;Resize=(412,232))
ಬೆಂಗಳೂರು : ಬಾಗಲಕೋಟೆಯಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಮೆರವಣಿಗೆ ಮೇಲೆ ಕಲ್ಲು ತೂರಾಟ ಮಾಡಿದ ಮುಸ್ಲಿಂ ಮತಾಂಧರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್.ಅಶೋಕ್ ಒತ್ತಾಯಿಸಿದ್ದಾರೆ.
ಶುಕ್ರವಾರ ವಿಧಾನಸೌಧದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಶಿವಾಜಿ ಮಹಾರಾಜರು ಹಿಂದೂ ಧರ್ಮಕ್ಕಾಗಿ ಹೋರಾಟ ಮಾಡಿದ್ದರು. ಇವೆಲ್ಲವೂ ಪೂರ್ವ ನಿಯೋಜಿತ ಕೃತ್ಯ. ಈ ಹಿಂದೆ ಮಂಡ್ಯದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ಮೇಲೆ ಕಲ್ಲು ತೂರಾಟ, ಶ್ರೀರಾಮನ ಫ್ಲೆಕ್ಸ್ ಹರಿದು ಹಾಕಿರುವುದು ಹೀಗೆ ಮೊದಲಾದ ರೀತಿಯಲ್ಲಿ ಮುಸ್ಲಿಂ ಮೂಲಭೂತವಾದಿಗಳು ದಾಳಿ ಮಾಡಿದ್ದರು. ಆದರೆ, ಇಂತಹ ಮತಾಂಧರನ್ನು ಬಂಧಿಸಬಾರದು ಎಂಬ ಸೂಚನೆಯನ್ನು ಕಾಂಗ್ರೆಸ್ ಸರ್ಕಾರ ಪೊಲೀಸರಿಗೆ ನೀಡಿದೆ ಎಂದು ಆಪಾದಿಸಿದರು.
ಕುಕ್ಕರ್ ಬಾಂಬ್ ಸ್ಫೋಟ ಮಾಡುವವರು ನಮ್ಮ ಬ್ರದರ್‌ಗಳು, ವಿಧಾನಸೌಧದಲ್ಲಿ ಪಾಕ್ ಜಿಂದಾಬಾದ್ ಎನ್ನುವವರು ನಮ್ಮ ಬಂಧುಗಳು ಎಂಬ ಮಾತನ್ನು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಬಾರದು ಎಂದು ಪೊಲೀಸರಿಗೆ ಸೂಚಿಸಿದ್ದಾರೆ. ಈ ಕಾರಣದಿಂದಲೇ ಇಂತಹ ಘಟನೆಗಳು ಎಲ್ಲ ಜಿಲ್ಲೆಗಳಲ್ಲಿ ನಡೆಯುತ್ತಿವೆ. ಶಿವಾಜಿ ಮಹಾರಾಜರ ಕುಟುಂಬದವರೇ ಬೆಂಗಳೂರಿನಲ್ಲಿ ದೇವಸ್ಥಾನ ಕಟ್ಟಿಸಿದ್ದರು. ಇಂತಹ ಮಹಾನ್ ವ್ಯಕ್ತಿಗೆ ಅಪಮಾನ ಮಾಡಿರುವ ಘಟನೆಗೆ ಕಾಂಗ್ರೆಸ್ ಸರ್ಕಾರವೇ ಕಾರಣ ಎಂದು ಹರಿಹಾಯ್ದರು.
ಈ ಮತಾಂಧರಿಗೆ ಪಾಕಿಸ್ತಾನ ಅಥವಾ ಬಾಂಗ್ಲಾದೇಶದ ನಂಟು ಇದೆಯೇ ಎಂದು ಪರಿಶೀಲಿಸಬೇಕು. ಈ ಹಿಂದೆ ಕೋಗಿಲು ಕ್ರಾಸ್‌ನಲ್ಲಿ ಒತ್ತುವರಿ ತೆರವು ನಡೆದ ನಂತರ ಪಾಕಿಸ್ತಾನದವರು ಟ್ವೀಟ್ ಮಾಡಿ ಖಂಡಿಸಿದ್ದರು. ಆದ್ದರಿಂದ ಈ ಘಟನೆಯಲ್ಲೂ ಯಾವ ಲಿಂಕ್ ಇದೆ ಎಂದು ಪರೀಕ್ಷೆ ಮಾಡಬೇಕಿದೆ ಎಂದು ಇದೇ ವೇಳೆ ಅಶೋಕ್ ಆಗ್ರಹಿಸಿದರು.
ಶಿವಾಜಿ ಜಯಂತಿಯ ಸಂದರ್ಭದಲ್ಲಿ ಮೆರವಣಿಗೆ ಮೇಲೆ ಕಲ್ಲು ತೂರಾಟ ನಡೆಸಿದ ದೇಶದ್ರೋಹಿಗಳನ್ನು ಒದ್ದು ಒಳಗೆ ಹಾಕಬೇಕು. ಇಂಥ ಟಿಪ್ಪು, ಔರಂಗಜೇಬ್ ಮನಸ್ಥಿತಿ ಇರುವ ದೇಶದ್ರೋಹಿಗಳನ್ನು ಯಾವುದೇ ಕಾರಣಕ್ಕೆ ಕ್ಷಮಿಸಬಾರದು. ಇಂಥವರಿಗೆ ತಕ್ಕ ಪಾಠ ಕಲಿಸಬೇಕು.
- ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
ತುಷ್ಟೀಕರಣದ ಪರಾಕಾಷ್ಠೆ
ಶಿವಾಜಿ ಮಹಾರಾಜ ದೇಶ ಕಂಡ ಅಪ್ರತಿಮ ನಾಯಕ. ಕಿಡಿಗೇಡಿಗಳು ಅಪಮಾನ ಮಾಡಿರುವುದು ಖಂಡನೀಯ. ತುಷ್ಟೀಕರಣದ ಪರಾಕಾಷ್ಠೆಗೆ ಈ ಕಾಂಗ್ರೆಸ್ ಸರ್ಕಾರ ತಲುಪಿದೆ. ಇಲ್ಲಿ ನ್ಯಾಯ, ಧರ್ಮಕ್ಕೆ ಯಾವುದೇ ಬೆಲೆಯಿಲ್ಲ. ಜನರು ಇದರ ವಿರುದ್ಧ ಹೋರಾಟ ಮಾಡುವುದು ಅನಿವಾರ್ಯ.
- ಬಸವರಾಜ ಬೊಮ್ಮಾಯಿ, ಮಾಜಿ ಸಿಎಂ
ಹಿಂದೂಗಳು ಸಹೋದರರಲ್ಲವೇ ?
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ‘ಮೈ ಬ್ರದರ್’ಸ್ ಪಾಲಿಸಿಯಿಂದ ಹೀಗಾಗುತ್ತಿದೆ. ಹಿಂದೂಗಳು ನಿಮ್ಮ ಸಹೋದರರಲ್ಲವೇ? ವಿಧಾನಸೌಧದಲ್ಲಿ ಪಾಕಿಸ್ತಾನಕ್ಕೆ ಜಯವಾಗಲಿ ಎಂದು ಘೋಷಣೆ ಕೂಗಿದಾಗ ಮುಖ್ಯಮಂತ್ರಿಗಳು ಕ್ರಮ ಕೈಗೊಂಡಿದ್ದರೆ ಇವತ್ತು ಹೀಗಾಗುತ್ತಿರಲಿಲ್ಲ.
-ಎನ್.ರವಿಕುಮಾರ್, ಪರಿಷತ್ತಿನ ಪ್ರತಿಪಕ್ಷದ ಮುಖ್ಯ ಸಚೇತಕ.