ನರಸಿಂಹರಾಜಪುರ: ಪರಿಹಾರ ನೀಡಿ ರಸ್ತೆ ವಿಸ್ತರಣೆಗೆ ತೀರ್ಮಾನ

KannadaprabhaNewsNetwork |  
Published : Sep 19, 2024, 01:48 AM IST
ನರಸಿಂಹರಾಜಪುರ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯು ಅಧ್ಯಕ್ಷೆ ಸುರೈಯಾಭಾನು ಅದ್ಯಕ್ಷತೆಯಲ್ಲಿ  ಬುಧವಾರ ನಡೆಯಿತು. | Kannada Prabha

ಸಾರಾಂಶ

ಸಭೆಯಲ್ಲಿ ರಸ್ತೆ ಅಗಲೀಕರಣ ಮಾಡುವ ವಿಚಾರ ಪ್ರಸ್ತಾಪವಾಯಿತು. ರಸ್ತೆ ವಿಸ್ತರಣೆಗೆ ಸರ್ಕಾರದಿಂದ ₹60 ಕೋಟಿ ಬಿಡುಗಡೆಯಾಗುವ ಹಂತದಲ್ಲಿದೆ. ಸರ್ಕಾರದ ಮಾನದಂಡದ ಪ್ರಕಾರ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಬೇಕು

ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ

ಪಟ್ಟಣದ ಬಸ್ ನಿಲ್ದಾಣದಿಂದ ಪ್ರವಾಸಿ ಮಂದಿರದವರೆಗೆ ಹಾಗೂ ಪಟ್ಟಣ ಪಂಚಾಯಿತಿ ಸಮೀಪದ ಮುಖ್ಯರಸ್ತೆಯಿಂದ ಸುಂಕದಕಟ್ಟೆಯವರೆಗೆ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಲು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರೈಯಾ ಭಾನು ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ತೀರ್ಮಾನಿಸಲಾಯಿತು.

ಸಭೆಯಲ್ಲಿ ರಸ್ತೆ ಅಗಲೀಕರಣ ಮಾಡುವ ವಿಚಾರ ಪ್ರಸ್ತಾಪವಾಯಿತು. ರಸ್ತೆ ವಿಸ್ತರಣೆಗೆ ಸರ್ಕಾರದಿಂದ ₹60 ಕೋಟಿ ಬಿಡುಗಡೆಯಾಗುವ ಹಂತದಲ್ಲಿದೆ. ಸರ್ಕಾರದ ಮಾನದಂಡದ ಪ್ರಕಾರ ಪರಿಹಾರ ನೀಡಿ ರಸ್ತೆ ವಿಸ್ತರಣೆ ಮಾಡಬೇಕು. ರಸ್ತೆ ವಿಸ್ತರಣೆ ಮಾಡುವ ಮೊದಲು ಸಂಬಂಧಪಟ್ಟ ವ್ಯಾಪ್ತಿಯಲ್ಲಿರುವ ಖಾತೆದಾರರ ಸಭೆ ಕರೆದು ಚರ್ಚಿಸಬೇಕೆಂದು ತೀರ್ಮಾನಿಸಲಾಯಿತು.

ಪಟ್ಟಣಕ್ಕೆ ಹೊಂದಿಕೊಂಡಿರುವ ನಾಗಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ನಾಟ ಸಂಗ್ರಹಾಲಯ ಇರುವ ಸರ್ವೇ ನಂ194 ರಲ್ಲಿ 35.28 ಎಕರೆ ಗೋಮಾಳಜಾಗವಿದ್ದು ಇದರಲ್ಲಿ 15 ಎಕರೆ ಆಶ್ರಯ ನಿವೇಶನಕ್ಕೆ ಜಮೀನು ಬಿಡಿಸಿಕೊಡುವಂತೆ ಜಿಲ್ಲಾಧಿಕಾರಿಗಳು ಹಾಗೂ ಉಪವಿಭಾಗಾಧಿಕಾರಿಗಳಿಗೆ ಪತ್ರ ಬರೆಯಲು ನಿರ್ಧರಿಸಿತು. ಜಾಗ ಬಿಟ್ಟು ಕೊಡಲು ಅರಣ್ಯ ಇಲಾಖೆಯ ತಕರಾರಿದೆ. ಸರ್ಕಾರಿ ನಾಟ ಸಂಗ್ರಹಾಲಯಕ್ಕೆ ನಾಗರಮಕ್ಕಿಯಲ್ಲಿ ಜಾಗ ಮಂಜೂರಾಗಿದೆ. ಪ್ರಸ್ತುತ ಮರದ ದಿಮ್ಮಿಗಳ ಹರಾಜು ಆನ್ ಲೈನ್ ನಲ್ಲಿ ನಡೆಯುವುದರಿಂದ ಅರಣ್ಯ ಇಲಾಖೆಯವರಿಂದ ಗೋಮಾಳದ ಜಾಗ ಬಿಡಿಸಿಕೊಡಬೇಕು. ಒಂದು ವೇಳೆಗ ನಿವೇಶನ ರಹಿತರಿಗೆ ನಿವೇಶನ ನೀಡಲು ಅರಣ್ಯ ಇಲಾಖೆಯಿಂದ ಜಾಗ ಬಿಡಿಸಿಕೊಡಲು ಜಿಲ್ಲಾಡಳಿತ ಮೀನಾಮೇಷ ಎಣಿಸಿದರೆ ನಿವೇಶನರಹಿತರನ್ನು ಸೇರಿಸಿ ಜಿಲ್ಲಾಧಿಕಾರಿಗಳ ಕಚೇರಿ ಎದುರು ಅಹೋರಾತ್ರಿ ಪ್ರತಿಭಟನೆ ನಡೆಸಲಾಗುವುದು ಎಂದು ಸದಸ್ಯ ಪ್ರಶಾಂತ್ ಶೆಟ್ಟಿ ಎಚ್ಚರಿಕೆ ನೀಡಿದರು.

ಪಟ್ಟಣದ ವ್ಯಾಪ್ತಿಯ 158 ಫಲಾನುಭವಿಗಳಿಗೆ ಆಶ್ರಯ ನಿವೇಶನ ಮಂಜೂರಾಗಿದೆ. ಬಡಾವಣೆ ನಿರ್ಮಾಣಕ್ಕೆ ₹3.71. ಕೋಟಿ ಅನುದಾನ ಬಿಡುಗಡೆಯಾಗಿದ್ದು ಶೀಘ್ರದಲ್ಲೇ ನಿವೇಶನ ಹಂಚಿಕೆ ಮಾಡಲಾಗುವುದು ಎಂದು ಸಭೆಗೆ ಮಾಹಿತಿ ನೀಡಲಾಯಿತು. ಪಟ್ಟಣದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಗೂ ರಾಜ್ಯಪ್ರವಾಸೋದ್ಯಮ ನಿಗಮದ ಅಧ್ಯಕ್ಷ ಎಂ.ಶ್ರೀನಿವಾಸ್ ಅವರ ಕೊಡುಗೆ ಅಪಾರವಾಗಿರುವುದರಿಂದ ಮುಖ್ಯರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಾಗೂ ಪ್ರವಾಸಿಮಂದಿರದ ವೃತ್ತಕ್ಕೆ ಎಂ.ಶ್ರೀನಿವಾಸ್ ಅವರ ಹೆಸರಿಡಲು ಸಭೆಯಲ್ಲಿ ಸರ್ವಾನುಮತದಿಂದ ನಿರ್ಧರಿಸಲಾಯಿತು.

ಪಟ್ಟಣದ ವ್ಯಾಪ್ತಿಯಲ್ಲಿ ವಿದ್ಯುತ್ ಕಂಬಗಳನ್ನು ಬದಲಾಯಿಸುವ ಬಗ್ಗೆ ಪಟ್ಟಣ ಪಂಚಾಯಿತಿಯ ಒಪ್ಪಿಗೆ ಪಡೆಯದೆ ಕಾಮಗಾರಿ ಕೈಗೊಳ್ಳಲಾಗಿದೆ. ಇದರಿಂದ ಹಲವು ಕಡೆ ಕುಡಿಯುವ ನೀರು ಪೂರೈಸುವ ಕೊಳವೆ ಒಡೆದು ಹೋಗಿ ಪಟ್ಟಣ ಪಂಚಾಯಿತಿ ಲಕ್ಷಾಂತರ ರುಪಾಯಿ ನಷ್ಟವಾಗಿದೆ. ಪಟ್ಟಣ ಪಂಚಾಯಿತಿ ಅನುಮತಿ ಪಡೆಯದೆ ಕಾಮಗಾರಿ ಕೈಗೊಂಡಿದ್ದು ತಪ್ಪು ಎಂದು ಮೆಸ್ಕಾಂ ಎಂಜಿನಿಯರ್ ಗೆ ಸಭೆ ಸೂಚಿಸಿತು.

ವಾರ್ಡ್ ನಂ 8ರ ಮುಖ್ಯರಸ್ತೆಯ ಜೀವನ್ ಜ್ಯೋತಿ ಶಾಲೆಯ ಮುಂಭಾಗದಲ್ಲಿ ಚರಂಡಿ ನೀರು ಸರಾಗವಾಗಿ ಹರಿಯದೇ ಸಮಸ್ಯೆಯಾಗುತ್ತಿರುವ ವಿಚಾರ ಚರ್ಚೆಗೆ ಗ್ರಾಸವಾಯಿತು. ಆ ಸ್ಥಳದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಂಡು ನೀರು ಸರಾಗವಾಗಿ ಹರಿಯುವಂತೆ ಕಾಮಗಾರಿ ಕೈಗೊಳ್ಳುವಂತೆ ಸಭೆ ಸೂಚಿಸಿತು. ಪಟ್ಟಣದ ವ್ಯಾಪ್ತಿಯಲ್ಲಿ ಗ್ರಾಮಠಾಣಾ, ಕಾಫಿ ಖರಾಬು, ಬಂಜರು ಪ್ರದೇಶದಲ್ಲಿ ಮನೆ ನಿರ್ಮಿಸಿಕೊಂಡಿರುವ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡುವ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮತ್ತು ರಾಜೀವ ಗಾಂಧಿವಸತಿ ನಿಗಮಕ್ಕೆ ಪತ್ರ ಬರೆದರೂ ಸರಿಯಾದ ಮಾಹಿತಿ ನೀಡುತ್ತಿಲ್ಲ. ಇದರಿಂದ ಹಕ್ಕು ಪತ್ರಕೊಡಲು ಸಮಸ್ಯೆಯಾಗಿದ್ದು ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆಯಲು ತೀರ್ಮಾನಿಸಲಾಯಿತು.

ಬಸ್ ನಿಲ್ದಾಣದಲ್ಲಿ ತಂಗುತ್ತಿರುವ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಮತ್ತು ನಿರ್ವಾಹಕರಿಗೆ ವಿಶ್ರಾಂತಿ ಗೃಹ ಮತ್ತು ಮೂಲ ಸೌಕರ್ಯ ಒದಗಿಸಲು ಸಭೆ ಒಪ್ಪಿಗೆ ಸೂಚಿಸಿತು. ಅಧ್ಯಕ್ಷತೆಯನ್ನು ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುರಯ್ಯ ಭಾನು ವಹಿಸಿದ್ದರು. ಉಪಾಧ್ಯಕ್ಷೆ ಉಮಾಕೇಶವ್, ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಹಾಗೂ ಎಲ್ಲಾ ಸದಸ್ಯರು ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಲು ಸಾಲು ರಜೆ, ಪ್ರವಾಸಿ ತಾಣ ರಷ್‌
ಭೂಮಿ ಮಾರಿದ ಇನ್ಫಿ ಬಗ್ಗೆ ಕಾರ್ತಿ ತೀವ್ರ ಆಕ್ರೋಶ