ಮರಳಿ ಗೂಡಿನತ್ತ ಆನಂದ ಅಸ್ನೋಟಿಕರ್‌ಲೋಕಸಭೆ ಕಣಕ್ಕಿಳಿಯಲು ಪ್ರಯತ್ನ

KannadaprabhaNewsNetwork | Published : Nov 19, 2023 1:30 AM

ಸಾರಾಂಶ

ಸಂಸದ ಅನಂತಕುಮಾರ ಹೆಗಡೆ ಈ ಬಾರಿ ಚುನಾವಣೆ ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ಇದೆ ಕಾರಣಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ಆನಂದ ಅಸ್ನೋಟಿಕರ್ ಕಣ್ಣಿಟ್ಟಿದ್ದಾರೆ. ಜೆಡಿಎಸ್, ಬಿಜೆಪಿ ಮೈತ್ರಿಯಿಂದಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಯೋಚನೆಯಲ್ಲಿ ಅಸ್ನೋಟಿಕರ್ ಇದ್ದಾರೆ.

ವಸಂತಕುಮಾರ್ ಕತಗಾಲ

ಕಾರವಾರ:

ರಾಜಕೀಯವಾಗಿ ಅತಂತ್ರರಾಗಿರುವ ಮಾಜಿ ಸಚಿವ ಆನಂದ ಅಸ್ನೋಟಿಕರ್ ಮತ್ತೆ ಜೆಡಿಎಸ್ ಜತೆ ಕೈಜೋಡಿಸಲು ಮುಂದಾಗಿದ್ದಾರೆ. ಜೆಡಿಎಸ್ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಬೆಂಗಳೂರಿನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅವರ ಪಕ್ಕದಲ್ಲಿ ಕುಳಿತಿರುವುದು ಈ ಸುದ್ದಿಗೆ ರೆಕ್ಕೆಪುಕ್ಕ ಬರಲು ಕಾರಣವಾಗಿದೆ.

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್‌ನಿಂದ ಕಾಲು ಹೊರಗಿಟ್ಟಿರುವುದಾಗಿ ಹೇಳಿ ಕಾಂಗ್ರೆಸ್ ಅಭ್ಯರ್ಥಿ ಸತೀಶ ಸೈಲ್ ಅವರನ್ನು ಬೆಂಬಲಿಸಿ ಚುನಾವಣಾ ಕಣದಿಂದ ಹೊರಗುಳಿದಿದ್ದರು. ಇದಕ್ಕೂ ಮುನ್ನ ಅವರು ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಹಾಗೂ ಕಾಂಗ್ರೆಸ್ ಸೇರ್ಪಡೆಗೆ ಭಾರಿ ಪ್ರಯತ್ನ ನಡೆಸಿದ್ದರೂ ಸಫಲವಾಗಿರಲಿಲ್ಲ. ವಿಧಾನಸಭೆ ಚುನಾವಣೆಯ ತರುವಾಯವೂ ಬಿಜೆಪಿ ಹಾಗೂ ಕಾಂಗ್ರೆಸ್ ಸೇರ್ಪಡೆಗೆ ಅವರ ಪ್ರಯತ್ನ ಸಾಗುತ್ತಲೇ ಇತ್ತು. ಈ ನಡುವೆ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಮೈತ್ರಿ ಆಗಿದ್ದರಿಂದ ಅಸ್ನೋಟಿಕರ್ ಗೆ ಜೆಡಿಎಸ್‌ನಲ್ಲೇ ಮುಂದುವರಿಯುವ ಆಸೆ ಗರಿಗೆದರಿದೆ. ಅದೇ ಕಾರಣಕ್ಕೆ ಶುಕ್ರವಾರ ಎಚ್.ಡಿ. ಕುಮಾರಸ್ವಾಮಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಅಷ್ಟೇ ಅಲ್ಲ, ಸುದ್ದಿಗೋಷ್ಠಿಯಲ್ಲಿ ಕುಮಾರಸ್ವಾಮಿ ಅವರ ಪಕ್ಕದಲ್ಲೇ ಕುಳಿತು ಗಮನ ಸೆಳೆದಿದ್ದಾರೆ.

ಸಂಸದ ಅನಂತಕುಮಾರ ಹೆಗಡೆ ಈ ಬಾರಿ ಚುನಾವಣೆ ಕಣಕ್ಕಿಳಿಯುವ ಸಾಧ್ಯತೆ ಇಲ್ಲ. ಇದೆ ಕಾರಣಕ್ಕೆ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಮೇಲೆ ಆನಂದ ಅಸ್ನೋಟಿಕರ್ ಕಣ್ಣಿಟ್ಟಿದ್ದಾರೆ. ಜೆಡಿಎಸ್, ಬಿಜೆಪಿ ಮೈತ್ರಿಯಿಂದಾಗಿ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಯೋಚನೆಯಲ್ಲಿ ಅಸ್ನೋಟಿಕರ್ ಇದ್ದಾರೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡುವಂತೆ ಬಿಜೆಪಿಯ ಮನವೊಲಿಸಬೇಕೆಂದು ಕುಮಾರಸ್ವಾಮಿ ಅವರ ಮುಂದೆ ಅಸ್ನೋಟಿಕರ್ ಬೇಡಿಕೆ ಇಟ್ಟಿದ್ದಾರೆ. ಬಿಜೆಪಿ ಉತ್ತರ ಕನ್ನಡ ಕ್ಷೇತ್ರವನ್ನು ಬಿಟ್ಟುಕೊಟ್ಟಲ್ಲಿ ಬಿಜೆಪಿ ಬೆಂಬಲದೊಂದಿಗೆ ಸುಲಭವಾಗಿ ಗೆಲುವು ಸಾಧಿಸಬಹುದು ಎಂಬ ಲೆಕ್ಕಾಚಾರ ಆನಂದ್ ಅವರದ್ದಾಗಿದೆ. ಬಿಜೆಪಿ ಬಲಿಷ್ಠವಾಗಿರುವ ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಡಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಸದ್ಯಕ್ಕಂತೂ ಉತ್ತರ ದೊರಕುತ್ತಿಲ್ಲ.

ಅತಿಯಾದ ಮಹತ್ವಾಕಾಂಕ್ಷೆ ಹೊಂದಿರುವ ಆನಂದ ಅಸ್ನೋಟಿಕರ್ ಈಗಾಗಲೆ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಹೀಗೆ ರಾಜ್ಯದಲ್ಲಿನ ಪ್ರಮುಖ ಪಕ್ಷಗಳನ್ನು ನೋಡಿದ್ದಾರೆ. ರಾಜಕೀಯ ಪುನರ್ವಸತಿಯನ್ನು ಪುನಃ ಜೆಡಿಎಸ್ ಪಕ್ಷದಲ್ಲಿ ಕಂಡುಕೊಳ್ಳಲು ಮನಸ್ಸು ಮಾಡಿರುವ ಆನಂದ ನಡೆ ತೀರಾ ಕುತೂಹಲಕ್ಕೆ ಕಾರಣವಾಗಿದೆ. ಆದರೆ ಮೇಲಿಂದ ಮೇಲೆ ರಾಜಕೀಯ ಪಕ್ಷಗಳನ್ನು ಬದಲಿಸುತ್ತಿರುವ ಆನಂದ್ ಬಗ್ಗೆ ಅವರ ಬೆಂಬಲಿಗರಲ್ಲೇ ಗೊಂದಲ ಹುಟ್ಟಿಸಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಹಾಲಿ ಸಂಸದ ಅನಂತಕುಮಾರ ಹೆಗಡೆ ಸ್ಪರ್ಧಿಸದೆ ಇದ್ದರೆ ನಾನು ಪ್ರಬಲ ಆಕಾಂಕ್ಷಿಯಂತೂ ಹೌದು. ನಾನು ಜೆಡಿಎಸ್ ಪಕ್ಷದಲ್ಲೇ ಇದ್ದೇನೆ. ಮುಂದುವರಿಯಲಿದ್ದೇನೆ ಎಂದು ಆನಂದ ಅಸ್ನೋಟಿಕರ್

ಹೇಳಿದ್ದಾರೆ.

Share this article