ಲಕ್ಷ್ಮೇಶ್ವರ: ಪಟ್ಟಣದ ಇತಿಹಾಸ ಪ್ರಸಿದ್ಧ ಸೋಮೇಶ್ವರ ದೇವಸ್ಥಾನದಲ್ಲಿ ನಡೆಯುವ ಲಕ್ಷ ದೀಪೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸೋಣ ಎಂದು ಮಾಜಿ ಶಾಸಕ ಜಿ.ಎಸ್. ಗಡ್ಡದೇವರಮಠ ಹೇಳಿದರು.
ಪಟ್ಟಣದ ಸೋಮೇಶ್ವರ ದೇವಸ್ಥಾನವು ಐತಿಹಾಸಿಕ ಹಿನ್ನೆಲೆಯುಳ್ಳ ದೇವಸ್ಥಾನವಾಗಿದ್ದು. ಪ್ರತಿ ಐದು ವರ್ಷಕ್ಕೊಮ್ಮೆ ನಡೆಯುವ ಲಕ್ಷ ದೀಪೋತ್ಸವವನ್ನು ಅದ್ಧೂರಿಯಾಗಿ ಆಚರಿಸೋಣ. ಜಾತಿ, ಮತ, ಧರ್ಮ, ಪಕ್ಷ ಬೇದಭಾವ ಮರೆತು ಸಹಾಯ-ಸಹಕಾರ, ಸ್ವಯಂ ಪ್ರೇರಣೆದೊಂದಿಗೆ ಪುಲಿಗೆರೆಯ ಆರಾಧ್ಯ ದೈವ ಸೋಮೇಶ್ವರ ದೇವಸ್ಥಾನದ ಲಕ್ಷ ದೀಪೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸೋಣ. ಐತಿಹಾಸಿಕ ಪ್ರಸಿದ್ಧ ಸೋಮೇಶ್ವರ ದೇವಸ್ಥಾನವನ್ನು ಇನ್ಪೋಸಿಸ್ ಪ್ರತಿಷ್ಠಾನದಿಂದ ₹೪.೫ ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರಗೊಳಿಸಿದ ನಂತರ ಪ್ರತಿ ವರ್ಷ ಪುಲಿಗೆರೆ ಉತ್ಸವ ಮಾಡುತ್ತಿದ್ದಾರೆ. ಇದಕ್ಕೆ ಪೂರಕವೆಂಬಂತೆ ೨೦೧೫ ರಿಂದ ಪ್ರತಿ ೫ ವರ್ಷಕ್ಕೊಮ್ಮೆ ಕಾರ್ತಿಕ ಮಾಸದ ೩ನೇ ಸೋಮವಾರ ದೇವಸ್ಥಾನದ ವಿವಿಧ ಕಮೀಟಿಗಳ ಸಹಯೋಗದಲ್ಲಿ ಲಕ್ಷ ದೀಪೋತ್ಸವ ಸಮಾರಂಭ ನಡೆಸುತ್ತಾ ಬರಲಾಗಿದೆ. ಈ ವರ್ಷ ನ. ೧೮ ರಂದು ವಿಶೇಷವಾಗಿ ಲಕ್ಷ ದೀಪೋತ್ಸವ ಆಚರಿಸಲು ಭಕ್ತ ಸಮೂಹ ನಿರ್ಧರಿಸಿದೆ. ಧರ್ಮಸ್ಥಳದ ವಿರೇಂದ್ರ ಹೆಗ್ಗಡೆ, ಪೇಜಾವರ ಶ್ರೀಗಳು, ಕನೇರಿ ಶ್ರೀಗಳು, ಕೊಪ್ಪಳ ಶ್ರೀಗಳು ಹಾಗೂ ಉಡುಪಿ ಶ್ರೀಗಳಿಗೆ ಪಾವನ ಸಾನ್ನಿಧ್ಯ ವಹಿಸಲು ಕೋರಲಾಗಿದೆ.
ಡಾ. ಸುಧಾ ನಾರಾಯಣ ಮೂರ್ತಿ ಸೇರಿ ಅನೇಕ ಗಣ್ಯಮಾನ್ಯರು, ಜನಪ್ರತಿನಿಧಿಗಳಿಗೆ ಆಹ್ವಾನ ನೀಡಲಾಗುವುದು. ಲಕ್ಷ ದೀಪೋತ್ಸವ ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರೂ ಒಗ್ಗಟ್ಟಿನಿಂದ ಶ್ರಮಿಸೋಣ ಎಂದರು.ಮಾಜಿ ಶಾಸಕ ಜಿ.ಎಂ.ಮಹಾಂತಶೆಟ್ಟರ ಮಾತನಾಡಿ, ಭಕ್ತರು ಮನಸ್ಸು ಮಾಡಿದರೆ ಸುಲಭವಾಗಿ ಈ ಕಾರ್ಯ ಮಾಡಲು ಸಾಧ್ಯ. ಈಗಾಗಲೇ ಲಕ್ಷ್ಮೇಶ್ವರದಲ್ಲಿ ದಸರಾ ದರ್ಬಾರ್ ಸೇರಿ ಅನೇಕ ದೊಡ್ಡ ಸಮಾರಂಭಗಳನ್ನು ಎಲ್ಲರಿಗೂ ಮಾದರಿಯಾಗುವಂತೆ ಮಾಡಲಾಗಿದೆ. ಸೋಮೇಶ್ವರ ದೇವಸ್ಥಾನ ಈ ನಾಡಿನ ಎಲ್ಲ ವರ್ಗದ ಜನರ ಶ್ರದ್ಧಾ ಭಕ್ತಿಯ ಪರಮ ಪವಿತ್ರ ಸನ್ನಿಧಿಯಾಗಿದೆ. ದೇವಸ್ಥಾನದ ಅಭಿವೃದ್ಧಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳಿಗೆ ಜಾತಿ, ಧರ್ಮ, ರಾಜಕಾರಣ ಬೆರೆಸುವುದು ಬೇಡ. ಕೊಡುವ ಕೈಗಳು ಸಾಕಷ್ಟಿವೆ, ಅದಕ್ಕಾಗಿ ಮನೆ ಮನೆಗೆ ದೇಣಿಗೆ ಸಂಗ್ರಹ ಬೇಡ. ಎಲ್ಲರೂ ಶ್ರದ್ಧಾ-ಭಕ್ತಿಯಿಂದ ಪಾಲ್ಗೊಂಡರೆ ಕಾರ್ಯಕ್ರಮ ಯಶಸ್ವಿಯಾಗುತ್ತದೆ ಎಂದರು.
ಕಾರ್ಯಕ್ರಮದ ಯಶಸ್ವಿಗಾಗಿ ಕೈಗೊಳ್ಳಬೇಕಾದ ಎಲ್ಲ ರೂಪರೇಷೆಗಳ ಬಗ್ಗೆ ವಿವರವಾದ ಚರ್ಚೆ ಜರುಗಿಸಿ ಅನೇಕ ಭಕ್ತರು ತಮ್ಮ ಸಲಹೆ ಸೂಚನೆ ನೀಡಿದರು.