ಮೂಲ್ಕಿ: ಭಜನೆ ಕೇವಲ ಒಂದು ಸ್ಪರ್ಧಾ ಮನೋಭಾವದಲ್ಲಿ ನಡೆಯದೆ ಭಕ್ತಿ ಭಾವದಲ್ಲೇ ದೇವರ ಸಂಕೀರ್ತನೆಯನ್ನು ಮಾಡಬೇಕು. ಒಂದೇ ದಿನಕ್ಕೆ ಸೀಮಿತವಾಗದೆ, ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪ್ರತಿನಿತ್ಯ ಭಜನೆ ಮಾಡುವಂತಾಗಬೇಕು. ದಾಸ ಸಂಕೀರ್ತನೆಗಳು ಜೀವನದ ಸಂಕಷ್ಟ ಕಾಲದಲ್ಲಿ ಧೈರ್ಯ ಹಾಗೂ ಸುಖದ ಕಾಲದಲ್ಲಿ ಬದುಕು ಕಟ್ಟಿಕೊಳ್ಳಲು ದಾರಿ ದೀಪ ಎಂದು ಪಡುಪಣಂಬೂರು ಹೊಯ್ಗೆಗುಡ್ಡೆ ಶ್ರೀ ಉಮಾಮಹೇಶ್ವರ ಮಹಾ ಗಣಪತಿ ದೇವಸ್ಥಾನದ ಆಡಳಿತ ಮೊಕ್ತೇಸರ ಎಚ್. ರಂಗನಾಥ ಭಟ್ ಹೇಳಿದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ ಪುರಸ್ಕೃತೆ ಪೂರ್ಣಿಮಾ ಯತೀಶ್ ರೈ ವಹಿಸಿದ್ದು, ಸುರತ್ಕಲ್ ಗೋವಿಂದದಾಸ್ ಕಾಲೇಜಿನ ಉಪನ್ಯಾಸಕಿ ಅಕ್ಷತಾ ವಿ. ಶೆಟ್ಟಿ, ಯುವತಿ ಮಂಡಲದ ಸ್ತಾಪಕಾಧ್ಯಕ್ಷೆ ಮೋಹಿನಿ ಕಾಮೆರೊಟ್ಟು, ಯುವಕ ಮಂಡಲ ಅಧ್ಯಕ್ಷ ಕಿರಣ್ ರಾಜ್ ಬಿ., ರಜತ ಸೇವಾ ಟ್ರಸ್ಟ್ ಅಧ್ಯಕ್ಷ ಬಿ. ಸೂರ್ಯಕುಮಾರ್, ಮಹಿಳಾ ಮಂಡಲ ಅಧ್ಯಕ್ಷೆ ರೇಷ್ಮಾ, ಮಂಡಲದ ಸಲಹಾ ಸಮಿತಿ ಅಧ್ಯಕ್ಷ ನಾಗರಾಜ್ ಉಪಸ್ಥಿತರಿದ್ದರು.
ಮುಕ್ತ ಭಜನಾ ಸ್ಪರ್ಧೆಯಲ್ಲಿ ಒಟ್ಟು ಆಯ್ದ 11 ತಂಡಗಳು ಭಾಗವಹಿಸಿದ್ದವು. ಯುವತಿ ಮಂಡಲದ ಅಧ್ಯಕ್ಷೆ ನಿರ್ಮಿತ ಎನ್. ಸಾಲ್ಯಾನ್ ಸ್ವಾಗತಿಸಿ, ಪ್ರಸ್ತಾವನೆಗ್ಯೆದರು. ಯುವತಿ ಮಂಡಲದ ಕಾರ್‍ಯಕಾರಿ ಸಮಿತಿ ಸದಸ್ಯೆ ದಿವ್ಯಶ್ರೀ ರಮೇಶ್ ಕೋಟ್ಯಾನ್ ವಂದಿಸಿದರು. ಯುವತಿ ಮಂಡಲದ ಉಪಾಧ್ಯಕ್ಷೆ ಪ್ರಣವಿ ಎಂ. ಅಮೀನ್ ಮತ್ತು ಕಾರ್‍ಯಕಾರಿ ಸಮಿತಿ ಸದಸ್ಯೆ ಕಾತ್ಯಾಯಿನಿ ನಿರೂಪಿಸಿದರು.