ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳಿಗೆ ಕುಡಿಯುವ ನೀರು ಪೂರೈಕೆ ಮಾಡುವ ಜಕ್ಕಲಮಡುಗು ಜಲಾಶಯಕ್ಕೆ ನಿರಂತರ ಮಳೆಯಿಂದ ನೀರು ಹರಿದ ತುಂಬಿ ಹರಿದು ಕೋಡಿ ಬಿದ್ದ ಹಿನ್ನೆಲೆಯಲ್ಲಿ ಶಾಸಕ ಪ್ರದೀದ್ ಈಶ್ವರ್ ಬುಧವಾರ ಬೆಳಂಬೆಳಗ್ಗೆ ಬಾಗಿನ ಅರ್ಪಿಸಿದರು.ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಶಾಸಕರು, ಜಕ್ಕಲಮಡುಗು ಜಲಾಶಯ ತುಂಬಿರುವುದರಿಂದ ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರಗಳಿಗೆ ಒಂದೂವರೆ ವರ್ಷಗಳ ಕಾಲ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ. 1955ರಲ್ಲಿ ಭಾರತ ರತ್ನ ಸರ್.ಎಂ. ವಿಶ್ವೇಶ್ವರಯ್ಯ ರವರ ಯೋಜನೆಯಂತೆ ರೂಪಿಸಿರುವ ಈ ಜಲಾಶಯಕ್ಕೆ ಒಂದು ದೊಡ್ಡ ಇತಿಹಾಸವೇ ಇದೆ ಎಂದರು.
ಕೋಡಿ ಹರಿದ ಜಲಾಶಯಜಿಲ್ಲೆಯಾದ್ಯಂತ ಹಿಂಗಾರು ಮಳೆ ಅಬ್ಬರ ಮುಂದುವರಿದಿದೆ. ಕಳೆದ ಹತ್ತು ದಿನಗಳಿಂದ ಜಿಲ್ಲೆಯಲ್ಲಿ ಭರ್ಜರಿ ಮಳೆಯಾಗಿದೆ. ಇಂದೂ ಕೂಡ ಮಳೆ ಮುಂದುವರಿದಿದ್ದು, ಅನೇಕ ಕೆರೆ, ಕುಂಟೆಗಳಿಗೆ ಜೀವ ಕಳೆ ಬಂದಿದೆ. ಕಳೆದ ವರ್ಷದಲ್ಲಿ ಮಳೆ ಕೊರತೆಯಿಂದಾಗಿ ಬರಿದಾದ ಕೆರೆಗಳಿಗೆ ಹಿಂಗಾರು ಮಳೆ ಹೊಸ ಕಳೆ ತುಂಬಿದೆ. ಸೋಮವಾರ ಅಬ್ಬರಿಸಿದ ಮಳೆಯಿಂದಾಗಿ ಜಕ್ಕಲಮಡಗು, ಶ್ರೀನಿವಾಸ ಸಾಗರ ಸೇರಿದಂತೆ ವಿವಿಧ ಕೆರೆ, ಜಲಾಶಯ ತುಂಬಿ ಕೋಡಿ ಹೋಗಿದೆ ಎಂದರು.
ದೊಡ್ಡಬಳ್ಳಾಪುರ ನಗರ ಹಾಗೂ ಚಿಕ್ಕಬಳ್ಳಾಪುರ ನಗರಕ್ಕೆ ಕುಡಿಯುವ ನೀರಿನ ಮೂಲವಾಗಿರುವ ಜಕ್ಕಲಮಡುಗು ಜಲಾಶಯವು ಸೋಮವಾರದ ಮಳೆಗೆ ಭರ್ತಿಯಾಗಿದೆ. 4,390 ದಶ ಲಕ್ಷ ಲೀ. ನೀರಿನ ಸಾಮರ್ಥ್ಯ ಹೊಂದಿರುವ ಜಲಾಶಯವು 51.24 ಚ. ಮೀ. ಶೇಖರಣಾ ವಿಸ್ತೀರ್ಣ ಹೊಂದಿದೆ.ಜಲಾಶಯ ತುಂಬಿ ಕೋಡಿ ಹೋಗಲು ಆರಂಭವಾಗಿದೆ. ಜಲಾಶಯದಿಂದ ಚಿಕ್ಕಬಳ್ಳಾಪುರಕ್ಕೆ ಶೇ.68ರಷ್ಟು, ದೊಡ್ಡಬಳ್ಳಾಪುರಕ್ಕೆ ಶೇ.32ರಷ್ಟು ನೀರಿನ ಹಂಚಿಕೆ ಮಾಡಲಾಗುತ್ತದೆ ಎಂದು ಶಾಸಕರು ಹೇಳಿದರು.2028ಕ್ಕೆ ಎತ್ತಿನಹೊಳೆ ನೀರು
ಪ್ರತಿ ದಿನ ಚಿಕ್ಕಬಳ್ಳಾಪುರ ಮತ್ತು ದೊಡ್ಡಬಳ್ಳಾಪುರ ನಗರಗಳ ಜನತೆಗೆ ಕುಡಿಯಲು ತಲಾ 2 ಎಂಎಲ್‌ಡಿ ನೀರು ಬಳಸಲಾಗುತ್ತದೆ. ಜಲಾಶಯ ತುಂಬಿರುವುದರಿಂದ ಮುಂದಿನ ಒಂದೂವರೆ ವರ್ಷದವರೆಗೂ ನೀರಿನ ಲಭ್ಯತೆ ಇರಲಿದೆ. 2028ರ ವೇಳೆಗೆ ಈ ಜಲಾಶಯಕ್ಕೆ ಎತ್ತಿನಹೊಳೆ ನೀರು ಬರುವುದರಿಂದ ಶಾಶ್ವತವಾದ ಕುಡಿಯುವ ನೀರಿನ ಸಮಸ್ಯೆ ಬಗೆ ಹರಿಯುತ್ತದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಕೋಚಿಮುಲ್ ನಿರ್ದೇಶಕ ಭರಣಿ ವೆಂಕಟೇಶ್. ತಹಸಿಲ್ದಾರ್ ಅನಿಲ್, ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮಂಜುನಾಥ್, ಸ್ಥಳೀಯ ಮುಖಂಡರು ಇದ್ದರು.