ಮುನಿರಾಬಾದ್: ನೀರಿನ ಅಭಾವದ ನಡುವೆಯೂ ನೀರು ಬರುವ ನಿರೀಕ್ಷೆಯಲ್ಲಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ಕಾಲುವೆಗಳಿಗೆ 90ದಿನಗಳ ಕಾಲ ನೀರು ಹರಿಸಲು ನಿರ್ಧರಿಸಲಾಗಿದ್ದು, ಆ.11 ರಿಂದ ನ.11ರವರೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

ಅವರು ಮುನಿರಾಬಾದಿನ ಕಾಡಾ ಸಭಾಂಗಣದಲ್ಲಿ ಮಂಗಳವಾರ ನಡೆದ 126ನೇ ನೀರಾವರಿ ಸಲಹಾ ಸಮಿತಿಯ ಸಭೆಯ ನಂತರ ಮಾಧ್ಯಮದವರಿಗೆ ಮಾಹಿತಿ ನೀಡಿದರು.

ಜಲಾಶಯದಲ್ಲಿ 82 ಟಿಎಂಸಿ ನೀರು ಇದ್ದು, 90 ದಿನಗಳ ನೀರು ಹರಿಸಲು ಇನ್ನು 16 ಟಿಎಂಸಿ ನೀರಿನ ಕೊರತೆ ಇದೆ. ಮಳೆಗಾಲ ಇನ್ನೂ ಇರುವುದರಿಂದ ನೀರು ಬರುವ ನಿರೀಕ್ಷೆಯಲ್ಲಿ 90 ದಿನಗಳ ಕಾಲ (ಆ. 11 ರಿಂದ ನ.11ರವರೆಗೆ) ನೀರು ಹರಿಸಲು ನಿರ್ಧರಿಸಲಾಗಿದೆ ಎಂದರು.

ಈಗ 1 ತಿಂಗಳ ನೀರಿನ ಕೊರತೆ ಇದೆ. ತುಂಗಭದ್ರಾ ಜಲಾಶಯಕ್ಕೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬರುವ ಸಾಧ್ಯತೆ ಇದೆ ಎಂದು ತುಂಗಭದ್ರಾ ಮಂಡಳಿ ಅಧಿಕಾರಿಗಳು ಅಂದಾಜು ಮಾಡಿದ್ದಾರೆ. ಇದನ್ನು ಆಧಾರವಾಗಿಟ್ಟು ಸೆ.11ರಂದು ಪುನಃ ನೀರಾವರಿ ಸಲಹ ಸಮಿತಿ ಸಭೆ ನಡೆಸಲಾಗುವುದು. ಅದರಲ್ಲಿ ಅಂದಿನ ನೀರಿನ ಸ್ಥಿತಿಗತಿಯ ಲಭ್ಯತೆ ಬಗ್ಗೆ ಚರ್ಚಿಸಿ ತುಂಗಭದ್ರಾ ಜಲಾಶಯದ ವಿವಿಧ ಕಾಲುವೆಗಳಿಗೆ ನೀರು ಹರಿಸುವ ದಿನಾಂಕ ವಿಸ್ತರಿಸುವ ವಿಷಯದ ಬಗ್ಗೆ ಚರ್ಚಿಸಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

ಕಾರ್ಖಾನೆಗಳಿಗಿಲ್ಲ ನೀರು:


ತುಂಗಭದ್ರಾ ಜಲಾಶಯದಲ್ಲಿ ನೀರಿನ ಕೊರತೆ ಇರುವ ಕಾರಣ ಜಲಾಶಯದ ನೀರನ್ನು ಕುಡಿಯುವ ಸಲುವಾಗಿ ಹಾಗೂ ನೀರಾವರಿಗೆ ಮಾತ್ರ ಬಳಸಲಾಗುವುದು ಯಾವುದೇ ಕಾರಣಕ್ಕೂ ಕಾರ್ಖಾನೆಗಳಿಗೆ ನೀರನ್ನು ಕೊಡುವುದಿಲ್ಲ ಎಂದು ಸಚಿವರು ಮಾಹಿತಿ ನೀಡಿದರು.

ನೀರು ಹಂಚಿವ ವಿವರ:

ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಆ.11 ರಿಂದ ನ.11 ರವರೆಗೆ ಪ್ರತಿನಿತ್ಯ 4,100 ಕ್ಯೂಸೆಕ್, ತುಂಗಭದ್ರಾ ಬಲದಂಡೆ ಮೇಲ್ಮಟ್ಟದ ಕಾಲುವೆಗೆ ಪ್ರತಿನಿತ್ಯ 1,200 ಕ್ಯೂಸೆಕ್ ನೀರನ್ನು ಆ.11 ರಿಂದ ನ.11 ರವರೆಗೆ, ತುಂಗಭದ್ರಾ ಬಲದಂಡೆ ಕೆಳ ಮಟ್ಟದ ಕಾಲುವೆಗೆ ಪ್ರತಿನಿತ್ಯ 650 ಕ್ಯೂಸೆಕ್ ನೀರನ್ನು ಆ.11ರಿಂದ ನ.11 ರವರೆಗೆ, ರಾಯ ಹಾಗೂ ಬಸವಣ್ಣ ಕಾಲುವೆಗೆ ಆ. 11ರಿಂದ ನ.11 ರವರೆಗೆ ಪ್ರತಿನಿತ್ಯ 180 ಕ್ಯೂಸೆಕ್, ತುಂಗಭದ್ರಾ ಎಡದಂಡೆ ಮೇಲ್ಮಟ್ಟದ ಕಾಲುವೆಗೆ ಆ.11ರಿಂದ ನ. 11 ರವರೆಗೆ ಪ್ರತಿನಿತ್ಯ 25 ಕ್ಯೂಸೆಕ್ ಮತ್ತು ನದಿ ಮೂಲಕ ಆ.12 ರಿಂದ ನಾಲ್ಕು ದಿನಗಳವರೆಗೆ ಪ್ರತಿನಿತ್ಯ 2,500 ಕ್ಯೂ ಸೆಕ್ ನೀರನ್ನು ಹರಿಸಲಾಗುವುದು ಎಂದು ಸಚಿವ ಶಿವರಾಜ್ ತಂಗಡಗಿ ಮಾಹಿತಿ ನೀಡಿದರು.

ಜಲಾಶಯದಲ್ಲಿ ನೀರಿನ ಕೊರತೆ ಇರುವ ಕಾರಣ ಅಚ್ಚುಕಟ್ಟು ಪ್ರದೇಶದ ರೈತರು ಸಹಕರಿಸಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಸಚಿವ ನಾಗೇಂದ್ರ, ಕಾಡಾ ಅಧ್ಯಕ್ಷ ಹಸನ್ ಸಾಬ್ ದೋಟಿಹಾಳ, ನೀರಾವರಿ ಇಲಾಖೆಯ ಮುಖ್ಯ ಅಭಿಯಂತರ ಮನೋಜ್ ಕುಮಾರ್, ಅಧೀಕ್ಷಕ ಅಭಿಯಂತರ ಮಲಿಗವಾಡ್ ಹಾಗೂ ಇತರರು ಉಪಸ್ಥಿತರಿದ್ದರು.