ಹೊಸಪೇಟೆ: ಆಯುರ್ವೇದ ಭಾರತೀಯ ಮೂಲ ವೈದ್ಯಕೀಯ ಪದ್ಧತಿ. ಆಯುರ್ವೇದ ಬಗ್ಗೆ ಅರಿವು ಮೂಡಿಸುವುದು ಆಯುರ್ವೇದ ದಿನ ಆಚರಿಸುವ ಉದ್ದೇಶವಾಗಿದೆ ಎಂದು ಗ್ಯಾರಂಟಿ ಯೋಜನೆಯ ಜಿಲ್ಲಾಧ್ಯಕ್ಷ ಕುರಿ ಶಿವಮೂರ್ತಿ ಹೇಳಿದರು.
ನಗರದ ರೋಟರಿ ಕ್ಲಬ್ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆಯುಷ್ ಇಲಾಖೆ, ಎಎಫ್‌ಐ ಜಿಲ್ಲಾ ಘಟಕ, ಪತಂಜಲಿ ಯೋಗ ಸಂಸ್ಥೆ ಇವರ ಸಹಯೋಗದಲ್ಲಿ 10ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಂಗಳವಾರ ಮಾತನಾಡಿದರು.ಗ್ರಾಮೀಣ ಭಾಗದಲ್ಲಿನ ಜನರಿಗೆ ಆಯುರ್ವೇದದ ಮಹತ್ವ ಅರಿಯುವ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕಿದೆ. ಕೋವಿಡ್ ವೇಳೆಯಲ್ಲಿ ಅನೇಕರು ಆಯುರ್ವೇದ ಪದ್ಧತಿಯನ್ನು ಅನುಸರಿಸಿ ಆರೋಗ್ಯ ರಕ್ಷಣೆ ಮಾಡಿಕೊಂಡಿದ್ದಾರೆ. ಆಯುರ್ವೇದದಲ್ಲಿ ಕನಿಷ್ಠ 100 ವಿಧದ ರೋಗಗಳ ಚಿಕಿತ್ಸೆ ಮತ್ತು ತಡೆಗಟ್ಟುವಿಕೆಗೆ ಪ್ರಯೋಜನಕಾರಿಯಾಗಿದೆ. ಕಡಿಮೆ ವೆಚ್ಚದಲ್ಲಿ ಆಯುರ್ವೇದ ಚಿಕಿತ್ಸಾ ವಿಧಾನದಿಂದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಶಾಶ್ವತ ಆರೋಗ್ಯ ಪರಿಹಾರಗಳು ಸಿಗಲಿವೆ. ಜಿಲ್ಲಾ ಕೇಂದ್ರದಲ್ಲಿ ನಡೆಯುವ ಆಯುರ್ವೇದ ದಿನಾಚರಣೆಯಂತೆ ಎಲ್ಲ ತಾಲೂಕು ಮಟ್ಟದಲ್ಲಿ, ಗ್ರಾಪಂ ವ್ಯಾಪ್ತಿಯಲ್ಲಿ ಆಚರಿಸುವ ಮೂಲಕ ಸಾಮಾನ್ಯ ಜನರಿಗೆ ಆಯುರ್ವೇದದ ಮಹತ್ವನ್ನು ಅಭಿಯಾನದಂತೆ ಆಯೋಜಿಸಬೇಕಿದೆ ಎಂದರು.
ಎಎಫ್‌ಐ ಜಿಲ್ಲಾ ಘಟಕದ ಅಧ್ಯಕ್ಷ ಡಾ.ಕೇದಾರೇಶ್ವರ ದಂಡಿನ್ ಮಾತನಾಡಿ, ಆಯುರ್ವೇದವು ನೈಸರ್ಗಿಕ ಗಿಡಮೂಲಿಕೆಗಳು, ಆಹಾರ ಪದ್ಧತಿ, ಮಸಾಜ್‌ಗಳು ಮತ್ತು ಯೋಗದಂತಹ ಜೀವನಶೈಲಿ ಮಾರ್ಪಾಡುಗಳನ್ನು ಬಳಸಿಕೊಂಡು ದೇಹವನ್ನು ಒಳಗಿನಿಂದ ಬಲಪಡಿಸುವ ಮೂಲಕ ಕಾಯಿಲೆಗಳನ್ನು ಗುಣಪಡಿಸುವ ಗುರಿ ಹೊಂದಿದೆ. ಪಂಚಕರ್ಮ ಚಿಕಿತ್ಸೆಗಳು, ಆಹಾರ ನಿಯಂತ್ರಣ, ವಿಶೇಷ ಮಸಾಜ್‌ಗಳು ಆಯುರ್ವೇದ ಚಿಕಿತ್ಸೆಗಳ ಪ್ರಮುಖ ಭಾಗಗಳಾಗಿದ್ದು, ಆಯುರ್ವೇದದ ಚಿಕಿತ್ಸೆಗಳು ರೋಗದ ಮೂಲ ಕಾರಣ ತಲುಪುತ್ತವೆ. ವ್ಯಕ್ತಿಯ ದೈಹಿಕ, ಮಾನಸಿಕ, ಆಧ್ಯಾತ್ಮಿಕ ಆರೋಗ್ಯವನ್ನು ಸಮಗ್ರವಾಗಿ ಸುಧಾರಿಸುತ್ತವೆ. ಆಯುರ್ವೇದವು ಒಬ್ಬ ವ್ಯಕ್ತಿಯ ದೋಷದ ಸ್ಥಿತಿ, ವಯಸ್ಸು ಮತ್ತು ರೋಗದ ಪ್ರಕರವನ್ನು ಆಧರಿಸಿ ವೈಯಕ್ತಿಕ ಚಿಕಿತ್ಸೆಯನ್ನು ನೀಡುತ್ತದೆ ಎಂದರು.ಆಯುಷ್ ಇಲಾಖೆಯ ವೈದ್ಯಾಧಿಕಾರಿ ಸಂಘದ ಜಿಲ್ಲಾಧ್ಯಕ್ಷ ಡಾ.ಕೆ.ಎಚ್. ಗುರುಬಸವರಾಜ್ ಮಾತನಾಡಿದರು.
ಈ ವೇಳೆ ವೈದ್ಯಾಧಿಕಾರಿ ಡಾ.ಮುನಿವಾಸುದೇವ ರೆಡ್ಡಿ, ಎಎಫ್‌ಐ ತಾಲೂಕು ಘಟಕದ ಡಾ.ಬಿ.ವಿ. ಭಟ್, ಡಾ.ಪ್ರಸಾದ್ ಬಾಬು, ಡಾ.ಶೈಲೇಂದ್ರ ಪ್ರತಾಪ್ ಸಿಂಗ್, ಡಾ.ರಾಧಾ ಗುರುಬಸವರಾಜ್, ಡಾ.ಚೇತನ್, ಡಾ.ಸಿಕಂದರ್, ಡಾ.ಹಾಲಮ್ಮ, ಡಾ.ಚಂದ್ರಶೇಖರ್ ಶೆಟ್ಟಿ, ಡಾ.ಬಳಗಾನೂರು ಮಂಜುನಾಥ, ಡಾ.ಸರಸ್ವತಿ ಕೋಟೆ, ಡಾ.ಹೇಮಲತಾ, ಡಾ.ರೂಪ್ ಸಿಂಗ್ ರಾಥೋಡ್, ಡಾ.ಶಿವಶರಣಯ್ಯ, ಡಾ.ಆರತಿ ಹಿರೇಮಠ್, ಡಾ.ಅಶೋಕ್ ಡಾ.ಮಂಜುನಾಥ್ ಹನಸಿ, ಡಾ.ಯಶ್ವಂತ್, ಡಾ.ಧೀರಜ್, ಡಾ.ಸಾಕ್ಷಿ, ಪತಂಜಲಿ ಯೋಗ ಸಂಸ್ಥೆ ಸೇರದಂತೆ ಆಯುಷ್ ಇಲಾಖೆಯ ಸಿಬ್ಬಂದಿ ಭಾಗವಹಿಸಿದ್ದರು.