ವಧುವಿಗಾಗಿ ಮಾದಪ್ಪ ಬೆಟ್ಟಕ್ಕೆ ಬ್ರಹ್ಮಚಾರಿಗಳ ಪಾದಯಾತ್ರೆ

KannadaprabhaNewsNetwork |  
Published : Oct 31, 2024, 02:02 AM IST
 ಮಹದೇಶ್ವರ  ಬೆಟ್ಟಕ್ಕೆ  ಬ್ರಹ್ಮಚಾರಿಗಳ ಪಾದಯಾತ್ರೆ | Kannada Prabha

ಸಾರಾಂಶ

ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಯುವಕರ ಹಾಗೂ ಮಾದಪ್ಪನ ಭಕ್ತರ ದಂಡೇ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ.

ಮಹದೇಶ್ವರನ ಆಲಯಕ್ಕೆ 62 ಯುವಕರ ದಂಡು । ಮದುವೆಗೆ ಹೆಣ್ಣು ಸಿಗಲಿ ಎಂಬ ಬೇಡಿಕೆ । ದೀಪಾವಳಿ ಆರಂಭ

ಕನ್ನಡಪ್ರಭ ವಾರ್ತೆ ಹನೂರು

ಪ್ರಸಿದ್ಧ ಧಾರ್ಮಿಕ ಸ್ಥಳವಾದ ಹನೂರು ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಸಂಭ್ರಮ ಜೋರಾಗಿದ್ದು, ಯುವಕರ ಹಾಗೂ ಮಾದಪ್ಪನ ಭಕ್ತರ ದಂಡೇ ಬೆಟ್ಟಕ್ಕೆ ಸಾಗರೋಪಾದಿಯಲ್ಲಿ ಹರಿದು ಬರುತ್ತಿದೆ.

ನಾಡಿನ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಮಲೆ ಮಹದೇಶ್ವರ ಬೆಟ್ಟಕ್ಕೆ ಕೊಳ್ಳೇಗಾಲ ತಾಲೂಕಿನ ಹೊಸಮಾಲಂಗಿ ಗ್ರಾಮದ 62 ಯುವಕರು ವಧು ಸಿಗಲೆಂದು ಬರಿಗಾಲಿನಲ್ಲಿ ಮಾದಪ್ಪನ ಬೆಟ್ಟಕ್ಕೆ ಪಾದಯಾತ್ರೆ ನಡೆಸಿದ್ದಾರೆ.

ಹೊಸಮಾಲಂಗಿಯಲ್ಲಿ 62 ಮಂದಿ ಯುವಕರಿಗೆ ಮದುವೆಯಾಗಿಲ್ಲ, ಎಷ್ಟು ಹುಡುಕಿದರೂ ವಧು ಸಿಗುತ್ತಿಲ್ಲ, ಮಾದಪ್ಪ ಕರುಣೆ ತೋರಿಸಿ ನಮಗೆ ಮದುವೆ ಮಾಡಿಸಲೆಂದು ಯಾತ್ರೆ ಹೊರಟ್ಟಿದ್ದೇವೆ ಎಂದು ಮನು ಎಂಬ ಯಾತ್ರಿ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದ್ದಾರೆ.

ದೀಪಾವಳಿ ಜಾತ್ರೆ ಜೋರು:

ಅ.29 ರಿಂದ ಮಹದೇಶ್ವರ ಬೆಟ್ಟದಲ್ಲಿ ದೀಪಾವಳಿ ಜಾತ್ರೆ ಆರಂಭಗೊಂಡಿದ್ದು ವಿದ್ಯುತ್ ದೀಪಾಲಂಕಾರದಿಂದ ಕ್ಷೇತ್ರ ಕಂಗೊಳಿಸುತ್ತಿದೆ. ದೇವರಿಗೆ ವಿಶೇಷ ಪೂಜೆ, ಅಭಿಷೇಕಗಳು ಸಾಂಪ್ರದಾಯಿಕವಾಗಿ ಜರುಗುತ್ತಿದೆ.

ರಾಜ್ಯ ಅಷ್ಟೇ ಅಲ್ಲದೇ ತಮಿಳುನಾಡಿನಿಂದಲೂ ಲಕ್ಷಾಂತರ ಮಂದಿ ಭಕ್ತರು ಆಗಮಿಸುತ್ತಿದ್ದು ಶೌಚಾಲಯ ವ್ಯವಸ್ಥೆ, ಕುಡಿಯುವ ನೀರು, ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಮಲೆ ಮಹದೇಶ್ವರ ಬೆಟ್ಟದ ಆಯಕಟ್ಟಿನ ಸ್ಥಳಗಳಲ್ಲಿ ಅಚ್ಚುಕಟ್ಟಾಗಿ ವ್ಯವಸ್ಥೆ ಮಾಡಲಾಗಿದೆ.

ವಿಶೇಷ ದಾಸೋಹ ವ್ಯವಸ್ಥೆ:

ಭಕ್ತರಿಗೆ ತೊಂದರೆಯಾಗದಂತೆ ನಿರಂತರ ವಿಶೇಷ ಪ್ರಸಾದದ ವ್ಯವಸ್ಥೆ ಮಾಡಲಾಗಿದ್ದು ಎತ್ತ ನೋಡಿದರತ್ತ ಭಕ್ತ ಸಮೂಹವೇ ಕಂಡು ಬರುತ್ತಿದೆ. ಜತೆಗೆ ವಿಶೇಷ ವಿದ್ಯುತ್ ದೀಪಾಲಂಕರವನ್ನು ದೀಪಾವಳಿ ಹಬ್ಬದ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಬಗೆಯ ರಂಗುರಂಗಿನ ವಿದ್ಯುತ್ ದೀಪಾಲಂಕಾರಗಳ ತೋರಣ ಮಲೆ ಮಹದೇಶ್ವರ ಬೆಟ್ಟದ ರಾಜಗೋಪುರ ಸೇರಿದಂತೆ ಮುಖ್ಯದ್ವಾರ, ಇನ್ನಿತರ ಕಡೆ ಹಾಗೂ ಆಲಂಬಾಡಿ ಬಸವ ಸೇರಿದಂತೆ ದಾಸೋಹ ಭವನಕ್ಕೆ ತೆರಳುವ ರಸ್ತೆ ಮಾರ್ಗ ಮಧ್ಯದಲ್ಲಿ ಮತ್ತು ಪ್ರಾಧಿಕಾರ ಕಚೇರಿ ಮುಂಭಾಗದ ಪ್ರಧಾನ ರಸ್ತೆಯಲ್ಲಿಯೂ ವಿಶೇಷ ವಿದ್ಯುತ್ ದೀಪದ ಅಲಂಕಾರ ಜಗಮಗಿಸುವಂತೆ ನೋಡುಗರ ಕಣ್ಮಣ ಸೆಳೆಯುವಂತೆ ದೀಪಾಲಂಕರವನ್ನು ಮಾಡಲಾಗಿದೆ.

ವಿವಿಧ ಉತ್ಸವಗಳ ಸಂಭ್ರಮ:

ಮಲೆ ಮಹದೇಶ್ವರ ಬೆಟ್ಟದಲ್ಲಿ ನಡೆಯುತ್ತಿರುವ ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ಚಿನ್ನದ ರಥೋತ್ಸವ, ಬೆಳ್ಳಿ ರಥೋತ್ಸವ ಹಾಗೂ ಮಾದಪ್ಪನ ಮೂರ್ತಿಯ ಉತ್ಸವ ಸೇರಿದಂತೆ ಹುಲಿವಾಹನ ಉತ್ಸವ, ರುದ್ರಾಕ್ಷಿ ಮಂಟಪೋತ್ಸವ, ಬಸವನ ಉತ್ಸವ, ದೂಪದ ಸೇವೆ ಪಂಜಿನ ಸೇವೆ ಹಾಗೂ ಹರಕೆ ಹೊತ್ತು ಭಕ್ತರಿಂದ ಮುಡಿಸೇವೆ ಮತ್ತು ಉರುಳು ಸೇವೆ ಮಾಡುವ ಮೂಲಕ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಸುವಂತೆ ಮಾದೇಶ್ವರನಿಗೆ ಹರಕೆ ಹೊತ್ತು ವಿವಿಧ ಉತ್ಸವಗಳಲ್ಲಿ ಭಾಗವಹಿಸುತ್ತಾರೆ.

ಮಾದಪ್ಪನ ಭಕ್ತರು ಈ ವೇಳೆಯಲ್ಲಿ ಸಂಭ್ರಮಾಚರಣೆ ಮುಗಿಲು ಮುಟ್ಟುವಂತೆ ಉಘೇ ಮಾದಪ್ಪ, ಉಘೇ ಮಾದಪ್ಪ ಎಂದು ಘೋಷಣೆಗಳು ಕೂಗುತ್ತಾರೆ. ಈ ಮೂಲಕ ಸಂಭ್ರಮ, ಸಡಗರದಿಂದ ನಡೆಯುತ್ತಿರುವ ಜಾತ್ರಾ ಮಹೋತ್ಸವದಲ್ಲಿ ನೆರೆದಿರುವ ಭಕ್ತರ ದಂಡು ಎದ್ದು ಕಾಣುತ್ತದೆ.

ವಿಶೇಷ ತರಕಾರಿಗಳಿಂದ ದಾಸೋಹ ವ್ಯವಸ್ಥೆ:

ದೀಪಾವಳಿ ಜಾತ್ರಾ ಮಹೋತ್ಸವದ ಪ್ರಯುಕ್ತ ದಾಸೋಹ ಭವನದಲ್ಲಿ ದಾಸ್ತಾನು ಮಾಡಲಾಗಿರುವ ವಿವಿಧ ಬಗೆಯ ತರಕಾರಿಗಳಿಂದ ಬರುವ ಭಕ್ತಾದಿಗಳಿಗೆ ವಿಶೇಷ ದಾಸೋಹ ವ್ಯವಸ್ಥೆಯನ್ನು ಕಲ್ಪಿಸುವಂತೆ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಇ ರಘು ದಾಸೋಹ ಅಧಿಕಾರಿ ಸ್ವಾಮಿಯವರಿಗೆ ಮತ್ತು ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.

PREV

Recommended Stories

ಧರ್ಮಸ್ಥಳ ಪ್ರಕರಣ ಮುಚ್ಚಿ ಹಾಕುವ ಯತ್ನ
ತಾಲೂಕು ಆಡಳಿತದ ಬೇಜವಾಬ್ದಾರಿಯಿಂದ ನೀರು ಕಲುಷಿತ