ಚಾಮರಾಜನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಡಾ.ಬಾಬುಜಗಜೀವನ ರಾಂ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಚಾಮರಾಜನಗರ: ಮಾಜಿ ಉಪಪ್ರಧಾನಿ ಡಾ.ಬಾಬುಜಗಜೀವನರಾಂ ಅವರ ದೂರದೃಷ್ಠಿಯಿಂದ ಭಾರತ ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿತು ಎಂದು ಕೇಂದ್ರ ಪರಿಹಾರ ಸಮಿತಿ ಮಾಜಿ ಅಧ್ಯಕ್ಷ ಎಂ.ರಾಮಚಂದ್ರ ಹೇಳಿದರು.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಡಾ.ಬಾಬುಜಗಜೀವನ ರಾಂ 118ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು. ಶೋಷಿತ ಸಮುದಾಯದ ಮತದಾನದ ಹಕ್ಕುಗಳು, ಸಮಾನ ಅವಕಾಶಗಳಿಗಾಗಿ ದುಡಿದ ಬಾಬೂಜಿ 1946 ರ ಸೆ.2ರಂದು ರಚನೆಯಾದ ಭಾರತದ ಮಧ್ಯಂತರ ಸರ್ಕಾರದಲ್ಲಿ ದಲಿತ ಸಮುದಾಯದ ಪ್ರತಿನಿಧಿಯಾಗಿ ಸೇರ್ಪಡೆಗೊಂಡು ಕಾರ್ಮಿಕ ಸಚಿವರಾದರು. ಜಿನೀವಾದಲ್ಲಿ ನಡೆದ ಅಂತಾರಾಷ್ಟ್ರೀಯ ಕಾರ್ಮಿಕ ಸಮ್ಮೇಳನದಲ್ಲಿ ಭಾರತದ ಪ್ರತಿನಿಧಿಯಾಗಿ ಪಾಲ್ಗೊಂಡರು. ಭಾರತದ ಸಂವಿಧಾನ ರಚನಾ ಸಭೆಯ ಸದಸ್ಯರೂ ಆದರು. 1946ರಿಂದ 1952ರವರೆಗೆ ಕಾರ್ಮಿಕ ಸಚಿವರಾಗಿದ್ದ ಬಾಬೂಜಿ, ತಮ್ಮ ಅಧಿಕಾರಾವಧಿಯಲ್ಲಿ ಹಲವಾರು ಕಾಯ್ದೆಗಳನ್ನು ರೂಪಿಸಿ ಜಾರಿಗೊಳಿಸುವ ಮೂಲಕ ದೇಶದ ಕಾರ್ಮಿಕರ ಕಾಯ್ದೆಗಳ ಶಿಲ್ಪಿ ಎಂಬ ಗೌರವಕ್ಕೆ ಪಾತ್ರರಾದರು ಎಂದರು.
ರಾಷ್ಟ್ರೀಯ ಒಬಿಸಿ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದು ಶೆಟ್ಟಿ ಮಾತನಾಡಿ, ಡಾ.ಬಾಬುಜಗಜೀವನ ರಾಂ ದೇಶದ ಸಮರ್ಥ ನಾಯಕತ್ವ ಹೊಂದಿದ್ದರು. ಕೇಂದ್ರದಲ್ಲಿ ವಿವಿಧ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ಉತ್ತಮ ಆಡಳಿತ ಮಾಡುವ ಮೂಲಕ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.
ನಗರಸಭಾ ಅಧ್ಯಕ್ಷ ಸುರೇಶ್, ಎಸ್ಸಿ ಮೋರ್ಚಾದ ಜಿಲ್ಲಾಧ್ಯಕ್ಷ ಮೂಡಹಳ್ಳಿ ಮೂರ್ತಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ವೃಷಬೇಂದ್ರಪ್ಪ, ಮೂಡ್ನಾಕೂಡು ಪ್ರಕಾಶ್, ಮಾಜಿ ಅಧ್ಯಕ್ಷ ಆರ್.ಸುಂದರ್, ಜಿಲ್ಲಾ ಮಾಧ್ಯಮ ಪ್ರಮುಖ್ ರಾಮಸಮುದ್ರ ಶಿವಣ್ಣ, ಎಸ್ ಸಿ ಮೋರ್ಚಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುತ್ತಿಗೆ ಮೂರ್ತಿ, ಮಾಂಬಳ್ಳಿ ರಾಮಣ್ಣ, ಕಾರ್ಯಾಲಯ ಕಾರ್ಯದರ್ಶಿ ರಂಗಸ್ವಾಮಿ, ಕಿರಣ್ ಇತರರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.