೀದಿಗಳ ನಿರ್ಮಾಣಕ್ಕೆ ಭಿನ್ನತೆಗಳನ್ನು ತೋರದೇ ಅನುದಾನಗಳನ್ನು ನೀಡುತ್ತಾ ಸರ್ವರನ್ನು ಸಮಾನವಾಗಿ ಕಾಣುತ್ತಿದ್ದಾರೆ ಎಂದು ಪ್ರಶಂಶಿಸಿದರು.

ಇದೇ ಸಂದರ್ಭದಲ್ಲಿ ಹುಟ್ಟುಹಬ್ಬದ ದಿನವಾದ ಶುಕ್ರವಾರ 74 ವರ್ಷಗಳು ತುಂಬಿ 75ನೇ ವರ್ಷಕ್ಕೆ ಪಾದರ್ಪಣೆ ಮಾಡುತ್ತಿರುವ ಮಾಡಾಳು ವಿರೂಪಾಕ್ಷಪ್ಪ ಅವರಿಗೆ ಸಮಾರಂಭದಲ್ಲಿದ್ದ ಮೂವರೂ ಶ್ರೀಗಳು ಶುಭಾಶಯಗಳನ್ನು ಕೋರಿ ಆಶೀರ್ವದಿಸಿದರು.

ಶ್ರೀ ಗುಳ್ಳಮ್ಮ ದೇವಿ ಇತಿಹಾಸದ ಬಗ್ಗೆ ಸಂಪನ್ಮೂಲ ವ್ಯಕ್ತಿ ಕಾಕನೂರು ಎಂ.ಬಿ.ನಾಗರಾಜ್ ಉಪನ್ಯಾಸ ಮಾಡಿದರು. ಮುಖ್ಯ ಅತಿಥಿಗಳಾಗಿ ವಿವಿಧ ಸಮಾಜಗಳ ಪ್ರಮುಖರಾದ ರುದ್ರಪ್ಪ, ಕಿಟ್ಟಣ್ಣ, ಜಯರಾಮ್, ಕೆ.ಆರ್.ಗೋಪಿ, ಸ್ಟಾಂಪ್ ವೆಂಡರ್ ಮಂಜುನಾಥ್, ಜಯಪ್ಪ, ಸಿ.ರಮೇಶ್, ಪಟ್ಲಿ ನಾಗರಾಜ್, ನಾಗೇಂದ್ರಪ್ಪ, ಆಂಜನೇಯ, ರುದ್ರಣ್ಣ, ಕಾಫಿಪುಡಿ ಶಿವಾಜಿ ರಾವ್, ಎ.ಸಿ.ಚಂದ್ರು, ನಟರಾಜ್, ಪರಮೇಶ್ವರಪ್ಪ, ರಮೇಶ್, ಶಿವಣ್ಣ, ಕೊಡದಹಳ್ಳಿ ಜಯಣ್ಣ, ಗಣೇಶ್, ನವೀನ್ ಕುಮಾರ್, ಮಂಜಣ್ಣ ಮತ್ತಿತರ ಭಕ್ತರು ಹಾಜರಿದ್ದರು.

- - -

-2ಕೆಸಿಎನ್ಜಿ3: ಸಮಾರಂಭದಲ್ಲಿ ಮಾಜಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮಾತನಾಡಿದರು.