ಕನ್ನಡಪ್ರಭ ವಾರ್ತೆ ಪುತ್ತೂರು
ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವರ ವರ್ಷಾವಧಿ ಜಾತ್ರೆ ಗುರುವಾರ ಆರಂಭಗೊಂಡು ಹತ್ತು ದಿನಗಳ ಕಾಲ ಸಂಭ್ರಮ ಸಡಗರದಿಂದ ನಡೆಯಲಿದೆ.ಜಾತ್ರೋತ್ಸವದಲ್ಲಿ ಪ್ರತಿ ದಿನ ಶ್ರೀ ದೇವರ ಉತ್ಸವ ಬಲಿ, ಪೇಟೆ ಸವಾರಿಯೊಂದಿಗೆ ಕಟ್ಟೆ ಪೂಜೆ ಸ್ವೀಕಾರ ನಡೆಯಲಿದ್ದು, ಪ್ರತಿ ದಿನ ಸಂಜೆ ದೇವಳದ ನಟರಾಜ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ಈ ಬಾರಿ ಜಾತ್ರಾ ಮಹೋತ್ಸವ ಸಂದರ್ಭಅನ್ನಪ್ರಸಾದ ವಿತರಣೆ ದೇವಳದ ಕೆರೆಯ ಬಳಿ ನಡೆಯಲಿದೆ. ಜೊತೆಗೆ ಈ ಬಾರಿ ವಿಶೇಷವಾಗಿ ಶಿವಪೂಜೆ ಸೇವೆ ಇರಲಿದೆ.
ಶಾಸಕ ಅಶೋಕ್ ಕುಮಾರ್ ರೈ ಮಾರ್ಗದರ್ಶನಂತೆ ಉತ್ಸವಾದಿಗಳು ಸಮಯಕ್ಕೆ ಸರಿಯಾಗಿ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.ಗುರುವಾರ ಬೆಳಗ್ಗೆ ಧ್ವಜಾರೋಹಣ ನಡೆಯಲಿದೆ. ಮಧ್ಯಾಹ್ನ ಕುರಿಯ ಮಾಡಾವು ಏಳ್ಳಾಡುಗುತ್ತು ಕುಟುಂಬದವರಿಂದ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ಸಂಜೆಯಿಂದ ಶ್ರೀ ದೇವರ ಪೇಟೆ ಸವಾರಿ ಆರಂಭಗೊಳ್ಳಲಿದೆ. ಪೇಟೆ ಸವಾರಿಯುದ್ದಕ್ಕೂ ಪ್ರತಿ ಕಟ್ಟೆಯಲ್ಲೂ ಶ್ರೀ ದೇವರು ಪೂಜೆ ಸ್ವೀಕರಿಸಲಿದ್ದಾರೆ. ರಾತ್ರಿ ಅಂಕುರಾರ್ಪಣೆ ಬಲಿ ಹೊರಟು ಉತ್ಸವ, ಬೊಳುವಾರು ಶ್ರೀರಾಮಪೇಟೆ ಕಾರ್ಜಾಲು, ರಕೇಶ್ವರಿ ದೇವಸ್ಥಾನ, ಕಲ್ಲೇಗ, ಕರ್ಮಲ ಸವಾರಿ ನಡೆಯಲಿದೆ.
೧೧ಕ್ಕೆ ಮಧ್ಯಾಹ್ನ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದವರಿಂದ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ ನೆಲ್ಲಿಕಟ್ಟೆ, ಸಾಲ್ಮರ, ಸೂತ್ರಬೆಟ್ಟು ಸವಾರಿ, ಏ.೧೨ಕ್ಕೆ ಶಿವಪೇಟೆ, ತೆಂಕಿಲ, ಕೊಟ್ಟಿಬೆಟ್ಟು ಏಳ್ಳಾಡುಗುತ್ತು, ಬೈಪಾಸ್ ಹೆದ್ದಾರಿ, ರಾಧಾಕೃಷ್ಣ ಮಂದಿರ ಸವಾರಿ.ಏ.೧೩ರಂದು ಮೇಷ ಸಂಕ್ರಮಣ ಕೋರ್ಟ್ ರಸ್ತೆ, ಸೈನಿಕ ಭವನ ರಸ್ತೆ, ಬಪ್ಪಳಿಗೆ, ಉರ್ಲಾಂಡಿ, ಬೊಳುವಾರುಬೈಲು ಸವಾರಿ, ಏ.೧೪ರಂದು ಸೌರಮಾನ ಯುಗಾದಿ(ವಿಷು)ಬೆಳಿಗ್ಗೆ ಉತ್ಸವ, ವಸಂತಕಟ್ಟೆಪೂಜೆ, ರಾತ್ರಿ ಉತ್ಸವ, ಬಂಡಿ ಉತ್ಸವ, ಕೊಂಬೆಟ್ಟು, ಬೊಳುವಾರು, ಹಾರಾಡಿ, ತಾಳೆಪ್ಪಾಡಿ, ದ್ರಾವಿಡ ಬ್ರಾಹ್ಮಣ ಹಾಸ್ಟೇಲ್, ಸಕ್ಕೆರೆಕಟ್ಟೆ ಸವಾರಿ, ಏ.೧೫ಕ್ಕೆ ಬನ್ನೂರು, ಅಶೋಕನಗರ, ರೈಲ್ವೇ ಮಾರ್ಗ ಸವಾರಿ, ಏ.೧೬ಕ್ಕೆ ಬೆಳಿಗ್ಗೆ ತುಲಾಭಾರ ಸೇವೆ, ರಾತ್ರಿ ಬಲ್ನಾಡು ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಮಾಮೂಲು ಪ್ರಕಾರ ಬರುವ ಕಿರುವಾಳು, ಪಾಲಕಿ ಉತ್ಸವ, ಸಣ್ಣರಥೋತ್ಸವ, ಕೆರೆ ಉತ್ಸವ, ತೆಪ್ಪೋತ್ಸವ ನಡೆಯಲಿದೆ.
ಏ.೧೭ರಂದು ಬೆಳಿಗ್ಗೆ ಉತ್ಸವ ವಸಂತಕಟ್ಟೆಪೂಜೆ, ದರ್ಶನ ಬಲಿ, ಬಟ್ಟಲು ಕಾಣಿಕೆ, ಬ್ರಹ್ಮರಥ ದಾನಿ ದಿ.ನೆಟ್ಟಾಳ ಮುತ್ತಪ್ಪ ರೈ ದೇರ್ಲ ಇವರ ಸ್ಮರಣಾರ್ಥ ಮಧ್ಯಾಹ್ನ ಅನ್ನಸಂತರ್ಪಣೆ, ರಾತ್ರಿ ಗಂಟೆ ೭.೩೦ರಿಂದ ಉತ್ಸವ, ಸಿಡಿಮದ್ದು ಪ್ರದರ್ಶನ(ಪುತ್ತೂರು ಬೆಡಿ), ಬ್ರಹ್ಮರಥೋತ್ಸವ ನಡೆಯಲಿದೆ. ಬಳಿಕ ಬಂಗಾರ್ ಕಾಯರ್‌ಕಟ್ಟೆ ಸವಾರಿ, ಶ್ರೀ ದಂಡನಾಯಕ ಉಳ್ಳಾಲ್ತಿ ದೈವಗಳ ಬೀಳ್ಕೊಡುಗೆ, ಶ್ರೀ ಭೂತಬಲಿ, ಶಯನ ನಡೆಯಲಿದೆ. ಏ.೧೮ಕ್ಕೆ ಬೆಳಿಗ್ಗೆ ಗಂಟೆ ೭.೩೦ಕ್ಕೆ ಬಾಗಿಲು ತೆರೆಯುವ ಮುಹೂರ್ತ, ತುಲಾಭಾರ ಸೇವೆ, ಸಂಜೆ ಗಂಟೆ ೩.೩೦ರಿಂದ ವೀರಮಂಗಲ ಅವನೃತ ಸ್ನಾನಕ್ಕೆ ಸವಾರಿ ನಡೆಯಲಿದೆ.ಏ.೧೯ಕ್ಕೆ ಬೆಳಗ್ಗೆ ಧ್ವಜಾವರೋಹಣ, ರಾತ್ರಿ ಚೂರ್ಣೋತ್ಸವ ವಸಂತ ಪೂಜೆ ಪ್ರಾರಂಭಗೊಳ್ಳಲಿದೆ. ಹುಲಿ ಭೂತ, ರಕೇಶ್ವರಿ ನೇಮ ನಡೆಯಲಿದೆ. ಏ.೨೦ಕ್ಕೆ ಸಂಪ್ರೋಕ್ಷಣೆ, ರಾತ್ರಿ ಮಂತ್ರಾಕ್ಷತೆ, ಅಂಣತ್ತಾಯ, ಪಂಜುರ್ಲಿ, ವಗೈರೆ ದೈವಗಳ ನೇಮ ನಡೆಯಲಿದೆ ಎಂದವರು ತಿಳಿಸಿದರು.
ಎಲ್ಲಾ ಉತ್ಸವಾದಿಗಳಲ್ಲಿ ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಪ್ರಧಾನ ಅರ್ಚಕ ವೇ.ಮೂ ವಸಂತ ಕೆದಿಲಾಯ ಅವರು ದೇವಳದ ಒಳಾಂಗಣದ ಅರ್ಚಕ ವ್ಯವಸ್ಥೆಯಲ್ಲಿ, ಉಳಿದಂತೆ ಈಶ್ವರ ಬೆಡೇಕರ್, ಕೃಷ್ಣವೇಣಿ, ನಳಿನಿ ಪಿ ಶೆಟ್ಟಿ, ದಿನೇಶ್ ಕುಲಾಲ್, ಮಹಾಬಲ ರೈ ವಳತ್ತಡ್ಕ, ಸುಭಾಶ್ ರೈ ಬೆಳ್ಳಿಪ್ಪಾಡಿ, ವಿನಯ ಕುಮಾರ್ ಸುವರ್ಣ ಅವರ ವ್ಯವಸ್ಥಿತ ಜೋಡಣೆಯಂದಿಗೆ ಎಲ್ಲಾ ಕಾರ್ಯಕ್ರಮಗಳು ಅಚ್ಚುಕಟ್ಟಾಗಿ ನಡೆಯಲಿದೆ.ಜಾತ್ರೆಯ ಸಲುವಾಗಿ ಏ.೧೭ರ ಬ್ರಹ್ಮರಥೋತ್ಸವದ ಸಂದರ್ಭ ಬಿಟ್ಟು ಉಳಿದ ದಿನ ಏ.೧೦ರಿಂದ ಪ್ರತಿ ದಿನ ಸಂಜೆಯಿಂದ ರಾತ್ರಿವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ದೇವಳದ ನಟರಾಜ ವೇದಿಕೆಯಲ್ಲಿ ನಡೆಯಲಿದೆ. ಸಂಜೆ ಗಂಟೆ ೫ರಿಂದ ರಾತ್ರಿ ಗಂಟೆ ೧೦ರ ಒಳಗೆ ಸಾಂಸ್ಕೃತಿಕ ಕಾರ್ಯಕ್ರಮ ಮುಗಿಯಲಿದೆ ಎಂದು ಅಧ್ಯಕ್ಷ ಈಶ್ವರ ಭಟ್ ಪಂಜಿಗುಡ್ಡೆ ತಿಳಿಸಿದ್ದಾರೆ.