ಬಾಳೆಹೊನ್ನೂರು: ದತ್ತ ಮಾಲಾಧಾರಿಗಳ ವಾಹನ ತಪಾಸಣೆ

KannadaprabhaNewsNetwork |  
Published : Dec 15, 2024, 02:01 AM IST
೧೪ಬಿಹೆಚ್‌ಆರ್ ೧: ಬಾಳೆಹೊನ್ನೂರಿನ ಚಿಕ್ಕಮಗಳೂರು ರಸ್ತೆಯ ಭದ್ರಾ ಸ್ಟಾಪ್ ಬಳಿ ದತ್ತಪೀಠಕ್ಕೆ ತೆರಳುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸಿದರು. | Kannada Prabha

ಸಾರಾಂಶ

ಚಿಕ್ಕಮಗಳೂರಿನ ದತ್ತಾತ್ರೆಯ ಪೀಠದಲ್ಲಿ ಸಂಘ ಪರಿವಾರ ಶನಿವಾರ ಹಮ್ಮಿಕೊಂಡಿದ್ದ ದತ್ತ ಜಯಂತಿ ಹಾಗೂ ದತ್ತಮಾಲಾ ಅಭಿಯಾನಕ್ಕೆ ಈ ಭಾಗದಿಂದ ತೆರಳುವ ವಾಹನಗಳ ತಪಾಸಣೆಯನ್ನು ಪಟ್ಟಣದಲ್ಲಿ ನಡೆಸಲಾಯಿತು.

ಕನ್ನಡಪ್ರಭವಾರ್ತೆ ಬಾಳೆಹೊನ್ನೂರು

ಚಿಕ್ಕಮಗಳೂರಿನ ದತ್ತಾತ್ರೆಯ ಪೀಠದಲ್ಲಿ ಸಂಘ ಪರಿವಾರ ಶನಿವಾರ ಹಮ್ಮಿಕೊಂಡಿದ್ದ ದತ್ತ ಜಯಂತಿ ಹಾಗೂ ದತ್ತಮಾಲಾ ಅಭಿಯಾನಕ್ಕೆ ಈ ಭಾಗದಿಂದ ತೆರಳುವ ವಾಹನಗಳ ತಪಾಸಣೆಯನ್ನು ಪಟ್ಟಣದಲ್ಲಿ ನಡೆಸಲಾಯಿತು.

ಪಟ್ಟಣ ಹೊರವಲಯದ ಬಾಳೆಹೊನ್ನೂರು-ಚಿಕ್ಕಮಗಳೂರು ರಸ್ತೆಯ ಭದ್ರಾ ಸೇತುವೆಯ ಕಾಫಿ ಶಾಪ್ ಬಳಿ ಚೆಕ್‌ಪೋಸ್ಟ್ ತೆರೆಯಲಾಗಿತ್ತು. ಪೊಲೀಸ್ ಚೆಕ್‌ಪೋಸ್ಟ್ ನಲ್ಲಿ ಶುಕ್ರವಾರ ರಾತ್ರಿಯಿಂದಲೇ ದತ್ತಪೀಠ ಭಾಗಕ್ಕೆ ತೆರಳುವ ಎಲ್ಲಾ ವಾಹನಗಳನ್ನು ಪೊಲೀಸರು ತಪಾಸಣೆ ಮಾಡಿದರು. ತಪಾಸಣಾ ಕೇಂದ್ರಕ್ಕೆ ಸಿಸಿ ಕ್ಯಾಮೆರಾ ಅಳವಡಿಸಿದ್ದು, ಪೊಲೀಸರು ವಾಹನಗಳಲ್ಲಿ ತೆರಳುವವರ ಕುರಿತು ಮಾಹಿತಿಗಳನ್ನು ಪಡೆದುಕೊಳ್ಳುತ್ತಿದ್ದರು.

ಈ ಬಾರಿ ಪಟ್ಟಣದ ಮೂಲಕ 173 ವಾಹನಗಳಲ್ಲಿ 1035 ಜನ ಸಂಘ ಪರಿವಾರದ ಕಾರ್ಯಕರ್ತರು, ಮಾಲಾಧಾರಿಗಳು ದತ್ತಪೀಠಕ್ಕೆ ತೆರಳಿದ್ದಾರೆ. ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರು, ಉಡುಪಿ, ಕಾರ್ಕಳ, ಪುತ್ತೂರು, ಮೂಡಬಿದಿರೆ, ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಆಗುಂಬೆ ಮತ್ತು ಜಿಲ್ಲೆಯ ಕೊಪ್ಪ, ಶೃಂಗೇರಿ, ಮೂಡಿಗೆರೆ, ನರಸಿಂಹರಾಜಪುರ ತಾಲೂಕುಗಳಿಂದ ದತ್ತಮಾಲಾಧಾರಿಗಳು ಹಾಗೂ ದತ್ತಭಕ್ತರು ತೆರಳಿರುವುದು ಚೆಕ್‌ಪೋಸ್ಟ್ ನಲ್ಲಿ ದಾಖಲಾಗಿದೆ.

ದತ್ತಪೀಠಕ್ಕೆ ತೆರಳಿದ ವಾಹನಗಳು ಮಂಗಳವಾರ ಬೆಳಿಗ್ಗೆ 11 ಗಂಟೆಯ ನಂತರ ವಾಪಾಸ್ ಈ ಭಾಗಕ್ಕೆ ಬರಲಾರಂಭಿಸಿದ್ದು, ಅವುಗಳನ್ನು ಕೂಡ ದಾಖಲು ಮಾಡಿಕೊಳ್ಳಲಾಯಿತು. ವಾಹನ ತಪಾಸಣಾ ಚೆಕ್‌ಪೋಸ್ಟ್ನಲ್ಲಿ ಪಿಎಸ್‌ಐ ರವೀಶ್ ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿಗಳು ತಪಾಸಣೆ ನಡೆಸಿದರು. ಉಳಿದಂತೆ ಪಟ್ಟಣದ ವಿವಿಧೆಡೆ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಚೆಕ್ ಪೋಸ್ಟ್ ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿ ವಾಹನಗಳ ಚಲನವಲನ ಪ್ರಕ್ರಿಯೆ ದಾಖಲಿಸಿಕೊಳ್ಳಲಾಯಿತು.

ಪೂಜೆ ಸಲ್ಲಿಸಿ ದತ್ತ ಪೀಠಕ್ಕೆ ಪಟ್ಟಣ ಸುತ್ತಮುತ್ತಲಿನ ಪ್ರದೇಶಗಳಾದ ರಂಭಾಪುರಿ ಪೀಠ, ಮೇಲ್ಪಾಲ್, ಹೂವಿನಹಕ್ಲು, ಅರಳೀಕೊಪ್ಪ, ಬನ್ನೂರು, ಮಾಗುಂಡಿ, ಗಡಿಗೇಶ್ವರ, ಆಡುವಳ್ಳಿ, ಸೀಕೆ, ಸೀಗೋಡು ಮುಂತಾದೆಡೆಯ ಸಂಘ ಪರಿವಾರದ ಕಾರ್ಯಕರ್ತರು ಪಟ್ಟಣದ ಮಾರ್ಕಾಂಡೇಶ್ವರ ದೇಗುಲ, ರಂಭಾಪುರಿ ಪೀಠದಲ್ಲಿ ವಿಶೇಷ ಪೂಜೆ ಸಲ್ಲಿಸಿ, ಮಾಲಾಧಾರಿಗಳು ಪಡಿ ಸಂಗ್ರಹಿಸಿ ದತ್ತಪೀಠಕ್ಕೆ ತೆರಳಿದರು.ಪಟ್ಟಣದಲ್ಲಿ ಶನಿವಾರ ಮಧ್ಯಾಹ್ನ 2 ಗಂಟೆಯ ಬಳಿಕ ತುರ್ತು ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಂಜಾಗರೂಕ ಕ್ರಮವಾಗಿ ಬಂದ್ ಮಾಡಿದ್ದರು. ಅಂಗಡಿಗಳ ಬಂದ್ ಬಳಿಕ ವಾಹನ, ಜನ ಸಂಚಾರವಿಲ್ಲದೆ ಪಟ್ಟಣ ಬಿಕೋ ಎನ್ನುತಿತ್ತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

5 ಪಾಲಿಕೆಗಳಲ್ಲಿ ಜಯಭೇರಿ ಬಾರಿಸಲು ಬಿಜೆಪಿಗೆ ಒಳ್ಳೆ ಅವಕಾಶ
ಸಿಎಂ ಗಾದಿ ಸಂಚಲನ : ನಾನು ಸಿಎಂ ಆಗಲಿ ಎಂಬುದು ಜನರ ಬಯಕೆ ಎಂದರು ಡಿಕೆಶಿ