ಸಾಮಾನ್ಯರಿಗೆ ಸ್ಪಂದಿಸದ ಅಧಿಕಾರಿಗಳು: ನಗರಸಭೆ ಸದಸ್ಯರ ಆಕ್ರೋಶ

KannadaprabhaNewsNetwork |  
Published : Oct 24, 2024, 12:48 AM IST
ಶಿರಸಿಯ ಅಟಲ್‌ಜೀ ಸಭಾಭವನದಲ್ಲಿ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ಸಾಮಾನ್ಯ ಸಭೆ ನಡೆಯಿತು. | Kannada Prabha

ಸಾರಾಂಶ

ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಗುತ್ತಿಗೆದಾರರು ಅಧಿಕಾರಿಗಳ ಸಮಯ ಹಾಳು ಮಾಡಬಾರದು. ೧೦ ನಿಮಿಷಕ್ಕಿಂತ ಜಾಸ್ತಿ ಅಧಿಕಾರಿಗಳ ಜತೆ ಕುಳಿತು ಮಾತನಾಡಬಾರದು. ಸಾರ್ವಜನಿಕರ ಕೆಲಸಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಶಿರಸಿ: ಪೌರಾಯುಕ್ತರು, ಅಧಿಕಾರಿಗಳ ಕೊಠಡಿಯಲ್ಲಿ ಯಾವಾಗಲೂ ಗುತ್ತಿಗೆದಾರರು ಹಾಗೂ ಏಜೆಂಟರೇ ಕುಳಿತು ಗಂಟೆಗಟ್ಟಲೇ ಹರಟೆ ಹೊಡೆಯುತ್ತಿರುತ್ತಾರೆ. ಜನಸಾಮಾನ್ಯರು ಅಧಿಕಾರಿಗಳನ್ನು ಭೇಟಿಯಾಗಲು ಹೊರಗಡೆ ಕುಳಿತಿದ್ದರೂ ಅವರಿಗೆ ಅಧಿಕಾರಿಗಳನ್ನು ಭೇಟಿಯಾಗಲು ಸಮಯವನ್ನೇ ನೀಡಲಾಗುತ್ತಿಲ್ಲ ಎಂಬ ವಿಷಯದ ಕುರಿತು ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.ನಗರದ ಅಟಲ್‌ಜೀ ಸಭಾಭವನದಲ್ಲಿ ಬುಧವಾರ ನಗರಸಭೆ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಅಧ್ಯಕ್ಷತೆಯಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಸದಸ್ಯ ಮಧುಕರ ಬಿಲ್ಲವ ವಿಷಯ ಪ್ರಸ್ತಾಪಿಸಿ, ಸದಸ್ಯರು ನಗರಸಭೆಗೆ ಬಂದರೂ ಅಧಿಕಾರಿಗಳಿಗೆ ನಮ್ಮೊಂದಿಗೆ ಮಾತನಾಡಲು ಸಮಯ ಇರುವುದಿಲ್ಲ. ಇನ್ನು ಮುಂದೆ ಇದೇ ಸ್ಥಿತಿ ಮರುಕಳಿಸಿದರೆ ಶಾಸಕರಿಗೆ ಹಾಗೂ ಸಂಸದರಿಗೆ ನೇರವಾಗಿ ಫೋನ್ ಮಾಡುತ್ತೇವೆ ಎಂದು ಎಚ್ಚರಿಸಿದರು.ಈ ಕುರಿತು ಸ್ಪಷ್ಟನೆ ನೀಡಿದ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ, ಗುತ್ತಿಗೆದಾರರು ಅಧಿಕಾರಿಗಳ ಸಮಯ ಹಾಳು ಮಾಡಬಾರದು. ೧೦ ನಿಮಿಷಕ್ಕಿಂತ ಜಾಸ್ತಿ ಅಧಿಕಾರಿಗಳ ಜತೆ ಕುಳಿತು ಮಾತನಾಡಬಾರದು. ಸಾರ್ವಜನಿಕರ ಕೆಲಸಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಸದಸ್ಯ ಆನಂದ ಸಾಲೇರ ಮಾತನಾಡಿ, ನಗರಸಭೆ ಕಸ ಸಂಗ್ರಹಣೆ ವಾಹನಕ್ಕೆ ಪ್ಲಾಸ್ಟಿಕ್ ಬಾಟೆಲ್ ತುಂಬಿಕೊಳ್ಳುವ ಸಲುವಾಗಿ ಪಕ್ಕದಲ್ಲಿ ಚೀಲ ಕಟ್ಟುತ್ತಾರೆ. ಆದರೆ, ಕಸ ರಸ್ತೆ ಮೇಲೆ ಬೀಳುತ್ತ ಸಾಗುತ್ತದೆ. ಸ್ವಚ್ಛತೆ ಬಗ್ಗೆ ಇಷ್ಟೊಂದು ಅರಿವು ಮೂಡಿಸಿ, ಜನಸಾಮಾನ್ಯರು ಗಾಡಿಯವರೆಗೂ ತಂದುಕೊಟ್ಟರೂ ಕಸ ರಸ್ತೆ ಮೇಲೆ ಕೆಡವಲಾಗುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ನಗರಸಭೆಯ ವಿವಿಧ ಯೋಜನೆ ಅಡಿಯ ಕಾಮಗಾರಿಗಳಿಗೆ ಮರುಟೆಂಡರ್ ಕರೆಯುವ ಬಗ್ಗೆ ಚರ್ಚಿಸಲಾಯಿತು. ನಗರಸಭೆ ವ್ಯಾಪ್ತಿಯ ನೀರು ಸರಬರಾಜು ವಿಭಾಗಕ್ಕೆ ಸಿಬ್ಬಂದಿಯನ್ನು ಹೊರಗುತ್ತಿಗೆ ಆಧಾರದಲಿ ಪೂರೈಸಲು ತಯಾರಿಸಿದ ಅಂದಾಜು ಪತ್ರಿಕೆಯ ₹೫೯.೮೩ ಲಕ್ಷಕ್ಕೆ ಅನುಮೋದನೆ ನೀಡಲಾಯಿತು. ಶಿವಾಜಿ ಚೌಕದಲ್ಲಿರುವ ಹಳೇ ಗ್ರಾಮ ಚಾವಡಿ ಕಟ್ಟಡದ ಜಾಗದಲ್ಲಿ ಪೌರಕಾರ್ಮಿಕರ ವಿಶ್ರಾಂತಿ ಗೃಹ ನಿರ್ಮಾಣ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ಕುಮಾರ ಬೋರ್ಕರ್, ಪೌರಾಯುಕ್ತ ಕಾಂತರಾಜು ಮತ್ತು ಸರ್ವ ಸದಸ್ಯರು ಇದ್ದರು.

ಗಣೇಶನಗರ ಶಾಲೆ ಎಂದು ಬದಲಾಯಿಸಲು ತೀರ್ಮಾನ

ಗಣೇಶನಗರ ಸಾರ್ವಜನಿಕರಿಂದ ಮತ್ತು ವಾರ್ಡ್ ನಂಬರ್ ೧ ಮತ್ತು ವಾರ್ಡ್ ನಂಬರ್ ೨ರ ಸದಸ್ಯರಿಂದ ಬಂದ ಪತ್ರದ ಕುರಿತು ವಿಷಯ ಪ್ರಸ್ತಾಪಿಸಿದಾಗ ಆಜಾದ್ ನಗರದ ಶಾಲೆ ಹೆಸರು ಬದಲು ಗಣೇಶನಗರ ಶಾಲೆ ಎಂದು ದಾಖಲಾತಿಯಲ್ಲಿ ಬದಲಾಯಿಸಲು ತೀರ್ಮಾನಿಸಲಾಯಿತು.

ಸದಸ್ಯರು ಸರ್ವಾನುಮತದಿಂದ ನಿರ್ಣಯಕ್ಕೆ ಸಹಮತಿ ಸೂಚಿಸಿ, ಆದಾಜ್ ನಗರ ಹಿರಿಯ ಪ್ರಾಥಮಿಕ ಶಾಲೆಯ ಹೆಸರು ಬದಲಾಯಿಸಲು ಸದಸ್ಯರು ಒತ್ತಾಯ ಮಾಡಿದರು. ಆ ಪೌರಾಯುಕ್ತರು ಪ್ರತಿಕ್ರಿಯಿಸಿ, ಸಭೆಯಲ್ಲಿ ಚರ್ಚಿಸುವ ವಿಷಯಗಳಲ್ಲಿ ಬಂದಿಲ್ಲ. ಈ ಕಾರಣದಿಂದ ಠರಾವು ಮಾಡಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದಾಗ ಮುಂದಿನ ಸಾಮಾನ್ಯ ಸಭೆಯಲ್ಲಿ ಪ್ರತ್ಯೇಕ ವಿಷಯ ಪ್ರಸ್ತಾಪಿಸಲು ನಿರ್ಣಯ ಕೈಗೊಳ್ಳುವ ತೀರ್ಮಾನ ಕೈಗೊಳ್ಳಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಿದ್ದರಾಮಯ್ಯ ಭೇಟಿ ಮಾಡಿದ ರಮೇಶ್‌ ಜಾರಕಿಹೊಳಿ : ಕುತೂಹಲ!
ಬೆಂಗ್ಳೂರಲ್ಲಿರುವ ನಟಿ ಶಿಲ್ಪಾ ಶೆಟ್ಟಿ ಪಬ್‌ ಮೇಲೆ ಐಟಿ ದಾಳಿ