ಕಾರಟಗಿ: ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸೋಮವಾರದಿಂದ ಶರನ್ನವರಾತ್ರಿ ಉತ್ಸವ ಸಂಭ್ರಮದಿಂದ ಪ್ರಾರಂಭಗೊಂಡಿದೆ.
ಗ್ರಾಮದೇವತೆ ಕೋಟೆಯ ಶ್ರೀ ದ್ಯಾವಮ್ಮ ದೇವಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಅರ್ಚಕ ಬಸವರಾಜ ವಿಶ್ವಕರ್ಮ ನೇತ್ರತ್ವದಲ್ಲಿ ವಿಶೇಷ ಪೂಜೆಯೊಂದಿಗೆ ಸದ್ಭಕ್ತರು, ಸೇವಾಕರ್ತರು ಚಾಲನೆ ನೀಡಿದರು.ನಗರದ ಶ್ರೀದೇವಿ ದೇವಸ್ಥಾನದಲ್ಲಿ ೨೪ ನೇ ವರ್ಷದ ಶರನ್ನವರಾತ್ರಿ ಉತ್ಸವಕ್ಕೆ ಅತ್ಯಂತ ವಿಜೃಂಭಣೆಯಿಂದ ದೇವಸ್ಥಾನ ಸಮಿತಿ ಸರ್ವದಸ್ಯರು ಹರ- ಚರ- ಗುರು ಮೂರ್ತಿಗಳ ಸಾನಿಧ್ಯದಲ್ಲಿ ಚಾಲನೆ ನೀಡಿದರು. ದೇವಸ್ಥಾನದಲ್ಲಿ ಘಟಸ್ಥಾಪನೆಯೊಂದಿಗೆ ಉತ್ಸವಕ್ಕೆ ಧಾರ್ಮಿಕ ಚಾಲನೆ ನೀಡಲಾಯಿತು. ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ನಿಮಿತ್ತ ಹತ್ತು ದಿನಗಳ ಕಾಲ ವಿಶೇಷ ಪೂಜೆಯೊಂದಿಗೆ ಧಾರ್ಮಿಕ ಪೂಜಾ ಕಾರ್ಯಗಳು ಹಾಗೂ ನಿತ್ಯ ದೇವಿಯ ಪುರಾಣ ಪ್ರವಚನ ನಡೆಯುವುದು. ಅಲ್ಲದೆ ದಶಮಿಯ ಮಾರನೆಯ ದಿನ ಅ.೩ ರಂದು ವಿಶೇಷವಾಗಿ ಮಹಿಳೆಯರಿಂದ ಪಲ್ಲಕ್ಕಿ ಉತ್ಸವದೊಂದಿಗೆ ೧೯ ನೇ ವರ್ಷದ ಶ್ರೀದೇವಿಯ ರಥೋತ್ಸವ ಅದ್ಧೂರಿಯಾಗಿ ನಡೆಯುವುದು.
ದೇವಿಕ್ಯಾಂಪ್‌ನ ಶ್ರೀದೇವಿ ಬೀರೇಶ್ವರ ದೇವಸ್ಥಾನದಲ್ಲಿ ಸೋಮವಾರ ೩೬ ನೇ ವರ್ಷದ ಶರನ್ನವರಾತ್ರಿ ಉತ್ಸವಕ್ಕೆ ಅರ್ಚಕರ ಪೌರೋಹಿತ್ಯದಲ್ಲಿ ಹೋಮ, ಹವನ ಸೇರಿದಂತೆ ಧಾರ್ಮಿಕ ಪೂಜಾಕಾರ್ಯಗಳು ನಡೆಸಿ ಬಾಲಾತ್ರಿಪುರ ಸುಂದರಿದೇವಿ ಅಲಂಕಾರ ಮಾಡುವ ಮೂಲಕ ದೇವಸ್ಥಾನ ಟ್ರಸ್ಟ್‌ನ ಸದಸ್ಯರು, ಸದ್ಭಕ್ತರು ಚಾಲನೆ ನೀಡಿದರು. ೧೦ ದಿನಗಳ ಕಾಲ ಶರನ್ನವರಾತ್ರಿ ಉತ್ಸವದ ಅಂಗವಾಗಿ ಜಾತ್ರಾ ಮಹೋತ್ಸವ ತಾಲೂಕಿನಲ್ಲಿಯೇ ಅತಿ ವಿಜೃಂಭಣೆಯಿಂದ ನಡೆಯುವುದು.ಪಟ್ಟಣದ ಸಾಲೋಣಿಯ ಹುಲಿಗೆಮ್ಮ ದೇವಿ ದೇವಸ್ಥಾನದಲ್ಲಿ ಅರ್ಚಕ ಸಂತೋಷಾಚಾರ ನೇತೃತ್ವದಲ್ಲಿ ೨೧ ನೇ ವರ್ಷದ ಶರನ್ನವರಾತ್ರಿ ಉತ್ಸವಕ್ಕೆ ಸೋಮವಾರ ಸಂಭ್ರಮದಿಂದ ಚಾಲನೆ ನೀಡಲಾಯಿತು. ಶರನ್ನವರಾತ್ರಿ ಆರಂಭದ ನಿಮಿತ್ತ ದೇವಸ್ಥಾನದಲ್ಲಿ ನವರಾತ್ರಿ ಉತ್ಸವದ ಮೊದಲ ದಿನದಂದು ವಿಶೇಷ ಪೂಜಾ ಕೈಂಕರ್ಯಗಳು ಜರುಗಿಸಿ ದೇವಿಗೆ ಶ್ರೀ ಪಾರ್ವತಿ ದೇವಿ ಅಲಂಕಾರ ಮಾಡಲಾಗಿತ್ತು.
ವಾಸವಿ ನಗರದ ಕನ್ನಿಕಾಪರಮೇಶ್ವರಿ ದೇವಸ್ಥಾನದಲ್ಲಿ ಶರನ್ನವರಾತ್ರಿ ಉತ್ಸವಕ್ಕೆ ಧಾರ್ಮಿಕ ಪೂಜಾ ಕೈಂಕರ್ಯಗಳೊಂದಿಗೆ ಸೋಮವಾರ ವಿಜೃಂಭಣೆಯಿಂದ ಚಾಲನೆ ನೀಡಿದರು. ದೇವಿಗೆ ವಿಶೇಷ ಅಭಿಷೇಕ, ಅಲಂಕಾರ, ನೈವೇದ್ಯ, ಮಹಾಮಂಗಳಾರತಿ ನಡೆಸಿದರು. ಶರನ್ನವರಾತ್ರಿ ಉತ್ಸವದ ಪ್ರಥಮ ದಿನದ ಅಂಗವಾಗಿ ಅರಿಷಿನ ಕುಂಕುಮ ಅಲಂಕಾರ ಮಾಡಲಾಗಿತ್ತು.ರಾಮನಗರದ ಚಾಮುಂಡೇಶ್ವರಿ ದೇವಿ ದೇವಸ್ಥಾನ, ೧೦ ನೇ ವಾರ್ಡನ ಶ್ರೀ ಬನ್ನಿ ಮಹಾಂಕಾಳಿ ದೇವಸ್ಥಾನ, ಬೂದಗುಂಪ ರಸ್ತೆಯ ಮೂಕಾಂಬಿಕಾ ದೇವಸ್ಥಾನ, ಗ್ಲೊಬಲ್ ಶಾಲೆ ಬಳಿಯ ಶ್ರೀ ಗಾಳಿ ದುರ್ಗಮ್ಮ ದೇವಿ ದೇವಸ್ಥಾನ ಸೇರಿದಂತೆ ತಾಲೂಕಿನಾದ್ಯಂತ ಶಕ್ತಿ ದೇವಿ ದೇವಸ್ಥಾನಗಳಲ್ಲಿ ಸೋಮವಾರ ಘಟಸ್ಥಾಪನೆಯೊಂದಿಗೆ ಶರನ್ನವರಾತ್ರಿ ಉತ್ಸವಕ್ಕೆ ಅದ್ಧೂರಿಯಾಗಿ ಚಾಲನೆ ನೀಡಿದರು. ನಂತರ ವಿಶೇಷ ಪೂಜಾ ಕಾರ್ಯಗಳು ನಡೆಸಿ ನಂದಾದೀಪ ಬೆಳಗಿಸಿ ವಿವಿಧ ಧಾರ್ಮಿಕ ಕಾರ್ಯಗಳು ಜರುಗಿದವು.