ದೇವನಹಳ್ಳಿ ಚಲೋಗೆ ಬಡಗಲಪುರ ನಾಗೇಂದ್ರ ಕರೆ

KannadaprabhaNewsNetwork |  
Published : Jun 21, 2025, 12:49 AM IST
20ಎಚ್ಎಸ್ಎನ್3:  | Kannada Prabha

ಸಾರಾಂಶ

ಅನ್ಯಾಯದ ಭೂಸ್ವಾಧೀನ ವಿರೋಧಿಸಿ ಜೂನ್ ೨೫ರಂದು ದೇವನಹಳ್ಳಿ ಚಲೋ ಕರೆ ಕೊಟ್ಟಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಮಾತಿಗೆ ತಪ್ಪಿದ ಸರ್ಕಾರದ ನೀತಿಯನ್ನು ಖಂಡಿಸಿ, ಭೂ ಸ್ವಾಧೀನವನ್ನು ಕೈ ಬಿಡಲೇಬೇಕೆಂದು ಆಗ್ರಹಿಸಿ ೨೫ರಂದು ಹಮ್ಮಿಕೊಂಡಿರುವ "ದೇವನಹಳ್ಳಿ ಚಲೋ " ಕಾರ್ಯಕ್ರಮದಲ್ಲಿ ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ವಿದ್ಯಾರ್ಥಿ ಚಳವಳಿಗಾರರು ಅಲ್ಲದೇ ಪ್ರಗತಿಪರ ಹೋರಾಟಗಾರರು, ಸಾಹಿತಿ, ಕಲಾವಿದರು ರಾಜ್ಯದ ಮೂಲೆಮೂಲೆಗಳಿಂದಲೂ ದೇವನಹಳ್ಳಿಗೆ ಬಂದು ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟಿಸಲಿದ್ದಾರೆ ಎಂದರು.

ಕನ್ನಡಪ್ರಭ ವಾರ್ತೆ ಹಾಸನ

ಬಲವಂತದ ಹಾಗೂ ಅನ್ಯಾಯದ ಭೂಸ್ವಾಧೀನ ವಿರೋಧಿಸಿ ಜೂನ್ ೨೫ರಂದು ದೇವನಹಳ್ಳಿ ಚಲೋ ಕರೆ ಕೊಟ್ಟಿರುವುದಾಗಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ಮಾತನಾಡಿ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಚನ್ನರಾಯಪಟ್ಟಣ ಹೋಬಳಿಯ ೧೩ ಗ್ರಾಮಗಳ ಸುಮಾರು ೧೭೭೭ ಎಕರೆ ಫಲವತ್ತಾದ ಭೂಮಿಯನ್ನು ಬಲವಂತವಾಗಿ ಕೆ.ಐ.ಎ.ಡಿ.ಬಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿರುವುದನ್ನು ವಿರೋಧಿಸಿ ಸಂಯುಕ್ತ ಹೋರಾಟ - ಕರ್ನಾಟಕ ಈ ತಿಂಗಳ ೨೫ರಂದು ದೇವನಹಳ್ಳಿ ಚಲೋಗೆ ಕರೆ ನೀಡಿದೆ. ಕಳೆದ ೧೮೨ ದಿನಗಳಿಂದ ರೈತರು ಭೂ ಸ್ವಾಧೀನಕ್ಕೆ ತಮ್ಮ ಅಸಮ್ಮತಿ ಸೂಚಿಸಿ ಅಧಿಸೂಚನೆ ಕೈಬಿಡುವಂತೆ ಹೋರಾಟವನ್ನು ನಿರಂತರವಾಗಿ ನಡೆಸುತ್ತಿದ್ದು, ಕಳೆದ ಬಿಜೆಪಿ ಸರ್ಕಾರ ಸ್ವಾಧೀನಪಡಿಸಿಕೊಳ್ಳಲು ಕೆ.ಐ.ಎ.ಡಿ.ಬಿ ಕಾಯಿದೆ ಕಲಂ ೨೮(೧)ರ ಪ್ರಕಾರ ಪ್ರಾಥಮಿಕ ಅಧಿಸೂಚನೆಯನ್ನು ಹೊರಡಿಸಿದರು. ಇದನ್ನು ವಿರೋಧಿಸಿ ಆ ಭಾಗದ ರೈತರು ಪ್ರತಿಭಟನೆ ಸತ್ಯಾಗ್ರಹವನ್ನು ಪ್ರಾರಂಭಿಸಿದಾಗ ಆಗ ವಿರೋಧ ಪಕ್ಷದ ನಾಯಕರಾಗಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯರವರು ಮತ್ತು ಕಾಂಗ್ರೆಸ್‌ ಪಕ್ಷದ ಹಲವಾರು ಮುಖಂಡರು ಈ ಹೋರಾಟವನ್ನು ಬೆಂಬಲಿಸಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಬಲತ್ಕಾರ ಭೂ ಸ್ವಾಧೀನಕ್ಕೆ ಅವಕಾಶ ನೀಡುವುದಿಲ್ಲವೆಂದು ಇದನ್ನು ರದ್ದುಪಡಿಸುವುದಾಗಿ ಬಹಿರಂಗವಾಗಿ ಹೇಳಿ, ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಸರ್ಕಾರ ತಂದಿದ್ದ ಅಧಿಸೂಚನೆಯನ್ನು ಮುಂದುವರಿಸಿ ಕಾಯಿದೆ ಕಲಂ ೨೮(೪)ರ ರಿತ್ಯಾ ಅಂತಿಮ ಅಧಿಸೂಚನೆ ಹೊರಡಿಸಿ ಕೊಟ್ಟ ಮಾತಿಗೆ ತಪ್ಪಿದೆ. ಅಷ್ಟೇ ಅಲ್ಲ ಯುಪಿಎ ಸರ್ಕಾರ ತಂದಿರುವ ೨೦೧೩ರ ಭೂ ಸ್ವಾಧೀನ ಕಾಯಿದೆಗೆ ವ್ಯತಿರಿಕ್ತವಾಗಿ ನಡೆದುಕೊಂಡು ಬಲತ್ಕಾರವಾಗಿ ಸ್ವಾಧೀನಪಡಿಸಿಕೊಳ್ಳಲು ಮುಂದಾಗಿದೆ. ಇದು ರೈತರಿಗೆ ಮಾಡಿದ ದ್ರೋಹವಾಗಿದೆ ಎಂದು ದೂರಿದರು.ಮಾತಿಗೆ ತಪ್ಪಿದ ಸರ್ಕಾರದ ನೀತಿಯನ್ನು ಖಂಡಿಸಿ, ಭೂ ಸ್ವಾಧೀನವನ್ನು ಕೈ ಬಿಡಲೇಬೇಕೆಂದು ಆಗ್ರಹಿಸಿ ೨೫ರಂದು ಹಮ್ಮಿಕೊಂಡಿರುವ "ದೇವನಹಳ್ಳಿ ಚಲೋ " ಕಾರ್ಯಕ್ರಮದಲ್ಲಿ ರೈತ, ದಲಿತ, ಕಾರ್ಮಿಕ, ಮಹಿಳಾ, ಯುವಜನ ವಿದ್ಯಾರ್ಥಿ ಚಳವಳಿಗಾರರು ಅಲ್ಲದೇ ಪ್ರಗತಿಪರ ಹೋರಾಟಗಾರರು, ಸಾಹಿತಿ, ಕಲಾವಿದರು ರಾಜ್ಯದ ಮೂಲೆಮೂಲೆಗಳಿಂದಲೂ ದೇವನಹಳ್ಳಿಗೆ ಬಂದು ತಹಸೀಲ್ದಾರ್ ಕಚೇರಿಯ ಮುಂದೆ ಪ್ರತಿಭಟಿಸಲಿದ್ದು, ಅನಿರ್ದಿಷ್ಟ ಕಾಲ ಅಹೋರಾತ್ರಿ ಧರಣಿಯನ್ನು ಮುಂದುವರಿಸಲಿದ್ದಾರೆ ಎಂದರು. ಕಾವೇರಿ ಆರತಿ ಬೇಡ - ಅಮ್ಯೂಸ್‌ಮೆಂಟ್ ಪಾರ್ಕ್ ಬೇಡವೇ ಬೇಡ. ೯೨ ಕೋಟಿ ರು. ವೆಚ್ಚ ಮಾಡಿ ಕಾವೇರಿ ಆರತಿ ಎಂಬ ಅರ್ಥಹೀನ ಕಾರ್ಯಕ್ರಮವನ್ನು ಸರ್ಕಾರ ನಡೆಸಲು ಮುಂದಾಗಿರುವುದನ್ನು ಸಂಘವು ವಿರೋಧ ಮಾಡುತ್ತಿದ್ದು, ಈ ಮೌಢ್ಯದ ಕಾರ್ಯಕ್ರಮವನ್ನು ಸರ್ಕಾರ ಕೂಡಲೇ ಕೈಬಿಡಬೇಕೆಂದು ಒತ್ತಾಯಿಸುತ್ತದೆ.

ಕನ್ನಂಬಾಡಿ ಕಟ್ಟೆ ನಿರ್ಮಾಣವಾಗಿ ೯೦ ವರ್ಷಗಳಾಗುತ್ತಿದೆ. ಸಾರ್ವಜನಿಕವಾಗಿ ಅಭಿಪ್ರಾಯವನ್ನು ಸಂಗ್ರಹಿಸಿದೇ ಕಾನೂನು ಕ್ರಮಗಳನ್ನು ಅನುಸರಿಸದೇ ಕೆ.ಆರ್‌.ಎಸ್‌ನಲ್ಲಿ ಅಮ್ಯೂಸ್‌ಮೆಂಟ್ ಪಾರ್ಕ್ ನಿರ್ಮಾಣ ಮಾಡುವ ಸರ್ಕಾರದ ಕ್ರಮ ಜನವಿರೋಧಿಯಾಗಿದೆ. ಪರಿಸರ ವಿರೋಧಿಯಾಗಿದೆ. ಅಲ್ಲದೇ ಡ್ಯಾಂ ಸೇಫ್ಟಿ ಬಿಲ್ಲಿಗೆ ವಿರೋಧವಾಗಿದೆ. ಈ ಹಿಂದೆ ಇದೇ ರೀತಿಯ ಡಿಸ್ನಿಲ್ಯಾಂಡ್ ಯೋಜನೆಯನ್ನು ಸರ್ಕಾರ ಪ್ರಾರಂಭಿಸಲು ಮುಂದಾದಾಗ ಸಂಘವು ತೀವ್ರವಾಗಿ ಪ್ರತಿಭಟಿಸಿ ಇದಕ್ಕೆ ಅವಕಾಶ ನೀಡಿರಲಿಲ್ಲ, ಈಗಲೂ ಅಮ್ಯೂಸ್‌ಮೆಂಟ್ ಪಾರ್ಕ್‌ಗೆ ಮಂಡ್ಯ ಜಿಲ್ಲೆಯ ಜನತೆ ಸಂಪೂರ್ಣ ವಿರೋಧ ವ್ಯಕ್ತಪಡಿಸಿದ್ದು, ಕಾವೇರಿ ಜಲಾನಯನ ಪ್ರದೇಶದ ಜನರ ವಿರೋಧವು ಕೂಡ ಇದೆ. ಸರ್ಕಾರ ಗೌರವವಾಗಿ ಈ ಯೋಜನೆಯನ್ನು ರದ್ದುಪಡಿಸಿದರೆ ಒಳ್ಳೆಯದು ಎಂದು ಸಂಘವು ಒತ್ತಾಯಿಸುತ್ತದೆ.

ಬೀಜ, ಗೊಬ್ಬರ ವಿತರಣೆ ಸಮರ್ಪಕವಾಗಿಲ್ಲ. ರಾಜ್ಯದಲ್ಲಿ ಮುಂಗಾರುಮಳೆ ಪ್ರಾರಂಭವಾಗಿ ತಿಂಗಳುಗಳೇ ಕಳೆದಿದೆ ಆದರೆ, ಕೃಷಿ ಇಲಾಖೆ ರೈತರಿಗೆ ಬೇಕಾದ ಬೀಜ, ಗೊಬ್ಬರವನ್ನು ಸಮರ್ಪಕವಾಗಿ ಪೂರೈಸದೇ ಇಲ್ಲ ಸಲ್ಲದ ನೆಪಗಳನ್ನು ಹೇಳುತ್ತಿದೆ. ಬೇಡಿಕೆ ಇದ್ದಷ್ಟು ಬೀಜ ಮತ್ತು ಗೊಬ್ಬರವನ್ನು ಪೂರೈಸದೇ ಇರುವುದರಿಂದ ನಕಲಿ ಬೀಜ ಮತ್ತು ಗೊಬ್ಬರಗಳ ಹಾವಳಿ ಜಾಸ್ತಿಯಾಗಿದೆ. ನಕಲಿ ಬೀಜ ಮತ್ತು ಗೊಬ್ಬರದ ಹಾವಳಿಯನ್ನು ಸರ್ಕಾರ ಕೂಡಲೇ ನಿಯಂತ್ರಿಸಿ, ರೈತರ ಬೇಡಿಕೆಯನ್ನು ಪೂರೈಸಬೇಕೆಂದು ಸಂಘವು ಆಗ್ರಹಿಸುತ್ತದೆ ಎಂದು ಹೇಳಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಘು ಹಿರಿಸಾವೆ, ತಾಲೂಕು ಅಧ್ಯಕ್ಷ ಶಾಂತರಾಜೇ ಅರಸ್, ಜಿಲ್ಲಾ ಕಾರ್ಯದರ್ಶಿ ಎಂ.ಎಲ್. ಹರೀಶ್, ಮಂಜೇಗೌಡ ಕೆ.ಆರ್‌. ಪೇಟೆ, ಶಿವೇಗೌಡ ಇತರರು ಉಪಸ್ಥಿತರಿದ್ದರು.

PREV

Recommended Stories

ಸ್ವಾತಂತ್ರ್ಯಕ್ಕಾಗಿ 6.72 ಲಕ್ಷ ಜನ ಮರಣ
ಸಿಡಿದೆದ್ದ ಧರ್ಮಸ್ಥಳ ಭಕ್ತ ಅಭಿಮಾನಿಗಳು