ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬರಲಿರುವ ಬಜೆಟ್‌ನಲ್ಲಿ ಬಾಗಲಕೋಟೆ ಮತಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆಗೆ ಅನುದಾನ ಮೀಸಲಿಡುವಂತೆ ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ಸಂಚಾಲಕರೂ ಆದ ಕಾಂಗ್ರೆಸ್ ಮುಖಂಡ ಹೊಳಬಸು ಶೆಟ್ಟರ ಒತ್ತಾಯಿಸಿದ್ದಾರೆ.

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ಬಾಗಲಕೋಟೆ ಕ್ಷೇತ್ರಕ್ಕೆ ಸಂಬಂಧಿಸಿದ ಹಲವು ಯೋಜನೆಗಳ ಪಟ್ಟಿ ಸಲ್ಲಿಸಿರುವ ಅವರು, ಐತಿಹಾಸಿಕ ಪರಂಪರೆ, ವಿಶೇಷ ಸಂಸ್ಕೃತಿ ಹೊಂದಿರುವ ಬಾಗಲಕೋಟೆ ಹೋಳಿ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ವಿಶೇಷ ಪ್ರೋತ್ಸಾಹಧನ ಹಾಗೂ ವಾರ್ಷಿಕ ನೆರವು ನೀಡುವಂತೆ ಮನವಿ ಮಾಡಿದ್ದಾರೆ.

ಬಾಗಲಕೋಟೆಯ ಐತಿಹಾಸಿಕ ರಾಷ್ಟ್ರೀಯ ಪ್ರವಾಸಿ ತಾಣವಾದ ಐಹೊಳೆಯ ಸಮಗ್ರ ಅಭಿವೃದ್ಧಿ ಮತ್ತು ಐಹೊಳೆ ಗ್ರಾಮವನ್ನು ಸಂಪೂರ್ಣ ಸ್ಥಳಾಂತರಕ್ಕೆ ಕ್ರಮ ಕೈಗೊಳ್ಳಬೇಕು. ಬಾಗಲಕೋಟೆ ವಿಧಾನಸಭಾ ಮತಕ್ಷೇತ್ರ ವ್ಯಾಪ್ತಿಯ ಸಣ್ಣ ನೀರಾವರಿ ಇಲಾಖೆಯ ಕೆರೆಗಳಿಗೆ ನೀರು ತುಂಬಿಸಲು ಯೋಜನೆ ಅನುಷ್ಠಾನಗೊಳಿಸಲು ಅಗತ್ಯ ಅನುದಾನ ಮೀಸಲಿಡಬೇಕು. ಬಾಗಲಕೋಟೆ ನಗರ, ಏಷ್ಯಾದಲ್ಲೇ ಮುಳುಗಡೆಯಾದ 2ನೇ ದೊಡ್ಡ ನಗರವಾಗಿದ್ದು, ಬಾಗಲಕೋಟೆ ನಗರ, ನವನಗರ, ಅಮೀನಗಡ, ಕಮತಗಿ, ಶಿರೂರ ಸೇರಿದಂತೆ ಈ ಎಲ್ಲ ನಗರಗಳ ರಸ್ತೆ, ಇನ್ನಿತರೆ ಮೂಲ ಸೌಕರ್ಯ ಅಭಿವೃದ್ಧಿಗೆ ₹150 ಕೋಟಿ ವಿಶೇಷ ಅನುದಾನ ಘೋಷಣೆ ನೀಡುವಂತೆ ಆಗ್ರಹಿಸಿದ್ದಾರೆ.

ಹೋಳಿ ಆಚರಣೆಗೆ ಪ್ರೋತ್ಸಾಹ ಕೊಡಿ:


ದೇಶದ ಕೋಲ್ಕತಾ ನಗರ ಹೊರತುಪಡಿಸಿದರೆ ಬಾಗಲಕೋಟೆಯ ಹೋಳಿಹಬ್ಬ ವಿಶೇಷ ಆಚರಣೆಯ ಪರಂಪರೆ ಹೊಂದಿದ್ದು, ಈ ಆಚರಣೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪ್ರೋತ್ಸಾಹ ನೀಡುವ ಜತೆಗೆ ಪ್ರತಿವರ್ಷ, ಅತ್ಯಂತ ಆಕರ್ಷಕವಾಗಿ ನಡೆಯುವ ಬಣ್ಣದ ಬಂಡಿಗಳು, ಸೋಗಿನ ಬಂಡಿಗಳ ಸಂಸ್ಕೃತಿ ಉಳಿಸಿ, ಬೆಳೆಸಲು ಇಲಾಖೆಯಿಂದ ವಿಶೇಷ ಪ್ರೋತ್ಸಾಹ ನೀಡಬೇಕು ಎಂದು ಮನವಿ ಮಾಡಿದ್ದಾರೆ.

ಬಾಗಲಕೋಟೆ ನಗರದಲ್ಲಿ ಸಾಂಸ್ಕೃತಿಕ ನಾಯಕ ಜಗಜ್ಯೋತಿ ಬಸವೇಶ್ವರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಪುತ್ಥಳಿಯನ್ನು ರಾಜ್ಯ ಸರ್ಕಾರದಿಂದ ನಿರ್ಮಾಣ ಮಾಡಬೇಕು. ಬಾಗಲಕೋಟೆ ನಗರ ಹೊರವಲಯದ ಸುಕ್ಷೇತ್ರ ಗುಡ್ಡದಮಲ್ಲಾಪುರ ಧಾರ್ಮಿಕ ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ವಿಶೇಷ ಒತ್ತು ನೀಡಬೇಕು. ಬಾಗಲಕೋಟೆಯ ನವನಗರ ಮತ್ತು ಅಮೀನಗಡ ಪಟ್ಟಣದಲ್ಲಿ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯ ಸ್ಥಾಪಿಸಲು ಬಜೆಟ್‌ನಲ್ಲಿ ಅಗತ್ಯ ಅನುದಾನ ನೀಡಬೇಕು ಎಂದು ಕೋರಿದ್ದಾರೆ.

ಗುಳೇದಗುಡ್ಡ ಖಣದ ಮೂಲಕ ವಿಶ್ವ ಪ್ರಸಿದ್ಧಿ ಪಡೆದ ತಾಲೂಕು ಕೇಂದ್ರ ಗುಳೇದಗುಡ್ಡದಲ್ಲಿ ತಾಲೂಕು ಕ್ರೀಡಾಂಗಣ ನಿರ್ಮಿಸುವ ಮೂಲಕ ಈ ಭಾಗದ ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಬಾಗಲಕೋಟೆ ವಿಧಾನಸಭೆ ಮತಕ್ಷೇತ್ರ ವ್ಯಾಪ್ತಿಯ ಹಲವು ಪ್ರಮುಖ ಯೋಜನೆಗಳ ಅನುಷ್ಠಾನಕ್ಕೆ ಬಜೆಟ್‌ನಲ್ಲಿ ಹಣ ಮೀಸಲಿಡಲು ಮುಖ್ಯಮಂತ್ರಿಗಳಿಗೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಆರ್.ಬಿ.ತಿಮ್ಮಾಪುರ ಅವರಿಗೆ ಮನವಿ ಮಾಡಿದ್ದೇನೆ. ಈ ಕ್ಷೇತ್ರದ ಶಾಸಕರಾಗಿದ್ದ ದಿ.ಎಚ್.ವೈ. ಮೇಟಿ ಅವರ ಕನಸಿನ ಹಲವು ಯೋಜನೆಗಳ ಅನುಷ್ಠಾನ ಅಗತ್ಯವಿದ್ದು, ಆ ಮೂಲಕ ಅವರ ಹೆಸರು ಅಜರಾಮರವಾಗಿಡುವ ಪ್ರಯತ್ನ ನಮ್ಮದು.

- ಹೊಳಬಸು ಷ. ಶೆಟ್ಟರ, ಕಾಂಗ್ರೆಸ್ ಮುಖಂಡರು