ತುಂಬಾಡಿ ಟೋಲ್ನಲ್ಲಿ ಸಿಬ್ಬಂದಿಯಿಂದ ಹಗಲು ದರೋಡೆ

KannadaprabhaNewsNetwork |  
Published : Jun 21, 2025, 12:49 AM IST
ತುಂಬಾಡಿ ಟೋಲ್ ಪ್ಲಾಜಾವನ್ನ ಚಂದ್ರಬಾವಿ ಸಮೀಪಕ್ಕೆ ಹಸ್ತಾಂತರ | Kannada Prabha

ಸಾರಾಂಶ

ಜೂ.೧೮ಕ್ಕೆ ಟೋಲ್ ಪ್ಲಾಜಾದಲ್ಲಿ ಸುಂಕ ವಸೂಲಿ ಅವಧಿ ಮುಗಿದಿದ್ದರೂ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿರುವುದನ್ನು ತಿಳಿದ ತಕ್ಷಣ ಭೀಮ್ ಆರ್ಮಿ ಸಂಘಟನೆಯ ಪದಾಧಿಕಾರಿಗಳು, ಟೋಲ್ ಸಮೀಪ ತೆರಳಿ ಹಣ ವಸೂಲಿ ಮಾಡದಂತೆ ತಿಳಿಸಿದರು.

ಎಚ್.ಎನ್.ನಾಗರಾಜು

ಕನ್ನಡಪ್ರಭ ವಾರ್ತೆ ಕೊರಟಗೆರೆ

ತುಂಬಾಡಿ ಟೋಲ್ ಪ್ಲಾಜಾದಲ್ಲಿ ಅವಧಿ ಮುಗಿದರೂ ಹಣ ವಸೂಲಿ ಮಾಡುವುದರ ಮೂಲಕ ಹಗಲು ದರೋಡೆ ಮಾಡುತ್ತಿದ್ದಾರೆ. ಅವಧಿ ಮುಗಿದು ಒಂದು ದಿನ ಆದರೂ ಕೇಶಿಪ್ ಅಧಿಕಾರಿಗಳು ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ.

ಕೊರಟಗೆರೆ ತಾಲೂಕಿನ ತುಂಬಾಡಿ ಸಮೀಪ ಇರುವ ರಾಜ್ಯ ಹೆದ್ದಾರಿ ಎಸ್.ಎಚ್ ೩ ರಲ್ಲಿ ಇರುವ ಟೋಲ್ ಪ್ಲಾಜಾ ಅವಧಿ ಇದೇ ಜೂ.೧೮ಕ್ಕೆ ಮುಕ್ತಾಯವಾಗಿದೆ. ಅವಧಿ ಮುಗಿದ ಮೇಲೆಯೂ ಸಹ ಅಲ್ಲಿನ ಸಿಬ್ಬಂದಿ ಹಗಲು ದರೋಡೆ ಮಾಡುತ್ತಿರುವುದು ಕಂಡುಬಂದಿದೆ. ವಾಹನ ಸವಾರರಿಗೆ ಟೋಲ್‌ನ ಅವಧಿ ಮುಗಿದೆ ಎಂದು ಗೊತ್ತಿಲ್ಲದೆ ಹಣ ಪಾವತಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ.

ಇದನ್ನು ನಿರ್ವಹಿಸುತ್ತಿರುವ ಕೆಶೀಪ್ ಅಧಿಕಾರಿಗಳು ಗೊತ್ತಿದ್ದರೂ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಒಂದು ದಿನಕ್ಕೆ ಲಕ್ಷಾಂತರ ರು. ಹಣ ಈ ಟೋಲ್ ಪ್ಲಾಜಾದಲ್ಲಿ ಸಂಗ್ರಹವಾಗುತ್ತದೆ. ಇದನ್ನೇ ಬಂಡವಾಳ ಮಾಡಿಕೊಂಡ ಟೋಲ್ ಗುತ್ತಿಗೆ ಪಡೆದ ಗುತ್ತಿಗೆದಾರ ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕುತ್ತಿದ್ದು, ಯಾರೂ ಇವರನ್ನು ಪ್ರಶ್ನೆ ಮಾಡದೇ ಇರುವುದು ದುರದೃಷ್ಟಕರ ಸಂಗತಿ.

ತುಂಬಾಡಿ ಟೋಲ್ ಚಂದ್ರಬಾವಿಗೆ ಸ್ಥಳಾಂತರ:

ಕೊರಟಗೆರೆ ವಿಧಾನ ಸಭಾ ಕ್ಷೇತ್ರದ ಓಬಳಾಪುರ ಹಾಗೂ ತುಂಬಾಡಿ ಸಮೀಪ ಎರಡು ಟೋಲ್ ಪ್ಲಾಜಾಗಳನ್ನು ಅವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗಿತ್ತು. ಇದನ್ನು ವಿರೋಧಿಸಿ ಕನ್ನಡಪರ ಸಂಘಟನೆ ಹಾಗೂ ಪ್ರಗತಿಪರರು ಎರಡರಲ್ಲಿ ಒಂದು ಟೋಲ್‌ಅನ್ನು ತೆರವುಗೊಳಿಸುವಂತೆ ಹೋರಾಟ ಮಾಡಿದ್ದರು. ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ಮಧುಗಿರಿ ಶಾಸಕರು ಹಾಗೂ ಸಹಕಾರಿ ಸಚಿವ ಕೆ.ಎನ್.ರಾಜಣ್ಣ ಅವರಿಗೆ ಮನವಿಯನ್ನೂ ನೀಡಲಾಗಿತ್ತು. ಇದರ ಸಂಬಂಧ ವಿಧಾನ ಮಂಡಲದಲ್ಲಿಯೂ ಸಹ ಚರ್ಚೆ ನಡೆಸಿ ತ್ವರಿತವಾಗಿ ತೆರವುಗೊಳಿಸುವಂತೆ ಸೂಚಿಸಲಾಗಿತ್ತು. ಅದರಂತೆ ಪಾವಗಡ ಸಮೀಪ ಇರುವ ಚಂದ್ರಬಾವಿಗೆ ಸ್ಥಳಾಂತರ ಮಾಡಲಾಗಿದೆ.

ಮಾರ್ಗ ಸೂಚಿ ಪಾಲಿಸದ ಗುತ್ತಿಗೆದಾರ:

ತುಂಬಾಡಿ ಸಮೀಪ ಇರುವ ಟೋಲ್ ಪ್ಲಾಜಾದಲ್ಲಿ ಗುತ್ತಿಗೆದಾರ ಸರ್ಕಾರ ನೀಡಿರುವ ಮಾರ್ಗಸೂಚಿಗಳನ್ನು ಪಾಲಿಸದೆ ಕೆಲಸ ನಿರ್ವಹಿಸುತ್ತಿದ್ದಾರೆ. ಇಲ್ಲಿನ ಹೆಣ್ಣು ಮಕ್ಕಳಿಗೆ ಶೌಚಾಲಯ ಇಲ್ಲ, ಮುಂದೆ ಟೋಲ್ ಇದೆ ಎಂದು ರಸ್ತೆಯಲ್ಲಿ ಸೂಚನಾ ಫಲಕ ಇಲ್ಲ. ಟೋಲ್ ಸಮೀಪ ಡಿವೈಡರ್ ಸಂಪೂರ್ಣ ಹಾಳಾಗಿದ್ದು, ಅದನ್ನು ಸರಿಪಡಿಸದೆ ಅಪಘಾತ ಸಂಭವಿಸಿರುವ ಉದಾಹರಣೆಗಳು ಸಾಕಷ್ಟಿವೆ. ಈ ವಿಚಾರದಲ್ಲಿ ರಾಜ್ಯ ಹೆದ್ದಾರಿ ಪ್ರಾಧಿಕಾರ ಕಣ್ಮುಚ್ಚಿ ಕುಳಿತಿದ್ದು ಖಂಡನೀಯವಾದದ್ದಾಗಿದೆ.

ಪೊಲೀಸ್ ಠಾಣೆಗೆ ದೂರು ನೀಡಿದ ಭೀಮ್ ಆರ್ಮಿ:

ಜೂ.೧೮ಕ್ಕೆ ಟೋಲ್ ಪ್ಲಾಜಾದಲ್ಲಿ ಸುಂಕ ವಸೂಲಿ ಅವಧಿ ಮುಗಿದಿದ್ದರೂ ವಾಹನ ಸವಾರರಿಂದ ಹಣ ವಸೂಲಿ ಮಾಡುತ್ತಿರುವುದನ್ನು ತಿಳಿದ ತಕ್ಷಣ ಭೀಮ್ ಆರ್ಮಿ ಸಂಘಟನೆಯ ಪದಾಧಿಕಾರಿಗಳು, ಟೋಲ್ ಸಮೀಪ ತೆರಳಿ ಹಣ ವಸೂಲಿ ಮಾಡದಂತೆ ತಿಳಿಸಿದರು. ತಕ್ಷಣ ಅಲ್ಲಿನ ಸಿಬ್ಬಂದಿ ಹಣ ವಸೂಲಿ ನಿಲ್ಲಿಸಿದ್ದರು. ನಂತರ ಕೊರಟಗೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಕೊರಟಗೆರೆ- ಮಧುಗಿರಿ ಮಾರ್ಗದ ಮಧ್ಯೆ ಇರುವ ಟೋಲ್ ಪ್ಲಾಜಾದ ಅವಧಿ ಜೂ.೧೮ ಕ್ಕೆ ಮುಗಿದಿದ್ದು, ಅದನ್ನು ನಮ್ಮ ಭೀಮ್ ಆರ್ಮಿ ಸಂಘಟನೆಯಿಂದ ಪ್ರಶ್ನಿಸಿದರೆ ಉಡಾಫೆ ಉತ್ತರ ಕೊಡುತ್ತಾರೆ. ಇಲ್ಲಿಗೆ ಬರುವ ವಾಹನಗಳಲ್ಲಿ ಹಗಲು ದರೋಡೆ ಮಾಡುತ್ತಿದ್ದಾರೆ. ತಹಸೀಲ್ದಾರ್ ಹಾಗೂ ಕೆಶಿಪ್ ಅಧಿಕಾರಿಗಳಿಗೆ ತಿಳಿಸಲಾಗಿದೆ. ಇದರ ಸಂಬಂಧ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.

ಗಟ್ಲಹಳ್ಳಿ ಸುರೇಶ್, ಭೀಮ್ ಆರ್ಮಿ ತಾಲೂಕು ಅಧ್ಯಕ್ಷ

--------

ತುಂಬಾಡಿ ಟೋಲ್ ಪ್ಲಾಜಾವನ್ನು ಚಂದ್ರಬಾವಿಗೆ ಹಸ್ತಾಂತರಿಸಲಾಗಿದೆ, ಅಲ್ಲಿ ಇನ್ನೂ ಕಾಮಗಾರಿ ಮುಗಿದಿಲ್ಲ, ಆದ್ದರಿಂದ ಅಲ್ಲಿಯವರೆಗೆ ಸುಂಕ ವಸೂಲಿ ಮಾಡಲು ಸಂಬಂಧಪಟ್ಟ ಇಲಾಖೆಯ ಅನುಮತಿ ಪಡೆಯಲಾಗಿದೆ. ಪ್ರತಿ ಮಂಗಳವಾರ ೧೨ ಲಕ್ಷ ರು. ಹಣವನ್ನು ಹೆದ್ದಾರಿ ಪ್ರಾಧಿಕಾರ ಇಲಾಖೆಗೆ ಜಮಾ ಮಾಡಲಾಗುತ್ತದೆ.

ತಿಮ್ಮರಾಜು, ತುಂಬಾಡಿ ಟೋಲ್ ಸಿಬ್ಬಂದಿ

------

ತುಂಬಾಡಿ ಬಳಿ ಇರುವ ಟೋಲ್ ಗೇಟ್ ಅವಧಿ ಮುಗಿದಿದ್ದರೂ ಸುಂಕ ವಸೂಲಿ ಮಾಡುತ್ತಿದ್ದಾರೆ ಎಂದು ದೂರು ಬಂದಿದ್ದು, ಅನುಮತಿ ಪಡೆಯುವರೆಗೂ ಹಣ ವಸೂಲಿ ಮಾಡುವಂತಿಲ್ಲ. ಟೋಲ್ ಸಿಬ್ಬಂದಿ ಮುಂದಿನ ಆದೇಶದ ವರೆಗೂ ಯಾವುದೆ ಹಣ ವಸೂಲಿ ಮಾಡದಂತೆ ತಿಳಿಸಲಾಗಿದೆ.

ಮಂಜುನಾಥ್, ಕೊರಟಗೆರೆ ತಹಸೀಲ್ದಾರ್.

PREV

Recommended Stories

ಬಿಡಿಸಿಸಿ ಬ್ಯಾಂಕ್‌ ಚುನಾವಣೆಗೆ ಶ್ರೀಕಾಂತ ಸ್ಪರ್ಧೆ
ಮೂಡಲಗಿ ಬ್ಯಾಂಕ್‌ನ 3 ಶಾಖೆಗಳು ಪ್ರಗತಿ ಪಥದತ್ತ