ಶಿಸ್ತುಬದ್ಧ ಜೀವನಕ್ಕೆ ಆಯುರ್ವೇದ ಸಹಕಾರಿ: ಶಶಿಕಾಂತ ಶಿವಪುರೆ

KannadaprabhaNewsNetwork | Published : Nov 11, 2023 1:15 AM

ಸಾರಾಂಶ

ಧನ್ವಂತರಿ ಜಯಂತಿ: 8 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ

ಕನ್ನಡಪ್ರಭ ವಾರ್ತೆ ರಾಯಚೂರುಆಯುರ್ವೇದವು ಶಾರೀರಿಕ ಆರೋಗ್ಯ ರಕ್ಷಣೆ ಜೊತೆಗೆ ಶಿಸ್ತುಬದ್ಧ ಜೀವನ ರೂಪಿಸಿಕೊಳ್ಳಲು ಅತ್ಯಂತ ಸಹಕಾರಿಯಾಗುವುದರಿಂದ ಆಯುರ್ವೇದವನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ ಹೇಳಿದರು.

ಸ್ಥಳೀಯ ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಸಭಾಂಗಣದಲ್ಲಿ ಆಯುಷ್ ನಿರ್ದೇಶನಾಲಯ ಬೆಂಗಳೂರು, ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆಯುಷ್ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ಧನ್ವಂತರಿ ಜಯಂತಿ ಅಂಗವಾಗಿ 8ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಪ್ರಯುಕ್ತ ಉಚಿತ ಆರೋಗ್ಯ ತಪಾಸಣೆ ಶಿಬಿರ ಕಾರ್ಕ್ರಮವನ್ನು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.ಪ್ರಸ್ತುತ ದಿನಗಳಲ್ಲಿ ಆಧುನಿಕ ತಂತ್ರಜ್ಞಾನಗಳಿಗೆ ಹೊಂದಿಕೊಂಡು, ವಿಷಪೂರಿತ ಆಹಾರ, ವೇಗವಾದ ಜಗತ್ತಿಗೆ ಅನುಗುಣವಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸದೇ ನಿರ್ಲಕ್ಷ್ಯ ವಹಿಸುತ್ತಿದ್ದು, ಪ್ರತಿದಿನ ಯೋಗ, ಉತ್ತಮ ಆರೋಗ್ಯ ಕ್ರಮವನ್ನು ಅನುಸರಿಸಬೇಕಾಗಿದೆ. ಮತ್ತು ಆಯುರ್ವೇದದ ಬಗ್ಗೆ ಜನರಲ್ಲಿ ಹೆಚ್ಚಿನ ಜಾಗೃತಿ ಮೂಡಿಸುವುದು ಕೂಡ ಅಷ್ಟೆ ಅತ್ಯಗತ್ಯವಾಗಿದೆ ಎಂದು ತಿಳಿಸಿದರು.

ಇದೇ ವೇಳೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸುರೇಂದ್ರಬಾಬು ಮಾತನಾಡಿ, ಪ್ರಾಚೀನ ಕಾಲದಿಂದಲೂ ಪ್ರಚಲಿತವಾಗಿರುವ ಆಯುರ್ವೇದ ಶಾಸ್ತ್ರ ಮನುಷ್ಯನ ದೈಹಿಕ ಆರೋಗ್ಯ ಸುಧಾರಣೆ ಮಾತ್ರವಲ್ಲದೇ ಮಾನಸಿಕ ಆರೋಗ್ಯವನ್ನು ಸುಧಾರಿಸುತ್ತದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆಯುಷ್ ಅಧಿಕಾರಿ ಡಾ.ಶಂಕರಗೌಡ ಪಾಟೀಲ್ ಮಾತನಾಡಿ, ಆಯುರ್ವೇದ ಬಗ್ಗೆ ಆಯುಷ್ ಇಲಾಖೆಯಿಂದ ಗ್ರಾಮೀಣ ಮಟ್ಟದಿಂದ ಹೆಚ್ಚಿನ ಜಾಗೃತಿ ಮತ್ತು ಜ್ಞಾನವನ್ನು ಮೂಡಿಸಲಾಗುತ್ತಿದ್ದು, ಜನರಿಗೆ ಆಯುರ್ವೇದ ಮೂಲಕ ಆರೋಗ್ಯ ರಕ್ಷಣೆಯ ಬಗ್ಗೆ ಮುಂದಿನ ದಿನಗಳಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.

ಇದೇ ವೇಳೆ ಸಾರ್ವಜನಿಕರಿಗೆ ಆಯುಷ್ ಇಲಾಖೆಯಿಂದ ಆಯುರ್ವೇದ ಆರೋಗ್ಯ ಔಷದಿಗಳ ಕಿಟ್‌ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಶಕೀಲ್, ಡಾ.ಅಮ್ಜದ್ ಶರೀಫ್, ಉಪನ್ಯಾಸಕರಾದ ಡಾ.ದೇಶಪಾಂಡೆ, ಡಾ.ಶಂಕರಗೌಡ, ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಸೇರಿ ಇತರರು ಇದ್ದರು.

---10ಕೆಪಿಆರ್ಸಿಆರ್02: ರಾಯಚೂರು ಜಿಲ್ಲಾ ಸರ್ಕಾರಿ ಆಯುರ್ವೇದ ಮತ್ತು ಯುನಾನಿ ಆಸ್ಪತ್ರೆ ಸಭಾಂಗಣದಲ್ಲಿ ಧನ್ವಂತರಿ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ 8 ನೇ ರಾಷ್ಟ್ರೀಯ ಆಯುರ್ವೇದ ದಿನಾಚರಣೆ ಕಾರ್ಯಕ್ರಮವನ್ನು ಜಿಪಂ ಉಪಕಾರ್ಯದರ್ಶಿ ಶಶಿಕಾಂತ ಶಿವಪುರೆ ಉದ್ಘಾಟಿಸಿದರು.

Share this article