ರಿಸಲ್ಟ್‌ನತ್ತ ಚಿತ್ತ । ಫೆ.2ರಂದು ಪೂರ್ಣಗೊಂಡ ಕೃಷಿ ಸಂಘದ ಎಲೆಕ್ಷನ್ । 7 ಬಿಜೆಪಿ, 5 ಕಾಂಗ್ರೆಸ್ ಬೆಂಬಲಿತರು ಮುನ್ನಡೆ । ಕೋರ್ಟ್ ತೀರ್ಪಿನ ಬಳಿಕ ಪ್ರಕಟ
ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಅವಧಿಯ ಆಡಳಿತ ಮಂಡಳಿಯ ನಿರ್ದೇಶಕ ಸ್ಥಾನಕ್ಕೆ ಭಾನುವಾರ ನಡೆದ ಚುನಾವಣೆಯು ಸಂಜೆ ವೇಳೆಗೆ ಮುಕ್ತಾಯಗೊಂಡಿದ್ದು, ಫಲಿತಾಂಶವನ್ನು ಘೋಷಣೆ ಮಾಡದೆ ಕಾಯ್ದಿರಿಸಲಾಗಿದೆ.
ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯಲ್ಲಿ ಸಾಲರಹಿತ ಕ್ಷೇತ್ರದಲ್ಲಿ 253 ಅರ್ಹ ಮತದಾರರಿದ್ದು, 98 ಜನ ಅನರ್ಹ ಮತದಾರು ಕೋರ್ಟ್ ಮೂಲಕ ಮತದಾನಕ್ಕೆ ಹಕ್ಕು ಪಡೆದಿದ್ದರು. ಈ ಪೈಕಿ 236 ಅರ್ಹ ಮತದಾರರು, ಕೋರ್ಟ್ ಮೂಲಕ ಹಕ್ಕು ತಂದವರು 82 ಮತದಾರರು ಮತ ಚಲಾಯಿಸಿದ್ದರು. ಈ ಕ್ಷೇತ್ರದಲ್ಲಿ 1 ನಿರ್ದೇಶಕ ಸ್ಥಾನಕ್ಕೆ ನಾಲ್ಕು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.ಸಾಲಗಾರ ಕ್ಷೇತ್ರದಲ್ಲಿ 296 ಅರ್ಹ ಮತದಾರರಿದ್ದು, 57 ಅನರ್ಹ ಮತದಾರರು ಕೋರ್ಟ್ ಮೂಲಕ ಮತದಾನಕ್ಕೆ ಹಕ್ಕು ಪಡೆದಿದ್ದರು. ಈ ಪೈಕಿ 286 ಅರ್ಹ ಮತದಾರರು, ಕೋರ್ಟ್ ಮೂಲಕ ಹಕ್ಕು ತಂದವರು 54 ಮತದಾರರು ಮತ ಚಲಾಯಿಸಿದ್ದರು. ಈ ಕ್ಷೇತ್ರದಲ್ಲಿ 10 ನಿರ್ದೇಶಕ ಸ್ಥಾನಕ್ಕೆ 29 ಅಭ್ಯರ್ಥಿಗಳು ಸ್ಪರ್ಧೆಯಲ್ಲಿದ್ದಾರೆ.
ಈ ಹಿನ್ನೆಲೆಯಲ್ಲಿ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯ ಚುನಾವಣಾಧಿಕಾರಿ ಕೆಎಂಸಿ ವಸಂತ ಮತದಾನ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಮತ ಎಣಿಕೆ ನಡೆಸಿ, ಕೋರ್ಟ್ ತೀರ್ಪಿಗಾಗಿ ಕಾಯ್ದಿರುವುದಾಗಿ ಮಾಹಿತಿ ನೀಡಿದ್ದಾರೆ.
ಹೈಕೋರ್ಟ್ ತೀರ್ಪಿನ ಬಳಿಕವೂ ಇದೇ ಫಲಿತಾಂಶದ ಘೋಷಣೆಯಾಗುವ ನಿರೀಕ್ಷೆಯಿದೆ ಎಂದು ಮುನ್ನಡೆಯಲ್ಲಿರುವ ಅಭ್ಯರ್ಥಿಗಳು ಖಚಿತಪಡಿಸಿದ್ದು, ಎರಡೂ ಪಕ್ಷಗಳಿಂದ ಮುನ್ನಡೆಯಲ್ಲಿದ್ದ ಅಭ್ಯರ್ಥಿಗಳು, ಕಾರ್ಯಕರ್ತರು ಮತ ಎಣಿಕೆ ಪೂರ್ಣಗೊಂಡ ಬಳಿಕ ಸಹಕಾರ ಸಂಘದ ಹೊರಭಾಗದಲ್ಲಿ ಪರಸ್ಪರ ಅಭಿನಂದಿಸಿಕೊಂಡರು.