ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈದ್-ಉಲ್-ಅಝಾ (ಬಕ್ರೀದ್) ಹಬ್ಬವನ್ನು ಕಾರವಾರ ನಗರದಲ್ಲಿ ಗುರುವಾರ ಅತ್ಯಂತ ಭಕ್ತಿಭಾವ ಹಾಗೂ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.
ಕನ್ನಡಪ್ರಭ ವಾರ್ತೆ ಕಾರವಾರ
ತ್ಯಾಗ ಮತ್ತು ಬಲಿದಾನದ ಸಂಕೇತವಾದ ಈದ್-ಉಲ್-ಅಝಾ (ಬಕ್ರೀದ್) ಹಬ್ಬವನ್ನು ಕಾರವಾರ ನಗರದಲ್ಲಿ ಗುರುವಾರ ಅತ್ಯಂತ ಭಕ್ತಿಭಾವ ಹಾಗೂ ಸಡಗರ-ಸಂಭ್ರಮದಿಂದ ಆಚರಿಸಲಾಯಿತು.ಹಬ್ಬದ ಪ್ರಯುಕ್ತ ನಗರದ ಮದೀನಾ ಜಾಮಿಯಾ ಮಸೀದಿಯಲ್ಲಿ ಬೆಳಗ್ಗೆ 7.15ಕ್ಕೆ ಮುಸ್ಲಿಂ ಬಾಂಧವರು ಅಪಾರ ಸಂಖ್ಯೆಯಲ್ಲಿ ಒಗ್ಗೂಡಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಜಾಮಿಯಾ ಮಸೀದಿಯ ಮೌಲಾನಾರಾದ ಮೊಹಮ್ಮದ್ ಶಂಶುದ್ದೀನ್ ಪ್ರಾರ್ಥನೆಯ ನೇತೃತ್ವ ವಹಿಸಿದ್ದರು. ಈ ವೇಳೆ ಮಾತನಾಡಿದ ಅವರು, ಸಮಾಜದಲ್ಲಿನ ಪ್ರತಿಯೊಬ್ಬರಿಗೂ ಹಬ್ಬದ ಶುಭಾಶಯ ಕೋರಿದರು. ಜೊತೆಗೆ ದೇಶದಲ್ಲಿ ಶಾಂತಿ, ಸೌಹಾರ್ದತೆ, ಭ್ರಾತೃತ್ವ ಹಾಗೂ ಸಮಸ್ತ ಸಮುದಾಯದ ಒಳಿತಿಗಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.ಸಾಮೂಹಿಕ ಪ್ರಾರ್ಥನೆಯ ಬಳಿಕ, ಮಸೀದಿಯ ಆವರಣದಲ್ಲಿ ಸೇರಿದ್ದ ಮುಸ್ಲಿಂ ಬಾಂಧವರು ಪರಸ್ಪರ ಆಲಿಂಗಿಸಿಕೊಂಡು ಈದ್ ಮುಬಾರಕ್ ಹೇಳುವ ಮೂಲಕ ಬಕ್ರೀದ್ ಹಬ್ಬದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ಚಿಣ್ಣರಿಂದ ಹಿಡಿದು ಹಿರಿಯರವರೆಗೆ ಎಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ, ಅತ್ಯಂತ ಉತ್ಸಾಹದಿಂದ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು.ಈ ಸಂಭ್ರಮದ ಸಂದರ್ಭ ಮಸೀದಿ ಆಡಳಿತ ಮಂಡಳಿಯ ಅಧ್ಯಕ್ಷ ಅಸ್ಲಾಂ ಬುಖಾರಿ, ಉಪಾಧ್ಯಕ್ಷ ಬಾಬು ಶೇಖ್, ಕಾರ್ಯದರ್ಶಿಗಳಾದ ರಶೀದ್ ಶೇಖ್, ಸೈಯದ್ ಅಶ್ರಫ್ ಖಾದ್ರಿ, ಹೈದರ್ ಶೇಖ್, ಸಲೀಂ ಶೇಖ್, ಮೂಬಸರ ಶೇಖ್, ಶಂಶುದ್ದೀನ್ ಮಕಾಂದಾರ್, ಅಬ್ದುಲ್ ಕರೀಮ್ ನಾಸ್ವಾಲೆ, ಇಜಾಜ್ ಮೂಮೀನ್ ಸೇರಿದಂತೆ ಮಸೀದಿಯ ಪದಾಧಿಕಾರಿಗಳು ಹಾಗೂ ನೂರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.
ಮಸೀದಿಯಲ್ಲಿ ವಿಶೇಷ ಪ್ರಾರ್ಥನೆ:
ಭಟ್ಕಳ ತಾಲೂಕಿನಾದ್ಯಂತ ಗುರುವಾರ ಮುಸ್ಲಿಮರು ಬಕ್ರೀದ್ ಹಬ್ಬವನ್ನು (ಈದುಲ್ ಅದ್ಹಾ)ಸಂಭ್ರಮದಿಂದ ಆಚರಿಸಿದರು.ಮುಸ್ಲಿಮರು ಗುರುವಾರ ಬೆಳಗ್ಗೆ ಬಂದರು ರಸ್ತೆಯ ಈದ್ಗಾ ಮೈದಾನದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸದೇ ಎಲ್ಲರೂ ತಮ್ಮ ಪ್ರದೇಶದ ಮಸೀದಿಯಲ್ಲಿ ಹಬ್ಬದ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಜಾಮೀಯಾ ಮಸೀದಿಯಲ್ಲಿ (ಚಿನ್ನದ ಪಳ್ಳಿ) ಬಕ್ರೀದ್ ಹಬ್ಬ ಪ್ರಯುಕ್ತ ಮೌಲಾನಾ ಮೌಲಾನಾ ಅಬ್ದುಲ್ ಅಲೀಂ ಖತೀಬಿ ನದ್ವಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಈದ್ ಸಂದೇಶ ನೀಡಿದರು. ಖಲಿಫಾ ಜಾಮಿಯಾ ಮಸೀದಿಯಲ್ಲಿ (ಗುರುಗಳ ಪಳ್ಳಿ), ನವಾಯತ್ ಕಾಲನಿಯ ತಂಝೀಂ ಮಿಲಿಯಾ ಮಸೀದಿ, ಹುರಳಿಸಾಲಿನ ಮಸ್ಜೀದ್ ಅಹ್ಮದ್ ಸಯಿದ್ ಮಸ್ಜೀದ ಸೇರಿದಂತೆ ವಿವಿಧ ಮಸೀದಿಗಳಲ್ಲಿ ಮೌಲಾನಾ ಅವರು ವಿಶೇಷ ಪ್ರಾರ್ಥನೆ ನೆರವೇರಿಸಿ ಬಕ್ರೀದ್ ಹಬ್ಬದ ಮಹತ್ವ ಮತ್ತು ಸಂದೇಶ ನೀಡಿದರು.
ಹೆಬಳೆ, ಶಿರಾಲಿ, ಮುರ್ಡೇಶ್ವರದ ಮಸೀದಿಯಲ್ಲೂ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲಿಮರು ಗುರುವಾರ ಬೆಳಗ್ಗೆ ಮಸೀದಿಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಪ್ರಯುಕ್ತ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಬಕ್ರೀದ್ ಹಬ್ಬವನ್ನು ಮುಸ್ಲಿಮರು ಮೂರೂವರೆ ದಿನ ಆಚರಿಸಲಿದ್ದಾರೆ. ಹಬ್ಬದ ಅಂಗವಾಗಿ ಪಟ್ಟಣದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಹೊರ ತಾಲೂಕಿನಿಂದಲೂ ಪೊಲೀಸರು ಆಗಮಿಸಿದ್ದಾರೆ.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.