ಕನ್ನಡಪ್ರಭ ವಾರ್ತೆ ವಿಜಯಪುರ ಸಾಹಿತ್ಯವನ್ನು ಉಳಿಸಿ ಹೊಸ ಸಾಹಿತ್ಯ ಬೆಳೆಸುವ ಜವಾಬ್ದಾರಿ ಇಂದಿನ ಸಾಹಿತಿಗಳ ಮೇಲಿದೆ. ಬಂಡಾಯ ಸಾಹಿತ್ಯದ ಒಲವುಳ್ಳ ಡಾ.ರೇಖಾ ಮುಂಬರುವ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷರಾಗಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಆಶಿಸಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸಾಹಿತ್ಯವನ್ನು ಉಳಿಸಿ ಹೊಸ ಸಾಹಿತ್ಯ ಬೆಳೆಸುವ ಜವಾಬ್ದಾರಿ ಇಂದಿನ ಸಾಹಿತಿಗಳ ಮೇಲಿದೆ. ಬಂಡಾಯ ಸಾಹಿತ್ಯದ ಒಲವುಳ್ಳ ಡಾ.ರೇಖಾ ಮುಂಬರುವ ಕಸಾಪ ಸಮ್ಮೇಳನದ ಸರ್ವಾಧ್ಯಕ್ಷರಾಗಲಿ ಎಂದು ಕಸಾಪ ಜಿಲ್ಲಾಧ್ಯಕ್ಷ ಹಾಸಿಂಪೀರ ವಾಲಿಕಾರ ಆಶಿಸಿದರು.
ನಗರದ ಗ್ಯಾಲಕ್ಸಿ ಸಭಾಭವನದಲ್ಲಿ ಸಿದ್ದಾರ್ಥ ಪ್ರಕಾಶನ ಮತ್ತು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಡಾ.ರೇಖಾ ಬಸವರಾಜ ಪಾಟೀಲರ ಅವಳು ಗಜಲ್ ಕೃತಿ ಲೋಕಾರ್ಪಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ವೈದ್ಯೆ ಡಾ.ರೇಖಾ ಪಾಟೀಲ ಮಹಿಳಾ ಪರ ಚಿಂತಕಿ ಶಿಬಿರ, ಕಮ್ಮಟ, ಸಮ್ಮೇಳನಗಳಲ್ಲಿ ಬೇರೆ ಬೇರೆ ವಿಷಯಗಳ ಮೇಲೆ ಉಪನ್ಯಾಸ ನೀಡಿದ ಪ್ರಭುತ್ವ ಅವರದ್ದು. ತಮ್ಮ ಜೀವನದ ಅನುಭವ ಧಾರೆ ಎರೆದು ರಚಿಸಿದ ಅವಳು ಗಜಲ್ ಸಂಕಲನ ಸಾಹಿತ್ಯ ಲೋಕದ ಮೈಲುಗಲ್ಲಾಗಲಿ ಎಂದು ಹೇಳಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ವೆಂಕಟಗಿರಿ ದಳವಾಯಿ ಮಾತನಾಡಿ, ಅವನು ಅವಳಾಗಬಹುದು. ಅವಳು ಅವನಾಗಬಹುದು. ಆದರೆ ಅವಳು ಅವಳಾಗುವುದು ಕಷ್ಟಸಾಧ್ಯ. ಬೇರೆ ಬೇರೆ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರು ತಮ್ಮ ಅನುಭವಗಳನ್ನು ಸಾಹಿತ್ಯದ ಮೂಲಕ ಹೊರ ತರಬೇಕು. ಪುಸ್ತಕ ಕೊಂಡು ಓದುವುದು ಕೂಡ ಸಾಹಿತ್ಯದ ಒಂದು ಭಾಗ. ಈ ಕೃತಿಯಲ್ಲಿ ೫೨ ಮೌಲ್ಯಯುತವಾದ ಗಜಲಗಳಿವೆ. ಜೀವ ಪರವಾದ ಅಂಶವೇ ಸ್ತ್ರೀವಾದ. ಅದನ್ನು ಈ ಕೃತಿ ಉದ್ದಕ್ಕೂ ನೋಡಲು ಸಾಧ್ಯ. ಪತಿವೃತೆ ಹೆಣ್ಣಿಗೆ ಎಷ್ಟು ಮುಖ್ಯವೋ ಪತ್ನಿವೃತವೂ ಗಂಡಿಗೆ ಅಷ್ಟೆ ಮುಖ್ಯ. ಪುರುಷನೆಂಬ ಅಹಂಕಾರ ಕಳೆದಾಗಲೇ ಮನಸ್ಸು ಮಾಗುವುದು ಎಂದರು.
ಗ್ರಂಥಕರ್ತೆ ರೇಖಾ ಪಾಟೀಲ ಮಾತನಾಡಿ, ವಿಜಯಪುರ ಭೌತಿಕವಾಗಿ ಬರಗಾಲ ನಾಡು ಎಂದು ಕರೆದರೂ ಇದು ಪ್ರೀತಿ ಸೆಲೆಯ ತವರು. ಎಲ್ಲಾ ಸಾಹಿತಿಗಳ ಕೃತಿ ರತ್ನಗಳ ಸಂಗಮದಲ್ಲಿ ಮಿಂದವಳು ನಾನು. ಹಿರಿಯ ಬರಹಗಾರರ ಕೃತಿಗಳ ಓದು ಹಾಗೂ ಸಾಹಿತ್ಯ ಸ್ಪಂದನ ಬಳಗವೇ ನನ್ನ ಕೃತಿಗೆ ಪ್ರೇರಣೆ ಎಂದರು.
ಸಂಗಾತಿ ಎಂದು, ಸಹೋದರಿ ಎಂದು, ತಾಯಿ ಮಗಳೆಂದು ತಮ್ಮ ಸರಿಸಮಾನವಾಗಿ ನಡೆಸಿದರೆ ಅದುವೆ ಪುರುಷ ಸಮಾಜ ಹೆಣ್ಣಿಗೆ ಕೊಡುವ ಗೌರವ. ಹೆಣ್ಣಾಗಿ ಹುಟ್ಟಿದ್ದಕ್ಕೆ ಹೆಮ್ಮೆ ಪಟ್ಟುಕೊಳ್ಳುವ ಮಹಿಳೆಯರು ತಮ್ಮ ಕಟು ಅನುಭವಗಳನ್ನು ಬರಹದ ಮೂಲಕ ಹಂಚಿಕೊಳ್ಳಬೇಕು. ಹೆಣ್ಣಿಗೆ ಹೆಣ್ಣೆ ಶತ್ರು ಎಂಬ ಪಟ್ಟವನ್ನು ಪುರುಷರು ಕಟ್ಟಿದ್ದೆ ಹೊರತು ಮಹಿಳೆಯರಲ್ಲ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.