ಸಹಕಾರ ಕ್ಷೇತ್ರ ರೈತರ ಬೆನ್ನುಲುಬು: ರಾಬಿನ್ ದೇವಯ್ಯ

KannadaprabhaNewsNetwork |  
Published : Jun 08, 2026, 03:45 AM IST
ಚಿತ್ರ : 7ಎಂಡಿಕೆ3 : ಶಿಕ್ಷಣ ಕಾರ್ಯಕ್ರಮದ ಉದ್ಘಾಟನೆ.  | Kannada Prabha

ಸಾರಾಂಶ

ಸಹಕಾರ ಕ್ಷೇತ್ರ ರೈತರ ಬೆನ್ನುಲುಬಾಗಿದೆ. ಇಂತಹ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ತಮ್ಮ ಕೆಲಸವನ್ನು ದೇಶ ಸೇವೆ ಎಂದು ಅರಿತುಕೊಂಡು ತೃಪ್ತಿದಾಯಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸಹಕಾರ ಕ್ಷೇತ್ರ ರೈತರ ಬೆನ್ನುಲುಬಾಗಿದೆ. ಇಂತಹ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಗಳು ತಮ್ಮ ಕೆಲಸವನ್ನು ದೇಶ ಸೇವೆ ಎಂದು ಅರಿತುಕೊಂಡು ತೃಪ್ತಿದಾಯಕವಾಗಿ ಕರ್ತವ್ಯ ನಿರ್ವಹಿಸಬೇಕು ಎಂದು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ ಹೇಳಿದರು. ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ಬೆಂಗಳೂರು, ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಆಶ್ರಯದಲ್ಲಿ ಜಿಲ್ಲೆಯ ಪ್ಯಾಕ್ಸ್, ಪಿಕಾರ್ಡ್ ಬ್ಯಾಂಕ್, ಎಪಿಸಿಎಂಎಸ್, ಜೇನು ಸಹಕಾರ ಸಂಘ, ಪತ್ತಿನ ಹಾಗೂ ಮಾರಾಟ ಸಹಕಾರ ಸಂಘಗಳ ಲೆಕ್ಕಿಗರು, ಸಹಾಯಕ ಸಿಬ್ಬಂದಿಗೆ ಜಿಎಸ್‌ಟಿ ಮತ್ತು ಆದಾಯ ತೆರಿಗೆ ಕುರಿತು ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಸಭಾಂಗಣದಲ್ಲಿ ಶಿಕ್ಷಣ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಪಿ.ಯು. ರಾಬಿನ್ ದೇವಯ್ಯ, ಮೊಟ್ಟ ಮೊದಲು ಗದಗ ಜಿಲ್ಲೆಯಲ್ಲಿ ಆರಂಭ ಕಂಡ ಸಹಕಾರ ಕ್ಷೇತ್ರ ಇಂದು ಬೃಹತ್ತಾಗಿ ಬೆಳೆದಿದ್ದು, ದೇಶ ವ್ಯಾಪಿ ಕಟ್ಟ ಕಡೆಯ ರೈತನನ್ನು ತಲುಪಲು ಸಾಧ್ಯವಾಗಿದೆ. ಕೇಂದ್ರ ಸರಕಾರ ಕೂಡ ರೈತರ ಅಭಿವೃದ್ದಿಗಾಗಿ ಸಹಕಾರ ಖಾತೆಯನ್ನು ಸೃಷ್ಟಿಸಿದ್ದು, 5 ವರ್ಷಗಳನ್ನು ಪೂರೈಸಿದೆ ಎಂದು ಹರ್ಷ ವ್ಯಕ್ತಪಡಿಸಿದರು.ಸಹಕಾರ ಕ್ಷೇತ್ರದಲ್ಲಿ ಹಲವಾರು ಬದಲಾವಣೆಗಳು, ತಿದ್ದುಪಡಿಗಳು, ನೀತಿ ನಿಯಮ, ಕಾನೂನುಗಳನ್ನು ಆಯಾ ಕಾಲಗಟ್ಟದಲ್ಲಿ ಮಾರ್ಪಾಡು ಮಾಡಲಾಗುತ್ತದೆ. ಇಂತಹ ವಿಚಾರಗಳ ಕುರಿತು ಸಹಕಾರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿ ಅರಿತುಕೊಳ್ಳುವುದು ಅತಿ ಅವಶ್ಯ. ಇದನ್ನು ನಿಮ್ಮ ಕೆಳ ಹಂತದ ಸಿಬ್ಬಂದಿಗೂ ಮನವರಿಕೆ ಮಾಡಿ ಅರಿವು ಮೂಡಿಸುವ ಕೆಲಸವೂ ನಿಮ್ಮದಾಗಿದೆ. ರೈತರಿಗೆ ಈ ಕುರಿತು ಮಾಹಿತಿ ನೀಡುವ ಉತ್ತರದಾಯಿತ್ವ ಕೂಡ ನಿಮ್ಮ ಮೇಲಿದೆ ಎಂದು ಹೇಳಿದರು.

ದೇಶದ ಗಡಿಯಲ್ಲಿ ನಿಂತು ದೇಶ ರಕ್ಷಣೆ ಮಾಡುವ ಅವಕಾಶ ಎಲ್ಲರಿಗೂ ದೊರಕಲಾರದು. ಆದರೆ ತಾವು ಮಾಡುವ ಕೆಲಸವೂ ದೇಶ ಸೇವೆ ಎಂದು ಅರಿತುಕೊಂಡು ತೃಪ್ತಿದಾಯಕ ಸೇವೆಯನ್ನು ಸಹಕಾರ ಕ್ಷೇತ್ರದಲ್ಲಿ ಸಲ್ಲಿಸಬೇಕು. ಇದರಿಂದ ಸೇವಾ ನಿವೃತ್ತಿ ಬಳಿಕವೂ ಆತ್ಮ ತೃಪ್ತಿ ಇರಲಿದೆ ಎಂದು ಅಭಿಪ್ರಾಯಪಟ್ಟರು.

ಜಿಲ್ಲಾ ಕೇಂದ್ರ ಬ್ಯಾಂಕ್ ಮತ್ತು ಜಿಲ್ಲಾ ಯೂನಿಯನ್ ಮೂಲಕ ಉತ್ತಮ ಸಹಕಾರ ಸಂಘಗಳಿಗೆ ಪ್ರತಿ ವರ್ಷ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. ಇಂತಹ ಪ್ರತಿಷ್ಠಿತ ಪ್ರಶಸ್ತಿ ಪಡೆಯಲು ಅಲ್ಲಿನ ಸಿಬ್ಬಂದಿಗಳ ಅಳಿಲು ಸೇವೆಯೂ ಮುಖ್ಯವಾಗುತ್ತದೆ ಎಂಬುದನ್ನು ನೆನಪಿಡಬೇಕು ಎಂದರು.ಅತಿಥಿ ಉಪನ್ಯಾಸಕ ಹಾಗೂ ಹಾಸನದ ಸನ್ನದ್ದು ಲೆಕ್ಕಿಗರಾದ ಸಿ.ಎ. ಶಂಭುಲಿಂಗಪ್ಪ ಅವರು ಜಿಎಸ್‌ಟಿ, ಆದಾಯ ತೆರಿಗೆ ವಿಚಾರಗಳ ಕುರಿತು ಉಪನ್ಯಾಸ ನೀಡಿದರು. 2017ರಿಂದ ದೇಶದಲ್ಲಿ ಏಕರೂಪದ ತೆರಿಗೆ ಎಂಬ ನೀತಿ ಅಡಿಯಲ್ಲಿ ಜಿಎಸ್‌ಟಿಯನ್ನು ಜಾರಿಗೆ ತರಲಾಗಿದೆ. ಈ ನಿಯಮ ರೂಪಿಸುವ ಸಂದರ್ಭ ಕನಿಷ್ಠ 6 ಸಾವಿರ ತಿದ್ದುಪಡಿಗಳನ್ನು ಮಾಡಲಾಗಿದೆ. ಈ ಕುರಿತು ಸಂಪೂರ್ಣ ಮಾಹಿತಿ ಪಡೆದುಕೊಳ್ಳುವುದು ಕಷ್ಟಸಾಧ್ಯವಾದರೂ ಇದರ ಬಗ್ಗೆ ಸಹಕಾರ ಕ್ಷೇತ್ರದ ಪ್ರತಿ ಸಿಬ್ಬಂದಿಯೂ ಕನಿಷ್ಠ ಮಾಹಿತಿಯನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಹೇಳಿದರು. 2010ರಲ್ಲಿ ಜಾರಿಯಲ್ಲಿದ್ದ ‘ವ್ಯಾಟ್ ತೆರಿಗೆ ಪದ್ದತಿ’ ಇಂದು ರದ್ದುಗೊಂಡಿದ್ದು, ಜಿಎಸ್‌ಟಿ ರೂಪದಲ್ಲಿ ಹೊಸ ತೆರಿಗೆ ನೀತಿ ಜಾರಿಯಲ್ಲಿದೆ. ಪೆಟ್ರೋಲಿಯಂ ಮತ್ತು ಮಾನವನ ಬಳಕೆಯ ಮದ್ಯವನ್ನು ಮಾತ್ರ ಜಿಎಸ್‌ಟಿಯಿಂದ ಹೊರಗಿಡಲಾಗಿದ್ದು, ಉಳಿದಂತೆ ಎಲ್ಲವೂ ಜಿಎಸ್‌ಟಿ ವ್ಯಾಪ್ತಿಗೊಳಪಡುತ್ತವೆ ಎಂದು ವಿವರಿಸಿದರು.

ಸಹಕಾರ ಸಂಸ್ಥೆ ರೈತ ಉಪಯೋಗಿ ವಸ್ತುಗಳನ್ನು ಡೀಲರ್‌ಗಳಿಂದ ಖರೀದಿಸುವ ಸಂದರ್ಭ ಎಸ್‌ಜಿಎಸ್‌ಟಿ, ಸಿಜಿಎಸ್‌ಟಿ ಸಹಿತ ಇನ್‌ವೈಸ್ ಬಿಲ್ ಹೊಂದುವುದು ಕಡ್ಡಾಯವಾಗಿದೆ. ಇಲ್ಲವಾದರೆ ಸಹಕಾರ ಸಂಸ್ಥೆಗಳು ತೆರಿಗೆಯ ನಷ್ವವನ್ನು ಎದುರಿಸಬೇಕಾಗುತ್ತದೆ. ಜಿಎಸ್‌ಟಿ ನೋಂದಾಯಿತ ಡೀಲರ್‌ಗಳಿಂದ ಮಾತ್ರವೇ ಖರೀದಿ ವ್ಯವಹಾರ ನಡೆಸಬೇಕು. ಈ ನಿಟ್ಟಿನಲ್ಲಿ ಅಗತ್ಯವಾಗಿ ಜಾಗೃತಿ ವಹಿಸಬೇಕು ಎಂದು ಸಲಹೆ ನೀಡಿದರು. ಇನ್‌ಪುಟ್ ಟ್ಯಾಕ್ಸ್, ಔಟ್‌ಪುಟ್ ಟ್ಯಾಕ್ಸ್, ಔಟ್‌ಪುಟ್ ಟ್ಯಾಕ್ಸ್ ಕ್ರೆಡಿಟ್, ರಿವರ್ಸ್ ಚಾರ್ಜ್ ಮೆಕಾನಿಸಂ ಮತ್ತಿತ್ತರ ವಿಚಾರಗಳ ಕುರಿತು ಸಹಕಾರ ಸಂಸ್ಥೆ ಸಿಬ್ಬಂದಿ ಅರಿವು ಹೊಂದಿರಬೇಕು. ಇಲ್ಲವಾದಲ್ಲಿ ಜಿಎಸ್‌ಟಿ ಪದ್ದತಿಯ ಲಾಭದಿಂದ ಸಹಕಾರ ಸಂಸ್ಥೆಗಳು ಹೊರಗೆ ಉಳಿದು ಬಿಡುತ್ತವೆ ಎಂದು ಎಚ್ಚರಿಸಿದರು.

ಸಹಕಾರ ಸಂಸ್ಥೆಗಳು ‘ವಾರ್ಷಿಕ ಪಾವತಿ’ ಕುರಿತು ಕೊನೆ ದಿನದವರೆಗೆ ಕಾಯಬಾರದು. ಸೂಕ್ತ ಸಮಯದಲ್ಲಿ ಎಲ್ಲ ಪಾವತಿಗಳನ್ನು ಪೂರ್ಣಗೊಳಿಸಬೇಕು. ಇದರಿಂದ ಪ್ರತಿ ದಿನದ ದುಬಾರಿ ದಂಡ ಮೊತ್ತದಿಂದ ಪಾರಾಗಲು ಸಹಾಯವಾಗಲಿದೆ ಎಂದು ಕಿವಿಮಾತು ಹೇಳಿದರು. ಕೊಡಗು ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕರಾದ ಎ.ಎಸ್. ಶ್ಯಾಂಚಂದ್ರ, ಎಂ.ಎಂ. ಶ್ಯಾಮಲ, ಎಂ.ಟಿ. ಸುಬ್ಬಯ್ಯ, ಜಿಲ್ಲಾ ಸಹಕಾರ ಯೂನಿಯನ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾಸ್ ಗೀಸರ್ ಸೋರಿಕೆ: ಪ್ರವಾಸಿ ಯುವತಿ ಸಾವು
ಜಿಲ್ಲೆಯ ಗೌರವ ಹೆಚ್ಚಿಸುವ ಕಾರ್ಯ ಮಾಡುವೆ: ಸಚಿವ ಖಾದರ್