- ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ಪ್ರತಿಭಟನೆ
ಕನ್ನಡಪ್ರಭ ವಾರ್ತೆ ಧಾರವಾಡ
ಬಗರ್ ಹುಕುಂ ಸಾಗುವಳಿದಾರರಿಗೆ ಹಕ್ಕು ಪತ್ರ ನೀಡಲು ಆಗ್ರಹಿಸಿ ಅಖಿಲ ಭಾರತ ಕೃಷಿ ಕಾರ್ಮಿಕರ ಸಂಘಟನೆ ವತಿಯಿಂದ ನಗರದಲ್ಲಿ ಮಂಗಳವಾರ ಬೃಹತ್ ಪ್ರತಿಭಟನೆ ನಡೆಯಿತು.ಕಲಘಟಗಿ ತಾಲೂಕಿನಲ್ಲಿ ಸುಮಾರು ಏಳು ದಶಕಗಳಿಂದ ಭೂಹೀನ ಮತ್ತು ಬಡ ರೈತ ಕೃಷಿ ಕಾರ್ಮಿಕರು ಕಂದಾಯ ಹಾಗೂ ಅರಣ್ಯದ ಕುರುಚಲುಗಿಡ, ಕಲ್ಲು ಭೂಮಿ ಇರುವ ಪ್ರದೇಶದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಸಾಗುವಳಿ ಮಾಡುತ್ತಿದ್ದಾರೆ. ಕಲಘಟಗಿ ತಾಲೂಕಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸುಮಾರು ವರ್ಷಗಳಿಂದ ಕಂದಾಯ ಹಾಗೂ ಅರಣ್ಯ ಭೂಮಿಯಲ್ಲಿ ಜೀವನೋಪಾಯಕ್ಕಾಗಿ ಬಡರೈತರು ಕೃಷಿ ಮಾಡುತ್ತಾ ಬಂದಿರುತ್ತಾರೆ. ಈಗಾಗಲೇ ಸರ್ಕಾರ ಬದಲಾವಣೆಯಾಗಿ 6 ತಿಂಗಳು ಕಳೆದರೂ ಇಲ್ಲಿ ವರೆಗೂ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಿರುವುದಿಲ್ಲ. ಕೂಡಲೇ ಸರ್ಕಾರ ಭೂ ಮಂಜೂರಾತಿ ಸಮಿತಿಗಳನ್ನು ರಚಿಸಿ ಫಾರಂ ನಂ.57 ಸಲ್ಲಿಸಿರುವ ಎಲ್ಲಾ ಅರ್ಜಿಗಳನ್ನು ಸಮಿತಿಯಲ್ಲಿ ಪರಿಶೀಲಿಸಿ ಕೂಡಲೇ ತಾಲೂಕಿನ ಎಲ್ಲಾ ಸಾಗುವಳಿದಾರರಿಗೆ ಕೂಡಲೇ ಹಕ್ಕುಪತ್ರ ಮಂಜೂರು ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗ್ರೇಡ್ 2 ತಹಸೀಲ್ದಾರ್ ಬಸವರಾಜ ಹೊಕ್ಕಣ್ಣವರ ಒಂದು ವಾರದ ಒಳಗೆ ತಹಸೀಲ್ದಾರ್‌ರ ಜೊತೆಗೆ ಸಭೆ ಕರೆಯುವುದಾಗಿ ಮತ್ತು ಭೂ ಮಂಜೂರಾತಿ ಸಮಿತಿ ರಚಿಸುವ ಭರವಸೆ ನೀಡಿದರು.ರಾಜ್ಯ ಉಪಾಧ್ಯಕ್ಷ ಲಕ್ಷ್ಮಣ ಜಡಗಣ್ಣವರ್, ಜಿಲ್ಲಾಧ್ಯಕ್ಷೆ ದೀಪಾ ಧಾರವಾಡ, ಕಾರ್ಯದರ್ಶಿ ಶರಣು ಗೋನವಾರ, ಉಪಾಧ್ಯಕ್ಷರಾದ ಹನುಮೇಶ ಹುಡೇದ, ಸಂತೋಷ್ ಗೋರ್ಪಡೆ, ಶಿವಲಿಂಗಪ್ಪ ಉಣಕಲ್, ಈರಪ್ಪ ಅಂಗಡಿ, ಗಣೇಶ ಲಮಾಣಿ ಮತ್ತಿತರರು ಇದ್ದರು.