ಕುಕನೂರು: ಕೊಪ್ಪಳ ವಿಶ್ವವಿದ್ಯಾಲಯಕ್ಕೆ ಭದ್ರ ಬುನಾದಿ ಹಾಕಿದ್ದು ಬಿ.ಕೆ. ರವಿ. ವಿಶ್ವವಿದ್ಯಾಲಯ ಸ್ಥಾಪಿಸುವಲ್ಲಿ ಅವರ ಪರಿಶ್ರಮ ಹಿರಿದು ಎಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು ಮತ್ತು ಹಿರಿಯ ಹೋರಾಟಗಾರ ಪ್ರೊ.ಅಲ್ಲಮಪ್ರಭು ಬೆಟ್ಟದೂರ ಹೇಳಿದರು.
ಬಿ.ಕೆ.ರವಿ ಕೊಪ್ಪಳ ವಿಶ್ವವಿದ್ಯಾಲಯದ ಕಡೆ ಜನರನ್ನು ಕೊಂಡೊಯ್ದರು. ನಮ್ಮ ಜಿಲ್ಲೆಯ ಮಕ್ಕಳು ಪದವಿ,ಸ್ನಾತಕೋತ್ತರ ಪದವಿ ವಿದ್ಯಾಭ್ಯಾಸಕ್ಕೆ ಬೇರೆ ಊರುಗಳಿಗೆ, ಜಿಲ್ಲೆಗಳಿಗೆ ಹೋಗುವ ಪರಿಸ್ಥಿತಿ ಇತ್ತು.ಆದರೆ ನಮ್ಮ ಜಿಲ್ಲೆಯ ಹೆಮ್ಮೆ ನಮ್ಮ ಕೊಪ್ಪಳ ವಿಶ್ವವಿದ್ಯಾಲಯ ಸ್ಥಾಪನೆ ನಂತರ ನಮ್ಮ ಜಿಲ್ಲೆಯ ಮಕ್ಕಳಿಗೆ ಹೆಚ್ಚಿನ ಅನುಕೂಲವಾಗಿದೆ. ಕೊಪ್ಪಳ ವಿವಿಯ ಸ್ನಾತಕೋತ್ತರ ಕೇಂದ್ರಗಳನ್ನೂ ತಾಲೂಕುಗಳಲ್ಲಿ ಸ್ಥಾಪಿಸಲಾಗಿದ್ದು, ಸ್ಥಳೀಯವಾಗಿ ಶೈಕ್ಷಣಿಕ ಸೌಲಭ್ಯ ದೊರೆಯುವಂತಾಗಿದೆ. ಇದರ ಪ್ರಮುಖ ರೂವಾರಿ ಪ್ರೊ. ಬಿ.ಕೆ ರವಿ ಎಂದು ಹೇಳಿದರು.
ಸನ್ಮಾನಿತರಾಗಿ ಮಾತನಾಡಿದ ಸಂಸ್ಥಾಪನಾ ಕುಲಪತಿ ಪ್ರೊ ಬಿ.ಕೆ ರವಿ, ಯಾವುದೇ ಒಂದು ವಿಶ್ವವಿದ್ಯಾಲಯ ಸಂಸ್ಥಾಪನೆ ಮಾಡಿ ಮುನ್ನಡೆಸುವುದು ಸುಲಭದ ಮಾತಲ್ಲ. ಅದರ ಹಿಂದೆ ಕಾಣದ ಕೈಗಳ ಪರಿಶ್ರಮ ಕೂಡ ಇರುತ್ತದೆ. ಕೊಪ್ಪಳ ಜನತೆ ಮತ್ತು ಜನಪ್ರತಿನಿಧಿಗಳು ವಿಶ್ವವಿದ್ಯಾಲಯ ಸಂಸ್ಥಾಪಿಸುವಲ್ಲಿ ಹಲವು ರೀತಿಯಲ್ಲಿ ಕಾರಣೀಭೂತರಾಗಿದ್ದಾರೆ. ಇಲ್ಲಿನ ವಿದ್ಯಾರ್ಥಿಗಳನ್ನು ವಿದ್ಯಾವಂತರನ್ನಾಗಿ ಮಾಡುವುದು,ಶೈಕ್ಷಣಿಕವಾಗಿ ಉನ್ನತ ಮಟ್ಟಕ್ಕೆ ಕೊಂಡೊಯ್ಯುವುದು ವಿವಿಯ ಆದ್ಯತೆ. ಕೊಪ್ಪಳ ವಿವಿ ಕುಲಪತಿ ಆಗಿದ್ದ ಸಂದರ್ಭದಲ್ಲಿ ಸಾಹಿತಿಗಳು, ಹೋರಾಟಗಾರರು, ಪತ್ರಕರ್ತರು, ಬಹುತೇಕ ಜನ ನನಗೆ ಸಹಕರಿಸಿದ್ದಾರೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಪ್ಪಳ ವಿವಿಯ ಪ್ರಭಾರಿ ಕುಲಪತಿ ಪ್ರೊ. ಎಸ್.ಬಿ. ಡಾಣಿ ಮಾತನಾಡಿ, ವಿದ್ಯಾರ್ಥಿಗಳು ಕೇವಲ ಪಠ್ಯಕ್ಕೆ ಸೀಮಿತವಾಗದೆ, ಪಠ್ಯೇತರ ಚಟುವಟಿಕೆ, ಸಮಾಜಮುಖಿ ಕೆಲಸಗಳಲ್ಲಿಯೂ ತೊಡಗಿಕೊಳ್ಳಬೇಕು. ಶಿಕ್ಷಣವು ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದ್ದು ವಿದ್ಯಾರ್ಥಿಗಳು ಸಮಾಜಕ್ಕೆ ಉತ್ತಮ ಪ್ರಜೆಯಾಗಬೇಕು ಎಂದು ಹೇಳಿದರು.