;Resize=(412,232))
ಮುಧೋಳ : ಪ್ರತಿ ಟನ್ ಕಬ್ಬಿಗೆ ₹3500 ಬೆಲೆ ನೀಡಬೇಕು ಮತ್ತು ರೈತರ ಬಾಕಿ ಹಣ ಚುಕ್ತಾ ಮಾಡಬೇಕೆಂದು ಆಗ್ರಹಿಸಿ ಮುಧೋಳ ರೈತರು ನಡೆಸಿದ್ದ ಹಿಂಸಾತ್ಮಕ ಹೋರಾಟ ಶುಕ್ರವಾರ ಸಂಜೆ ಅಂತ್ಯಗೊಂಡಿದೆ. ಟನ್ ಕಬ್ಬಿಗೆ 3,300 ರು. ದರ ನೀಡುವ ಸರ್ಕಾರದ ಆಫರ್‌ಗೆ ರೈತ ಹೋರಾಟಗಾರರು ಒಪ್ಪುವುದರೊಂದಿಗೆ ಪ್ರತಿಭಟನೆ ಅಂತ್ಯವಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ.ತಿಮ್ಮಾಪೂರ ಅವರ ನೇತೃತ್ವದಲ್ಲಿ ಶುಕ್ರವಾರ ಮಧ್ಯಾಹ್ನ ಸಕ್ಕರೆ ಕಾರ್ಖಾನೆಗಳ ಮಾಲೀಕರ ಹಾಗೂ ಕಬ್ಬು ಹೋರಾಟಗಾರ ಮುಖಂಡರ ಮಧ್ಯೆ ಸಂಧಾನ ಸಭೆ ನಡೆಯಿತು ಹಾಗೂ ಸಭೆ ಯುಶ ಕಂಡಿತು.
ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಸಚಿವ ತಿಮ್ಮಾಪೂರ, ‘ಪ್ರಸಕ್ತ ಹಂಗಾಮಿಗೆ ಪ್ರತಿ ಟನ್ ಕಬ್ಬಿಗೆ ಕಾರ್ಖಾನೆಯವರು ಮೊದಲನೇ ಕಂತಿನ ಬಿಲ್ ₹3200 ದರ ಕೊಡಬೇಕು, ಕಬ್ಬಿನ ರಿಕವರಿ ಆಧಾರದ ಮೇಲೆ ದರ ನೀಡದೆ ಏಕರೂಪ ಬೆಲೆ ಕೊಡಬೇಕು. ಎರಡನೇ ಕಂತಿನ ಬಿಲ್ ರಾಜ್ಯ ಸರ್ಕಾರ ಟನ್‌ಗೆ ₹50 ಪ್ರೋತ್ಸಾಹ ಧನ ಹಾಗೂ ಕಾರ್ಖಾನೆಯವರು ₹50 ಕೊಡಬೇಕು (ಎಲ್ಲ ಸೇರಿಸಿ 3300 ರು.) ಎಂದು ಸಂಧಾನ ಸಭೆಯಲ್ಲಿ ನಿರ್ಣಯಿಸಲಾಯಿತು’ ಎಂದರು.
‘ಈ ಸೂತ್ರಕ್ಕೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರು ಒಪ್ಪಿಗೆ ನೀಡಿದ್ದಾರೆ’ ಎಂದು ಹೇಳಿದ ಅವರು, ‘ಮುಧೋಳ ನಿರಾಣಿ ಶುಗರ್ಸ್, ಸಮೀರವಾಡಿ ಗೋದಾವರಿ ಶುಗರ್ಸ್, ಉತ್ತೂರಿನ ಐಸಿಪಿಎಲ್ ಶುಗರ್ಸ್, ಸಿದ್ದಾಪುರದ ಪ್ರಭುಲಿಂಗೇಶ್ವರ ಸಕ್ಕರೆ ಕಾರ್ಖಾನೆಗೆ ಮಾತ್ರ ಈ ನಿಯಮ ಅನ್ವಯವಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.
ರೈತ ಸಂಘ, ಹಸಿರು ಸೇನೆ ಹಾಗೂ ಕಬ್ಬು ಬೆಳೆಗಾರರ ಸಂಘದ ಆಶ್ರಯದಲ್ಲಿ ನಗರದ ಸಂಗೊಳ್ಳಿ ರಾಯಣ್ಣ ಸರ್ಕಲ್‌ನಲ್ಲಿ ಪ್ರಸಕ್ತ ಸಾಲಿಗೆ 3500 ದರ ನೀಡಬೇಕು ಎಂದು ರೈತರು ಹೋರಾಟ ನಡೆಸುತ್ತಿದ್ದರು. ಈ ನಡುವೆ ಸಕ್ಕರೆ ಕಾರ್ಖಾನೆಯೊಂದು ಕಬ್ಬು ನುರಿಸುವ ಕೆಲಸ ಆರಂಭಿಸಿದ್ದರಿಂದ ಸಿಟ್ಟಿಗೆದ್ದ ಹೋರಾಟಗಾರರು, ಗುರುವಾರ ಕಾರ್ಖಾನೆಗೆ ತೆರಳುತ್ತಿದ್ದ ಸುಮಾರು 96 ಕಬ್ಬು ಟ್ರಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದರು.
ಬಾಗಲಕೋಟೆ: ಜಿಲ್ಲೆಯ ಸಮೀರವಾಡಿ ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಿಡಿಗೇಡಿಗಳು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದ್ದ ಪ್ರಕರಣದಲ್ಲಿ ಹಾನಿಯ ಅಂಕಿ-ಅಂಶ ಬಹಿರಂಗಗೊಂಡಿದೆ. ಸಕ್ಕರೆ ಕಾರ್ಖಾನೆ ಆವರಣದಲ್ಲಿ ಕಬ್ಬು ತುಂಬಿಕೊಂಡು ೨೪೦ ಟ್ರ್ಯಾಕ್ಟರ್‌ಗಳು ನಿಂತಿದ್ದವು. ಇವುಗಳ ಪೈಕಿ 96 ಟ್ರ್ಯಾಕ್ಟರ್‌ಗಳ ಟ್ರೇಲರ್‌ನಲ್ಲಿದ್ದ ಕಬ್ಬಿಗೆ ಬೆಂಕಿ ಹಾಕಲಾಗಿದೆ. ಇದರಿಂದ 17 ಟ್ರ್ಯಾಕ್ಟರ್‌ಗಳಿಗೆ ಹಾನಿಯಾಗಿದೆ. 12 ಟ್ರ್ಯಾಕ್ಟರ್‌ಗಳ ಎಂಜಿನ್ ಭಾಗಶಃ ಹಾನಿ ಆಗಿವೆ. 1 ಟ್ರ್ಯಾಕ್ಟರ್ ಸಂಪೂರ್ಣ ಸುಟ್ಟು ಹೋಗಿದೆ. 5 ಬೈಕ್ ಸಂಪೂರ್ಣ ಭಸ್ಮ ಆಗಿವೆ. 3 ಬೈಕ್ ಭಾಗಶಃ ಜಖಂ ಆಗಿವೆ. ಡಿಆರ್ ವ್ಯಾನ್, 3 ಕಾರ್ಖಾನೆಯ ಫೈರ್ ಎಂಜಿನ್ ವಾಹನ ಘಟನೆಯಲ್ಲಿ ಹಾನಿಯಾಗಿದೆ. 1033 ಟನ್ ಕಟ್ಟು ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.