ಇಂದು ಉಡುಪಿಯಲ್ಲಿ ಜನಾಕ್ರೋಶ ಯಾತ್ರೆ: ಬಿ.ವೈ.ವಿಜಯೇಂದ್ರ ಭಾಗಿ

KannadaprabhaNewsNetwork | Published : Apr 10, 2025 1:18 AM

ಸಾರಾಂಶ

ಕಾಂಗ್ರೆಸ್ ಸರ್ಕಾರ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಬೇಕಾಬಿಟ್ಟಿ ಏರಿಸುತ್ತಿದೆ. ಇದರ ವಿರುದ್ಧ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ಸಾರಥ್ಯದ ನಡೆಯುತ್ತಿರುವ ಜನಾಕ್ರೋಶ ಯಾತ್ರೆ ಏ.10ರಂದು ಜಿಲ್ಲೆಗೆ ಆಗಮಿಸಲಿದೆ.

ಕನ್ನಡಪ್ರಭ ವಾರ್ತೆ ಉಡುಪಿ

ರಾಜ್ಯದ ಜನತೆಗೆ ಚುನಾವಣಾ ಪೂರ್ವದಲ್ಲಿ ನೀಡಿದ್ದ ಗ್ಯಾರಂಟಿ ಭರವಸೆಗಳನ್ನು ಈಡೇರಿಸಲು ಅಗತ್ಯ ಸಂಪನ್ಮೂಲದ ಸಂಗ್ರಹಕ್ಕಾಗಿ ಕಾಂಗ್ರೆಸ್ ಸರ್ಕಾರ ದಿನನಿತ್ಯ ಬಳಕೆಯ ವಸ್ತುಗಳ ಬೆಲೆ ಬೇಕಾಬಿಟ್ಟಿ ಏರಿಸುತ್ತಿದೆ. ಇದರ ವಿರುದ್ಧ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ. ವಿಜಯೇಂದ್ರ ಸಾರಥ್ಯದ ನಡೆಯುತ್ತಿರುವ ಜನಾಕ್ರೋಶ ಯಾತ್ರೆ ಏ.10ರಂದು ಜಿಲ್ಲೆಗೆ ಆಗಮಿಸಲಿದೆ.ಈ ಯಾತ್ರೆಯ ಬಗ್ಗೆ ಬಿಜೆಪಿ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಕುಂದಾಪುರ ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಅಂದು ಬೆಳಗ್ಗೆ 10 ಗಂಟೆಗೆ ಶ್ರೀಕೃಷ್ಣ ಮಠದ ರಾಜಾಂಗಣದ ಪಾರ್ಕಿಂಗ್ ಪ್ರದೇಶದಲ್ಲಿ ಬಿ.ವೈ. ವಿಜಯೇಂದ್ರ ಜನಾಕ್ರೋಶ ಜಾಥಾಕ್ಕೆ ಚಾಲನೆ ನೀಡಲಿದ್ದಾರೆ. ಸುಮಾರು 6 ಸಾವಿರ ಮಂದಿ ಭಾಗವಹಿಸುವ ಈ ಜಾಥಾವು ಕಲ್ಸಂಕ, ಕಡಿಯಾಳಿ ಮಾರ್ಗವಾಗಿ ಬಿಜೆಪಿ ಕಚೇರಿಯ ಹಿಂಭಾಗದ ಮೈದಾನದ ವರೆಗೆ ಸಾಗಲಿದ್ದು, ಅಲ್ಲಿ ಸಮಾವೇಶ ನಡೆಯಲಿದೆ ಎಂದರು. ಜಾಥಾದಲ್ಲಿ ವಿವಿಧ ಮೋರ್ಚಾ, ಮಂಡಲಗಳಿಂದ ವಿನೂತನ ಟ್ಯಾಬ್ಲೋ ನಿರ್ಮಿಸಿ ಪ್ರತಿಭಟನೆ ನಡೆಸಲಿದ್ದಾರೆ. ವಿಧಾನಸಭೆ ವಿಪಕ್ಷ ನಾಯಕ ಆರ್. ಅಶೋಕ್, ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ರಾಜ್ಯದ ಪ್ರಮುಖರ ತಂಡ ಪಾಲ್ಗೊಳಲಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕುಮಾರ್ ಕೊಡ್ಗಿ, ಗುರುರಾಜ್ ಗಂಟಿಹೊಳೆ, ಮಂಗಳೂರು ವಿಭಾಗ ಪ್ರಭಾರಿ ಕಿದಿಯೂರು ಉದಯ್ ಕುಮಾರ್ ಶೆಟ್ಟಿ, ಜಿ.ಪ್ರ‌.ಕಾರ್ಯದರ್ಶಿ ರೇಶ್ಮಾ ಶೆಟ್ಟಿ, ರಾಘವೇಂದ್ರ ಕಿಣಿ, ಮಾಜಿ ಜಿಲ್ಲಾಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್ ಉಪಸ್ಥಿತರಿದ್ದರು. .............

ಅನುದಾನ ಬರುತ್ತಿಲ್ಲ: ಸುರೇಶ್‌ ಶೆಟ್ಟಿಕಾಪು ಶಾಸಕ ಸುರೇಶ್ ಶೆಟ್ಟಿ ಮಾತನಾಡಿ, ರಾಜ್ಯ ಸರ್ಜಾರದಿಂದ ವಿಧಾನಸಭಾ ಕ್ಷೇತ್ರಗಳಿಗೆ ಯಾವುದೇ ಅನುದಾನ ಬರುತ್ತಿಲ್ಲ. ಬಜೆಟ್‌ನಲ್ಲಿ ಕಾಪು ಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿ 3 ಕೋಟಿ ರು. ನೀಡುತ್ತೇನೆ ಎಂದು ಭರವಸೆ ನೀಡಿದ್ದರು. ಆದರೆ ಒಂದೇ ಒಂದು ರೂಪಾಯಿ ನೀಡಿಲ್ಲ. ಹೀಗಾದರೇ ಕ್ಷೇತ್ರದ ಅಭಿವೃದ್ಧಿಯನ್ನು ಹೇಗೆ ಮಾಡುವುದು..? ನಮ್ಮನ್ನು ಆಯ್ಕೆ ಮಾಡಿದ ಜನರಿಗೆ ಏನೆಂದು ಉತ್ತರಿಸಬೇಕು ಎಂದು ಅಸಹಾಯಕತೆಯನ್ನು ತೋಡಿಕೊಂಡರು.

Share this article