ಬ್ಯಾಡಗಿ: ಬ್ಯಾಡಗಿಯ ಮೆಣಸಿನಕಾಯಿ ಮಾರುಕಟ್ಟೆಯಲ್ಲಿ ಸೋಮವಾರ ನಡೆದ ಹಿಂಸಾಚಾರ ಹಾಗೂ ವಾಹನ ಹಾಗೂ ಕಚೇರಿಗಳಿಗೆ ಬೆಂಕಿ ಹಚ್ಚಿದ ಪ್ರಕರಣಗಳಿಗೆ ಸಂಬಂಧಿಸಿದಂತೆ ರು. 5 ಕೋಟಿಗೂ ಅಧಿಕ ಹಾನಿ ಸಂಭವಿಸಿದೆ. ಈ ಸಂಬಂಧ 4 ಪ್ರಕರಣ ದಾಖಲಾಗಿದ್ದು, ಪೊಲೀಸರು 80ಕ್ಕೂ ಹೆಚ್ಚಿ ಕಿಡಿಗೇಡಿಗಳನ್ನು ವಶಕ್ಕೆ ಪಡೆದಿದ್ದು, ತೀವ್ರ ವಿಚಾರಣೆ ಕೈಗೊಂಡಿದ್ದಾರೆ.
5 ಕೋಟಿಗೂ ಅಧಿಕ ನಷ್ಟ: ಕೋಟ್ಯಂತರ ಮೌಲ್ಯದ ವಾಹನಗಳು ಸೇರಿದಂತೆ ಕಟ್ಟಡ ಪ್ರಾಂಗಣ ಬೆಂಕಿಗೆ ಆಹುತಿಯಾಗಿದ್ದು, ಕೆಲ ವರ್ಷದ ಹಿಂದೆಯಷ್ಟೇ ಕಟ್ಟಲಾಗಿದ್ದ ಭವ್ಯವಾದ ಎಪಿಎಂಸಿ ಕಟ್ಟಡ ಸುಟ್ಟು ಕರಕಲಾಗಿದ್ದು, ಕೋಟ್ಯಂತರ ಮೌಲ್ಯದ ತಾಂತ್ರಿಕ ಉಪಕರಣ ಸುಟ್ಟು ಅಂದಾಜು 5 ಕೋಟಿಗೂ ಅಧಿಕ ಮೊತ್ತದ ಹಾನಿ ಸಂಭವಿಸಿದ್ದಾಗಿ ತಿಳಿದು ಬಂದಿದೆ.
ಎಪಿಎಂಸಿ ಕಚೇರಿಯ ಎದುರು ನಿಲ್ಲಿಸಿದ್ದ 2 ಸ್ಕಾರ್ಪಿಯೊ, 2 ಬೋಲೆರೋ ಹಾಗೂ 1 ಸ್ವೀಪಿಂಗ್ ಮಿಷನ್, 1 ಅಗ್ನಿಶಾಮಕ ದಳದವಾಹನ, ಕಾರ್ಯದರ್ಶಿ ಹಾಗೂ ಸಿಬ್ಬಂದಿಯ ತಲಾ 1 ಕಾರು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹೊರಗುತ್ತಿಗೆ ಸಿಬ್ಬಂದಿಯ ಮೂರು ಬೈಕ್, ಇನ್ನೋರ್ವನ ಬೈಕ್ ಕಳ್ಳತನವಾಗಿದೆ..ಅಮೂಲ್ಯವಾದ ಕಡತಗಳು ನಾಶ:
ದಾವಣಗೆರೆ ಐಜಿ ತ್ಯಾಗರಾಜ ಹಾಗೂ ಎಸ್ಪಿ ಅಂಶುಕುಮಾರ ಪಟ್ಟಣದಲ್ಲಿ ಮೊಕ್ಕಾಂ ಹೂಡಿದ್ದು, ಜಂಟಿ ಕಾರ್ಯಾಚರಣೆಯಲ್ಲಿ ಆರೋಪಿಗಳ ಹೆಡಮುರಿ ಕಟ್ಟಲು ಸಿದ್ಧತೆ ನಡೆಸಿದ್ದಾರೆ. ಇದರಿಂದ ಮಾರುಕಟ್ಟೆ ಸೇರಿದಂತೆ ಪಟ್ಟಣದೆಲ್ಲೆಡೆ ಖಾಕಿಪಡೆಗಳು ಕಣ್ಗಾವಲು ಹಾಕಿದ್ದಾರೆ. 3 ಎಸ್ಪಿ, 4 ಹೆಚ್ಚುವರಿ ಎಸ್ಪಿ, 15 ಸಿಪಿಐ, 30 ಪಿಎಸ್‌ಐ, 762 ಪೊಲೀಸ್, 7 ಕೆಎಸ್‌ಆರ್‌ಪಿ, 8 ಜಿಲ್ಲಾ ಸಶಸ್ತ್ರ ಮೀಸಲು, 1 ಸಿ.ಆಯ್.ಎಸ್.ಎಫ್. ತುಕಡಿಗಳನ್ನು ನಿಯೋಜನೆ ಮಾಡಿದ್ದು, ಮಂಗಳವಾರ ಪಟ್ಟಣದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಿದ್ದಾರೆ.80 ಜನ ಕಿಡಿಗೇಡಿಗಳ ವಶಕ್ಕೆ: ಸೋಮವಾರ ನಡೆದ ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಬ್ಯಾಡಗಿ ಪೊಲೀಸ್ ಠಾಣೆಯಲ್ಲಿ 4 ಎಫ್.ಐ.ಆರ್. ದಾಖಲಾಗಿವೆ, ಆಂಧ್ರಪ್ರದೇಶ, ತೆಲಂಗಾಣ, ಬಳ್ಳಾರಿ, ಯಾದಗಿರಿ ಸೇರಿದಂತೆ ಹಲವು ಪ್ರದೇಶದಿಂದ ಆಗಮಿಸಿದ್ದ ಒಟ್ಟು 80 ಜನರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶಂಕಿತ ಆರೋಪಿಗಳ ಪತ್ತೆಗಾಗಿ ಸಿಸಿ ಟಿವಿ ಕ್ಯಾಮೆರಾ ಹಾಗೂ ವಿಡಿಯೋಗಳನ್ನು ಬಳಸಿಕೊಂಡು ಆರೋಪಿಗಳ ಪತ್ತೆಗಾಗಿ ಪೊಲೀಸರು ವ್ಯಾಪಕ ಬಲೆ ಬೀಸಿದ್ದಾರೆ.