ಬಾಗಲಕೋಟೆ: ಮನೆಯಲ್ಲೇ ಗರ್ಭಪಾತ ಮಾಡಿಸಿದ ನರ್ಸ್‌

KannadaprabhaNewsNetwork |  
Published : May 30, 2024, 12:55 AM IST
ಕಕಕಕ | Kannada Prabha

ಸಾರಾಂಶ

ನಕಲಿ ವೈದ್ಯೆಯೊಬ್ಬರು ಮಹಾರಾಷ್ಟ್ರದ ಮಹಿಳೆಗೆ ತನ್ನ ಮನೆಯಲ್ಲೇ ಗರ್ಭಪಾತ ಮಾಡಿಸಿದ್ದು, ಗರ್ಭಪಾತದ ಬಳಿಕ ಮಹಿಳೆ ಮೃತಪಟ್ಟಿರುವ ಘಟನೆ ನಡೆದಿದೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ಆಸ್ಪತ್ರೆಯೊಂದರಲ್ಲಿ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದ, ನಕಲಿ ವೈದ್ಯೆ ಕವಿತಾ ಬಾಡನವರ ಎಂಬುವರು ಮಹಾರಾಷ್ಟ್ರದ ಮಹಿಳೆಗೆ ತನ್ನ ಮನೆಯಲ್ಲೇ ಗರ್ಭಪಾತ ಮಾಡಿಸಿದ್ದು, ಗರ್ಭಪಾತದ ಬಳಿಕ ಮಹಿಳೆ ಮೃತಪಟ್ಟಿದ್ದಾಳೆ. ಪ್ರಕರಣ ಸಂಬಂಧ ಮೂವರನ್ನು ಬಂಧಿಸಲಾಗಿದೆ.ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆ ಹಾತಕಲಂಗಡ ತಾಲೂಕಿನ ಆಳತೆ ಗ್ರಾಮದ ಸೋನಾಲಿ ಸಚಿನ್ ಕದಂ (32) ಮೃತಪಟ್ಟ ಮಹಿಳೆ. ಈಕೆಗೆ ಈಗಾಗಲೇ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಮೂರನೇ ಬಾರಿಗೆ ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಸೋನಾಲಿ, ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಯಲ್ಲಿ ಸೋನೋಗ್ರಾಫಿ ಮಾಡಿಸಿದಾಗ ಹೊಟ್ಟೆಯಲ್ಲಿ ಹೆಣ್ಣು ಮಗು ಇರುವುದು ಗೊತ್ತಾಗಿದೆ. ಹೀಗಾಗಿ, ಮಗು ತೆಗೆಸಿಕೊಳ್ಳಲು ಆಕೆ ಮುಂದಾಗಿದ್ದು, ತನ್ನ ಸಂಬಂಧಿ ಮಾರುತಿ ಬಾಬಸೋ ಖರಾತ್‌ ಮತ್ತು ವಿಜಯ್ ಗೌಳಿ ಎಂಬುವರ ಸಹಾಯದಿಂದ ಸೋಮವಾರ ಮಹಾಲಿಂಗಪುರಕ್ಕೆ ಬಂದಿದ್ದಳು. ಆಗ ಮಹಾಲಿಂಗಪುರದ ಆಸ್ಪತ್ರೆಯೊಂದರ ನರ್ಸ್‌ ಕವಿತಾ, ₹40000 ಪಡೆದು, ಯಾವುದೇ ಮುಂಜಾಗ್ರತಾ ಕ್ರಮ ಕೈಗೊಳ್ಳದೆ ತನ್ನ ಮನೆಯಲ್ಲೇ ಗರ್ಭಪಾತ ಮಾಡಿಸಿದ್ದಾಳೆ.

ಈ ವೇಳೆ, ಸೋನಾಲಿಗೆ ಹೆಚ್ಚಿನ ರಕ್ತಸ್ರಾವವಾಗಿದ್ದು, ಆಕೆಗೆ ಪ್ರಜ್ಞೆ ತಪ್ಪಿತ್ತು. ಪರಿಸ್ಥಿತಿ ಕೈ ಮೀರುವ ಹಂತದಲ್ಲಿದ್ದಾಗ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಗಿತ್ತು. ಅಷ್ಟರಲ್ಲಿ ಮಾರ್ಗ ಮಧ್ಯೆ ಕಾರಿನಲ್ಲಿಯೇ ಸೋನಾಲಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಕವಿತಾ ಬಾಡನವರ, ಮಾರುತಿ ಬಾಬಸೋ ಖರಾತ್‌ , ವಿಜಯ್ ಗೌಳಿಯನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

2022 ರಲ್ಲಿಯೂ ಇಂತಹುದೇ ಪ್ರಕರಣದಲ್ಲಿ ಕವಿತಾ ಮೇಲೆ ದೂರು ದಾಖಲಾಗಿದ್ದು, ಅದರ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನೀರಿನಲ್ಲಿ ಕಾಳು ಹಾಕಿ ಕಲಬೆರಿಕೆ ಪತ್ತೆ ಮಾಡಿ
ಭಾಷಣ ಮಾಡಿಕೊಂಡು ಹೋದವನಲ್ಲ, ಪಕ್ಷದ ಎಲ್ಲಾ ಕೆಲ್ಸ ಮಾಡಿದ್ದೇನೆ: ಡಿಕೆಶಿ