ಬಳ್ಳಾರಿ: ದೇಶಕ್ಕೆ ಆಹಾರ ಭದ್ರತೆ ಒದಗಿಸುವಲ್ಲಿ ಮತ್ತು ಕೃಷಿ ಕ್ಷೇತ್ರದಲ್ಲಿ ಕ್ರಾಂತಿಕಾರಿ ಬದಲಾವಣೆ ತರುವಲ್ಲಿ ಡಾ.ಬಾಬು ಜಗಜೀವನರಾಮ್ ಅವರ ಪಾತ್ರ ಅವಿಸ್ಮರಣೀಯ ಎಂದು ಮಹಾನಗರ ಪಾಲಿಕೆಯ ಮಹಾಪೌರ ಪಿ.ಗಾದೆಪ್ಪ ಹೇಳಿದರು.
ದೇಶವು ಇಂದು ಆಹಾರ ಭದ್ರತೆಯಲ್ಲಿ ಸ್ವಾವಲಂಬನೆ ಸಾಧಿಸಲು ಅಂದಿನ ದಿನಗಳಲ್ಲಿ ದೇಶದ ಧೀಮಂತ ನಾಯಕ, ಮಾಜಿ ಉಪಪ್ರಧಾನಿ ಹಾಗೂ ಭಾರತದ ಹಸಿರು ಕ್ರಾಂತಿಯ ಮೂಲ ಪುರುಷ ಡಾ.ಬಾಬು ಜಗಜೀವನರಾಮ್ ಅವರು ಹಾಕಿಕೊಟ್ಟ ಭದ್ರ ಬುನಾದಿಯೇ ಕಾರಣ ಎಂದು ಸ್ಮರಿಸಿದರು.
ಜಿಪಂ ಸಿಇಒ ಮಹಮ್ಮದ್ ಹಾರೀಸ್ ಸುಮೇರ್ ಮಾತನಾಡಿ, ಭಾರತವು ಆಹಾರಕ್ಕಾಗಿ ಅಮೆರಿಕದ ಮೇಲೆ ಅವಲಂಬಿತವಾಗಿದ್ದ ಕಾಲದಲ್ಲಿ ಕೃಷಿ ಸಚಿವರಾಗಿ ಬಾಬೂಜಿಯವರು ತಂದ ಹೊಸ ತಂತ್ರಜ್ಞಾನ ಮತ್ತು ಹಸಿರು ಕ್ರಾಂತಿ ದೇಶಕ್ಕೆ ಆಹಾರ ಸ್ವಾವಲಂಬನೆಯನ್ನು ತಂದುಕೊಟ್ಟಿತು ಎಂದು ತಿಳಿಸಿದರು.ಅಂದಿನಿಂದ ಇಂದಿನವರೆಗೆ ದೇಶದಲ್ಲಿ ಆಹಾರ ಉತ್ಪಾದನೆಯ ಕೊರತೆಯಾಗಿಲ್ಲ ಎಂಬುದು ಗಮನಾರ್ಹವಾಗಿದೆ ಎಂದು ಹೇಳಿದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಸಹಾಯಕ ಆಯುಕ್ತ ರಾಜೇಶ್ ಎಚ್.ಡಿ. ಸಂವಿಧಾನ ಪ್ರಸ್ತಾವನೆ ಬೋಧಿಸಿದರು. ರಾಜ್ಯ ಡಾ.ಬಾಬು ಜಗಜೀವನರಾಮ್ ಜನಜಾಗೃತಿ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಪಂಪಾಪತಿ, ಮಹಾನಗರ ಪಾಲಿಕೆ ಆಯುಕ್ತ ಪಿ.ಎಸ್ ಮಂಜುನಾಥ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಎಸ್.ನವೀನ್ ಕುಮಾರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಚಿದಾನಂದಪ್ಪ ಸೇರಿದಂತೆ ಮಹಾನಗರ ಪಾಲಿಕೆ ಸದಸ್ಯರು, ಜಿಲ್ಲೆಯ ಎಲ್ಲಾ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು, ಸಂಘ- ಸಂಸ್ಥೆಗಳ ಪದಾಧಿಕಾರಿಗಳು, ಮುಖಂಡರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ವಸತಿ ನಿಲಯದ ವಿದ್ಯಾರ್ಥಿ- ವಿದ್ಯಾರ್ಥಿನಿಯರು, ಸಾರ್ವಜನಿಕರು ಉಪಸ್ಥಿತರಿದ್ದರು.
ಡಾ.ಬಾಬು ಜಗಜೀವನ್ ರಾಮ್ ಜಯಂತಿಯ ಅಂಗವಾಗಿ ಏರ್ಪಡಿಸಿದ್ದ ಮೆರವಣಿಗೆಗೆ ಡಾ.ಬಾಬು ಜಗಜೀವನ್ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವುದರ ಮೂಲಕ ಚಾಲನೆ ನೀಡಲಾಯಿತು. ಮೆರವಣಿಗೆಯಲ್ಲಿ ವಿವಿಧ ಸಾಂಸ್ಕೃತಿಕ ಕಲಾ ತಂಡಗಳು ಭಾಗವಹಿಸಿ ಮೆರಗು ನೀಡಿದವು.
ಆಕರ್ಷಕ ಸ್ತಬ್ಧಚಿತ್ರ:
ಮೆರವಣಿಗೆಯು ನಗರದ ಡಾ.ರಾಜಕುಮಾರ್ ರಸ್ತೆಯ ಮುನಿಸಿಪಲ್ ಕಾಲೇಜು ಮೈದಾನದಿಂದ ಆರಂಭವಾಗಿ ಗಡಿಗಿ ಚೆನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಹಳೆಯ ಬ್ರೂಸ್ ಪೇಟೆ ಪೋಲಿಸ್ ಠಾಣೆ ಮುಂಭಾಗ, ಎಚ್.ಆರ್. ಗವಿಯಪ್ಪ ವೃತ್ತದ ಮೂಲಕ ಡಾ.ಜೋಳದರಾಶಿ ದೊಡ್ಡನಗೌಡ ರಂಗಮದಿರದ ವೇದಿಕೆ ಸಭಾಂಗಣಕ್ಕೆ ತಲುಪಿ ಸಂಪನ್ನಗೊಂಡಿತು.