7 ವರ್ಷ ನಾಪತ್ತೆ ಆಗಿದ್ದ ಬಾದಾಮಿ ಮಹಿಳೆ ಪತ್ತೆ! - ಮಹಾರಾಷ್ಟ್ರದಲ್ಲಿ ಪತ್ತೆಯಾದ ಕಸ್ತೂರಿ

Published : Feb 22, 2025, 10:38 AM IST
police reached at mid night

ಸಾರಾಂಶ

ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಫಿಲ್ಮಿ ಶೈಲಿಯಲ್ಲಿ ತಮ್ಮ ಬಂಧುಗಳ ಜತೆ ಒಂದಾದ ಹೃದಯಸ್ಪರ್ಶಿ ಪ್ರಸಂಗ ಮುಂಬೈನಲ್ಲಿ ನಡೆದಿದೆ.

 ಮುಂಬೈ: ಬಾಗಲಕೋಟೆ ಜಿಲ್ಲೆಯ ಬಾದಾಮಿಯಿಂದ 7 ವರ್ಷಗಳ ಹಿಂದೆ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಫಿಲ್ಮಿ ಶೈಲಿಯಲ್ಲಿ ತಮ್ಮ ಬಂಧುಗಳ ಜತೆ ಒಂದಾದ ಹೃದಯಸ್ಪರ್ಶಿ ಪ್ರಸಂಗ ಮುಂಬೈನಲ್ಲಿ ನಡೆದಿದೆ.

ಕಸ್ತೂರಿ ಪಾಟೀಲ (50) ಎಂಬಾಕೆಯೇ ಕುಟುಂಬಸ್ಥರ ಜತೆ ಒಂದಾಗಿರುವ ಮಹಿಳೆ. ಎನ್‌ಜಿಒ ಕಾರ್ಯಕರ್ತರ ಮುಂದೆ ಈ ಮಹಿಳೆ ‘ಬಾದಾಮಿ’ ಎಂಬ ಕೀವರ್ಡ್‌ ಬಳಸಿದ್ದು ಹಾಗೂ ಆ ಎನ್‌ಜಿಒ ನೆರವಿನಿಂದ ಬಳಿಕ ನಡೆದ ಬಾದಾಮಿ ಪೊಲೀಸರ ಕಾರ್ಯಾಚರಣೆ ಈಕೆಯ ಮೂಲದ ಶೋಧಕ್ಕೆ ನೆರವಾಗಿದೆ.

ಆಗಿದ್ದೇನು?:

ಮಹಾರಾಷ್ಟ್ರದ ರಾಯಗಡದಲ್ಲಿ ದಯನೀಯ ಸ್ಥಿತಿಯಲ್ಲಿದ್ದ ಹಾಗೂ ಅಸ್ತವ್ಯಸ್ತ ಬಟ್ಟೆ ಧರಿಸಿದ್ದ ಮಹಿಳೆಯೊಬ್ಬರು ಪನ್ವೇಲ್ ಮೂಲದ ಸ್ವಯಂಸೇವಾ ಸಂಸ್ಥೆಯಾದ ‘ಸೋಶಿಯಲ್ ಅಂಡ್ ಇವಾಂಜೆಲಿಕಲ್ ಅಸೋಸಿಯೇಷನ್ ​​ಫಾರ್ ಲವ್ ’ (ಸೀಲ್) ಕಣ್ಣಿಗೆ ಬಿದ್ದಿದ್ದರು. ತನ್ನ ಹೆಸರು ಕಸ್ತೂರಿ ಪಾಟೀಲ ಎಂದಷ್ಟೇ ಹೇಳಿದ್ದ ಮಹಿಳೆ, ಹೆಚ್ಚೇನೂ ಮಾಹಿತಿ ನೀಡಿರಲಿಲ್ಲ. ಸರಿಯಾಗಿ ಮಾತಾಡಲೂ ಆಗುತ್ತಿರಲಿಲ್ಲ. ಏಕೆಂದರೆ ಆಕೆಯ ಮಾನಸಿಕ ಹಾಗೂ ದೈಹಿಕ ಸ್ಥಿತಿ ಸರಿ ಇರಲಿಲ್ಲ. ಹೀಗಾಗಿ ಸೀಲ್ ಸಂಸ್ಥೆಯ ಕಾರ್ಯಕರ್ತರು ಆಶ್ರಯ ಕೇಂದ್ರಕ್ಕೆ ಕರೆದೊಯ್ದು ಆರೈಕೆ ಮಾಡುತ್ತಿದ್ದರು ಎಂದು ಸಂಸ್ಥೆಯ ಸಂಸ್ಥಾಪಕ ಕೆ.ಎಂ. ಫಿಲಿಪ್ ತಿಳಿಸಿದ್ದಾರೆ.

ಬಾದಾಮಿಗೆ ತಲುಪಿದು ಹೇಗೆ?

ಆದರೆ ಇತ್ತೀಚೆಗೆ ಕಸ್ತೂರಿ ಮಾತನಾಡುವಾಗ ‘ಬಾದಾಮಿ’ ಎಂದು ಹೇಳಿದ್ದಾರೆ. ಬಾದಾಮಿ ಎಂಬುದು ಕರ್ನಾಟಕದ ಒಂದು ಸ್ಥಳ ಎಂಬುದು ಫಿಲಿಪ್‌ ಅವರಿಗೆ ತಿಳಿದಿತ್ತು. ಕೂಡಲೇ ಫಿಲಿಪ್‌ ಅವರು ಬಾದಾಮಿ ಪೊಲೀಸ್ ಠಾಣೆಗೆ ಕರೆ ಮಾಡಿ ಕಸ್ತೂರಿ ಅವರ ಫೋಟೋಗಳನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸಿದ್ದರು.

ಇದಾದ 2 ತಾಸಿನಲ್ಲಿ ಇದರ ಮೂಲ ಪತ್ತೆ ಹಚ್ಚಿದ ಬಾದಾಮಿ ಪೊಲೀಸರು. ‘ಕಸ್ತೂರಿಯ ವಿವಾಹಿತ ಮಗಳು ದೇವಮ್ಮ ಭಿಂಗಾರಿ 7 ವರ್ಷಗಳಿಂದ ಅವಳನ್ನು ಹುಡುಕುತ್ತಿದ್ದಾಳೆ ಮತ್ತು ಕಾಣೆಯಾದ ಬಗ್ಗೆ ದೂರು ಕೂಡ ದಾಖಲಾಗಿದ್ದಳು’ ಎಂದು ಹೇಳಿದ್ದಾರೆ. ಆಗ ಸೀಲ್‌ ಕಾರ್ಯಕರ್ತರ ಸಂತಸಕ್ಕೆ ಪಾರವೇ ಇರಲಿಲ್ಲ.

ಊರು ತೊರೆದಿದ್ದೇಕೆ?:

ಕಸ್ತೂರಿ ಪಾಟೀಲಳ ಪತಿ 2ನೇ ವಿವಾಹವಾಗಿದ್ದರು. ಇದನ್ನು ತಿಳಿದ ಕಸ್ತೂರಿ ಮಾನಸಿಕವಾಗಿ ಅಸ್ವಸ್ಥರಾಗಿದ್ದರು. ನಂತರ ಗಂಡನ ಮನೆ ತೊರೆದು ಸಹೋದರಿಯೊಂದಿಗೆ ವಾಸಿಸಲು ಪ್ರಾರಂಭಿಸಿದ್ದರು. ಆದರೆ, ನಂತರದಲ್ಲಿ ಮಾನಸಿಕ ಖಿನ್ನತೆಗೆ ಒಳಗಾಗಿ ಮನೆಯಿಂದ ತಪ್ಪಿಸಿಕೊಂಡು ಮಹಾರಾಷ್ಟ್ರದ ರಾಯಗಡಕ್ಕೆ ತೆರಳಿದ್ದರು. ಆದರೆ ಅಲ್ಲಿ  ಕಸದ ತೊಟ್ಟಿಯಲ್ಲಿ ಬಿದ್ದಿದ್ದ ಅಳಿದುಳಿದ ಆಹಾರ, ಪಾದಚಾರಿಗಳು ಅಥವಾ ಪ್ರಯಾಣಿಕರು ಕೊಟ್ಟ ತಿನಿಸು ಸೇವಿಸಿ ಜೀವನ ಮಾಡುತ್ತಿದ್ದರು. ಬಳಿಕ ಸ್ಥಳೀಯ ಜನರು ಆಕೆಯನ್ನು ಸೀಲ್‌ ಸಂಸ್ಥೆಗೆ ತಲುಪಿಸಿದ್ದರು.

ಬಂಧುಗಳ ಸಂತಸ:

‘ನಮ್ಮ ಕಸ್ತೂರಿ ಕೊನೆಗೂ ಪತ್ತೆಯಾಗಿರುವುದರಿಂದ ನಮಗೆ ತುಂಬಾ ಸಂತೋಷವಾಗಿದೆ. ಅವರನ್ನು ಕಾಣದೆ ನನ್ನ ಸೊಸೆ ಹೆಚ್ಚು ಚಿಂತಿತಳಾಗಿದ್ದಳು’’ ಎಂದು ಕಸ್ತೂರಿಯ ಬೀಗಿತ್ತಿ ಈರಮ್ಮ ಭಿಂಗಾರಿ ಹೇಳಿದ್ದಾರೆ. 

PREV

Recommended Stories

ದಸರಾ ಹಬ್ಬ ಅದ್ಧೂರಿ ಆಚರಣೆಗೆ ಎಲ್ಲರೂ ಸಹಕರಿಸಿ: ಏಗಪ್ಪ ಸವದಿ
ಗೋಮಾಳ ಪರಭಾರೆ: ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ