ಆಯುರ್ವೇದದಿಂದ ಆರೋಗ್ಯ: ಡಾ. ಬಿ.ಎಸ್. ಶ್ರೀಧರ

KannadaprabhaNewsNetwork | Published : Sep 19, 2024 1:48 AM

ಸಾರಾಂಶ

ಆಧುನಿಕ ಜೀವನ ಶೈಲಿಯಿಂದ ಎದುರಾಗಬಹುದಾದ ರೋಗಗಳ ನಿಯಂತ್ರಣ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಆಯುರ್ವೇದ ಚಿಕಿತ್ಸೆ ಬಹಳ ಸಹಕಾರಿ.

ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದಲ್ಲಿ ವೈದ್ಯ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

ಕನ್ನಡಪ್ರಭ ವಾರ್ತೆ ಕೊಪ್ಪಳ

ಆಧುನಿಕ ಜೀವನ ಶೈಲಿಯಿಂದ ಎದುರಾಗಬಹುದಾದ ರೋಗಗಳ ನಿಯಂತ್ರಣ ಮತ್ತು ಆರೋಗ್ಯಪೂರ್ಣ ಜೀವನಕ್ಕೆ ಆಯುರ್ವೇದ ಚಿಕಿತ್ಸೆ ಬಹಳ ಸಹಕಾರಿ ಎಂದು ಆಯುಷ್‌ ಇಲಾಖೆ ಜಂಟಿ ನಿರ್ದೇಶಕ ಡಾ. ಬಿ.ಎಸ್. ಶ್ರೀಧರ ಹೇಳಿದ್ದಾರೆ.

ಶ್ರೀ ಶಿವಶಾಂತವೀರ ಕಲ್ಯಾಣ ಮಂಟಪದಲ್ಲಿ ನಡೆದ ಶ್ರೀ ಜಗದ್ಗುರು ಗವಿಸಿದ್ದೇಶ್ವರ ಆಯುರ್ವೇದ ಮಹಾವಿದ್ಯಾಲಯದ ವಾರ್ಷಿಕ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಆಯುರ್ವೇದವು ಜೀವನಶೈಲಿ, ಆಹಾರಪದ್ಧತಿಯ ವಿಜ್ಞಾನವಾಗಿದೆ. ಕೇವಲ ರೋಗಗಳಿಗಲ್ಲದೇ ಸ್ವಾಸ್ಥ್ಯ ಕಾಪಾಡಿಕೊಳ್ಳಲು ಆಯುರ್ವೇದ ಬಳಕೆ ಅತ್ಯವಶ್ಯಕವೆಂದರು. ಆಯುರ್ವೇದ ಓದಿದ ವಿದ್ಯಾರ್ಥಿಗಳು ಮುಂದಿನ ದಿನಮಾನಗಳಲ್ಲಿ ದೀರ್ಘಕಾಲೀನ ರೋಗಗಳಿಗೆ ಪಂಚಕರ್ಮ ಚಿಕಿತ್ಸೆ ಹಾಗೂ ಆಯುರ್ವೇದ ಪದ್ಧತಿಯಲ್ಲಿಯೇ ವೃತ್ತಿನಿರತರಾಗುವುದು ಒಳಿತು ಎಂದು ತಿಳಿಸಿದರು. ಇವೆಲ್ಲರ ಜೊತೆಗೆ ಯೋಗ, ಮಾನಸಿಕ ಚಿಕಿತ್ಸೆಗೂ ಪ್ರಾಮುಖ್ಯತೆ ಕೊಡಬೇಕು ಎಂದರು.

ಆಯುರ್ವೇದ ಕಾಲೇಜಿನ ಅಧ್ಯಕ್ಷ ಸಂಜಯ ಕೊತಬಾಳ ಮಾತನಾಡಿ, ವೈದ್ಯರು ಸಮಗ್ರತೆ, ಪರಿಶ್ರಮ, ಪ್ರಾಮಾಣಿಕತೆ ಹಾಗೂ ಸಾಮಾಜಿಕ ಒಳಿತಿಗೆ ಕೆಲಸ ಮಾಡಬೇಕು. ವೈದ್ಯ ವೃತ್ತಿಯಲ್ಲಿ ಮೌಲ್ಯಗಳನ್ನು ಪಾಲಿಸುವುದರ ಜೊತೆಗೆ ನಿರಂತರ ಅಭ್ಯಾಸದ ಅವಶ್ಯಕತೆಯಿದೆ ಎಂದರು.

ಮಹಾವಿದ್ಯಾಲಯದ ಪ್ರಾಂಶುಪಾಲ ಡಾ. ಮಹಾಂತೇಶ ಸಾಲಿಮಠ ಮಾತನಾಡಿ, ಆಧುನಿಕತೆಯ ಯುಗದಲ್ಲಿ ಆಯುರ್ವೇದದ ಸಮಗ್ರ ಜ್ಞಾನವನ್ನು ರೋಗಿಗಳ ಚಿಕಿತ್ಸೆಯಲ್ಲಿ ಬಳಸಿದರೆ ಅತ್ಯಂತ ಉತ್ತಮ ವೈದ್ಯರಾಗಬಹುದು ಎಂದು ಹೇಳಿದರು.

ಈ ಸಮಾರಂಭದಲ್ಲಿ ಸ್ನಾತಕ ಹಾಗೂ ಸ್ನಾತಕೋತ್ತರ ಸೇರಿ ಸುಮಾರು ೧೩೦ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ರಾಜೀವಗಾಂಧಿ ವಿಶ್ವವಿದ್ಯಾಲಯದ ಪದವಿ ವಿಭಾಗದಲ್ಲಿ ಅಂತಿಮ ವರ್ಷದ ಪರೀಕ್ಷೆಯಲ್ಲಿ ಮೊದಲನೇ ಸ್ಥಾನ ಪಡೆದ ಡಾ. ಶ್ರೀರಕ್ಷಾ, ಡಾ. ತ್ರಿವೇಣಿ ಹಾಗೂ ದ್ವಿತೀಯ ಸ್ಥಾನ ಗಳಿಸಿದ ಡಾ. ಮಮತಾ ಜೋಶಿ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ ವಿಶ್ವವಿದ್ಯಾಲಯಕ್ಕೆ ಹತ್ತನೇ ಸ್ಥಾನ ಪಡೆದ ಶಾಲಾಕ್ಯತಂತ್ರ ವಿಭಾಗದ ಡಾ. ಗಗನಾ ಇವರಿಗೆ ಪ್ರಶಸ್ತಿ ನೀಡಲಾಯಿತು.

ರಾಜೀವಗಾಂಧಿ ವಿಶ್ವವಿದ್ಯಾಲಯದ ಯುನಿವರ್ಸಿಟಿ ಬ್ಲ್ಯೂ ಪಡೆದ ಡಾ. ಸಿದ್ಧಾರ್ಥ ಮಾಲಿಪಾಟೀಲ, ಡಾ. ನೇತ್ರಾ ಪೂಜಾರ, ಡಾ. ಚೈತ್ರಾ ಶಾಸ್ತ್ರೀಮಠ ಹಾಗೂ ಡಾ. ಕಾವೇರಿ ಮೇಟಿ ಇವರಿಗೂ ಪ್ರಶಸ್ತಿ ಪ್ರದಾನಿಸಲಾಯಿತು. ಮಹಾವಿದ್ಯಾಲಯದ ಸ್ನಾತಕೋತ್ತರ ವಿಭಾಗದಲ್ಲಿ ಅತ್ಯುತ್ತಮ ವಿದ್ಯಾರ್ಥಿಯ ಪ್ರಶಸ್ತಿಯನ್ನು ಡಾ. ಅಪೂರ್ವಗೆ ನೀಡಲಾಯಿತು. ಉಪಪ್ರಾಂಶುಪಾಲ ಡಾ. ಸುರೇಶ ಹಕ್ಕಂಡಿ ಕಾರ್ಯಕ್ರಮ ವಂದಿಸಿದರು.

Share this article