ಕೊಪ್ಪಳ: ಸರ್ಕಾರದ ನೆರವು ಇಲ್ಲದೇ ಗ್ರಾಮಸ್ಥರೇ ದಾನಿಗಳ ನೆರವಿನ ಮೂಲಕ ಪ್ರಥಮ ಬಾರಿಗೆ ಹಮ್ಮಿಕೊಂಡಿರುವ ತಾಲೂಕಿನ ಐತಿಹಾಸಿಕ ಬಹದ್ದೂರುಬಂಡಿ ಗ್ರಾಮದ ಎರಡು ದಿನಗಳ "ಬಹದ್ದೂರುಬಂಡಿ ಉತ್ಸವ- 2023 "ಕ್ಕೆ ಶನಿವಾರ ವಿದ್ಯುಕ್ತ ಚಾಲನೆ ನೀಡಲಾಯಿತು.
ಗ್ರಾಪಂ ಅಧ್ಯಕ್ಷ ಯಲ್ಲಪ್ಪ ತಳವಾರ ಗ್ರಾಮದಲ್ಲಿ ಮೆರವಣಿಗೆಗೆ ಚಾಲನೆ ನೀಡಿದರು. ಗ್ರಾಮದಲ್ಲಿ ಮನೆಮಾಡಿದ್ದ ಸಡಗರ ಸಂಭ್ರಮದ ಮಧ್ಯೆ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಅದ್ಧೂರಿಯಾಗಿ ಸಾಗಿತು. ನಾನಾ ವಾದ್ಯ ವೃಂದಗಳ ಜೊತೆಗೆ ಗ್ರಾಮದವರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮದಲ್ಲಿ ಪಾಲ್ಗೊಂಡಿದ್ದರು.ತಾಲೂಕಿನ ಬಹದ್ದೂರ ಬಂಡಿಯ ಸೇವಾಲಾಲ್ ಸಮುದಾಯ ಭವನದಲ್ಲಿ ನಡೆದ ಬಹದ್ದೂರ ಬಂಡಿ ಉತ್ಸವವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಬಿಜೆಪಿ ಮುಖಂಡೆ ಮಂಜುಳಾ ಕರಡಿ ಮಾತನಾಡಿ, ಬಹದ್ದೂರ್ ಬಂಡಿಗೆ ದೊಡ್ಡ ಇತಿಹಾಸ ಇದೆ. ಇದು ಗಂಡುಗಲಿಗಳ ನಾಡು, ಕೋಟೆ ಕಟ್ಟಿದ ಕಲಿಗಳ ನಾಡು, ಗತಕಾಲದ ಇತಿಹಾಸವಿದೆ ಎಂದರು.
ಇದೇ ಪ್ರಥಮ ಬಾರಿಗೆ ಸ್ವಯಂ ಪ್ರೇರಿತವಾಗಿ ಉತ್ಸವ ನಡೆಯುತ್ತಿರುವುದು ಸಂತಸ ತರಿಸಿದೆ. ನಮ್ಮ ನೆಲ, ಭಾಷೆ, ಸಂಸ್ಕೃತಿ ಉಳಿಸಿ ಬೆಳೆಸಬೇಕಿದೆ. ಈ ಗ್ರಾಮ ಸರ್ವ ಧರ್ಮಗಳ ಗ್ರಾಮವಾಗಿದೆ. ಇಲ್ಲಿ ಜಾತಿ ಮತ ಭೇದ ಭಾವ ಇಲ್ಲದೆ ಸರ್ವ ಧರ್ಮದ ಜನರು ಸೇರಿ ಉತ್ಸವ ಆಚರಣೆ ಮಾಡುತ್ತಿರುವುದು ಶ್ಲಾಘನೀಯ. ಭಾರತ ಸರ್ವ ಜನಾಂಗದ ನಾಡು, ಇಂತಹ ಉತ್ಸವ, ಹಬ್ಬಗಳನ್ನು ಸರ್ವ ಧರ್ಮದವರು ಸೇರಿ ಆಚರಣೆ ಮಾಡಿದರೆ ಅದಕ್ಕೊಂದು ಅರ್ಥ ಇರುತ್ತದೆ. ಜನರೇ ಸೇರಿ ಕೊಪ್ಪಳದ ಬಹದ್ದೂರುಬಂಡಿ ಉತ್ಸವ ಆಚರಣೆ ಮಾಡಿದ್ದು ಮಾದರಿಯಾಗಿದೆ. ಇಲ್ಲಿ ಈ ಗ್ರಾಮದ, ಇಲ್ಲಿಯ ಚರಿತ್ರೆ, ಇತಿಹಾಸವನ್ನು ಮೆಲುಕು ಹಾಕುವ ಅವಕಾಶ ಸಿಕ್ಕಿದೆ.ಇತಿಹಾಸ ತಿಳಿಯದವನು ಇತಿಹಾಸ ಸೃಷ್ಟಿಸಲಾರನು. ಕೋಟೆಯಲ್ಲಿ ಹಲವರು ಆಳ್ವಿಕೆ ಮಾಡಿದ್ದೇ ರಣರೋಚಕವಾಗಿದೆ ಎಂದರು.ಇತಿಹಾಸ ಪರಿಚಯಿಸಿ: ಸಮ್ಮೇಳನ ಸರ್ವಾಧ್ಯಕ್ಷ ಹಾಗೂ ಹಿರಿಯ ವಕೀಲ ಎ.ವಿ. ಕಣವಿ ಮಾತನಾಡಿ, ಬಹದ್ದೂರು ಬಂಡಿಗೆ ತನ್ನದೇ ಇತಿಹಾಸವಿದೆ. ಈ ಕೋಟೆಯೇ ಇದನ್ನು ಸಾರಿ ಸಾರಿ ಹೇಳುತ್ತದೆ. ಆದರೆ, ಇಂದಿನ ಪೀಳಿಗೆಗೆ ಇದನ್ನು ಪರಿಚಯಿಸುವ ದಿಸೆಯಲ್ಲಿ ಉತ್ಸವ ಆಚರಣೆ ಅಗತ್ಯ ಎಂದರು.ನಾವು ಎಲ್ಲರನ್ನು ಒಳಗೊಂಡು ಉತ್ಸವ ಆಚರಣೆ ಮಾಡಬೇಕು ಎಂದು ಆಹ್ವಾನ ನೀಡಿದ್ದೇವೆ. ಆದರೆ, ಕೆಲವರು ಆಗಮಿಸದೇ ಇರುವುದು ಬೇಸರದ ತರಿಸಿದೆ ಎಂದರು. ಉತ್ಸವವನ್ನು ಈಗ ಖಾಸಗಿಯಾಗಿ ಹಮ್ಮಿಕೊಂಡಿದ್ದು, ಮುಂದಿನ ದಿನಗಳಲ್ಲಿ ಸರ್ಕಾರದಿಂದಲೇ ಈ ಉತ್ಸವ ಆಚರಣೆ ಮಾಡುವಂತೆ ಆಗಬೇಕು. ಈ ದಿಸೆಯಲ್ಲಿ ನಾವು ಪ್ರಯತ್ನಿಸುತ್ತೇವೆ ಎಂದರು.
ಅಲ್ಲಮಪ್ರಭು ಮಾತನಾಡಿ, ಕೊಪ್ಪಳ ಹಾಗೂ ಬಹದ್ದೂರ್ ಬಂಡಿ ಜೋಡಿಯಾಗಿವೆ. ಕೊಪ್ಪಳದ ಕೋಟೆ ಭಾರತದ ಕೋಟೆಗಳಲ್ಲಿ ಅಮೋಘ ಕೋಟೆಯಾಗಿವೆ ಎಂದರು.ಕೋಟೆ ಕಟ್ಟಿದ ಸುಬೇದಾರ್: ಚಾಂದಪಾಷಾ ಕಿಲ್ಲೆದಾರ್ ಮಾತನಾಡಿ, ಬೆಳಗಾವಿಯ ಸುಬೇದಾರರು ಬಹದ್ದೂರ್ ಬಂಡಿ ಕೋಟೆ ಕಟ್ಟಿದರು. ತಿಮ್ಮಣ್ಣ, ಭರಮಣ್ಣ ಎನ್ನುವ ಇಬ್ಬರು ಮೇಸ್ತ್ರಿಗಳು ಕೋಟೆ ಕಟ್ಟಿದರು. ಮುಂದಿನ ವರ್ಷ ಸರ್ಕಾರವೇ ಬಹದ್ದೂರ್ ಬಂಡಿ ಉತ್ಸವ ಆಚರಣೆ ಮಾಡಲಿ ಎಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ಯಲ್ಲಪ್ಪ ಚುಕ್ಕನಕಲ್, ಚುಸಾಪ ಅಧ್ಯಕ್ಷ ಹನುಮಂತಪ್ಪ ಅಂಡಗಿ, ಸಾಹಿತಿ ವೀರಣ್ಣ ನಿಂಗೋಜಿ, ಕಾಂಗ್ರೆಸ್ ಮುಖಂಡ ತೋಟಪ್ಪ ಕಾಮನೂರು, ಉದ್ಯಮಿ ಬಸವರಾಜ ಬಳ್ಳೊಳ್ಳಿ, ನಗರಸಭೆ ಸದಸ್ಯ ಅಮ್ಜದ್ ಪಟೇಲ್, ಹನುಮೇಶ ಹೊಸಳ್ಳಿ, ಗ್ರಾಮ ಲೆಕ್ಕಿಗ ಆಸಿಫ್ ಅಲಿ, ಭರತ್ ನಾಯಕ್, ಗ್ರಾಪ ಪಿಡಿಒ ಜ್ಯೋತಿ ರಡ್ಡೇರ್, ಶರಣಪ್ಪ, ಮಹ್ಮದ್ ರಫಿ, ಮೆಹಬೂಬ ಕಿಲ್ಲೇದಾರ, ಮಹೇಳ ಬಳ್ಳಾರಿ ಇದ್ದರು.