ಕನ್ನಡಪ್ರಭ ವಾರ್ತೆ ಮಸ್ಕಿ (ರಾಯಚೂರು)
ಮಂಗಳವಾರ ಲಿಂಗಸುಗೂರಿನಲ್ಲಿ ಆರಂಭಕಂಡಿದ್ದ ಯಾತ್ರೆಯು ರಾತ್ರಿ ಮಸ್ಕಿ ತಾಲೂಕಿನ ಸಂತೆಕೆಲ್ಲೂರು ಶ್ರೀಘನಮಟೇಶ್ವರ ಮಠದಲ್ಲಿ ತಂಗಿತ್ತು. ಬುಧವಾರ ಬೆಳಗ್ಗೆ ಆರಂಭಕಂಡ ಎರಡನೇ ದಿನದ ಯಾತ್ರೆಯುದ್ಧಕ್ಕು ಅಮೋಘ ಜನಸ್ಪಂದನೆ ಲಭಿಸಿತು. ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೊಂದಿಗೆ ಮಾಜಿ ಸಚಿವ ಬಿ. ಶ್ರೀರಾಮುಲು, ಹಿರಿಯರಾದ ಸಿ.ಟಿ.ರವಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್.ರವಿಕುಮಾರ, ಶಾಸಕರಾದ ಜನಾರ್ಧನರೆಡ್ಡಿ, ಮಾನಪ್ಪ ವಜ್ಜಲ್, ಡಾ.ಶಿವರಾಜ ಎಸ್.ಪಾಟೀಲ್, ಮಾಜಿ ಶಾಸಕ ರಾಜೂಗೌಡ, ಪ್ರತಾಪಗೌಡ ಪಾಟೀಲ್ ಸೇರಿದಂತೆ ಪಕ್ಷದ ಪ್ರಮುಖರು,ಕಾರ್ಯಕರ್ತರು ರಾಯಚೂರು ನಗರ, ಗ್ರಾಮೀಣ, ಮಾನ್ವಿ, ದೇವದುರ್ಗ, ಲಿಂಗಸುಗೂರು, ಮಸ್ಕಿ,ಪಕ್ಕದ ಬಾಗಲಕೋಟೆ, ಹುನಗುಂದ,ಕುಷ್ಟಗಿ,ಮುದ್ದೇಬಿಹಾಳ ವಿಧಾನಸಭಾ ಕ್ಷೇತ್ರಗಳಿಂದ ಆಗಮಿಸಿದ್ದ ಸಾವಿರಾರು ಕಾರ್ಯಕರ್ತರು ಅತ್ಯಂತ ಉತ್ಸಾಹದಿಂದ ಹೆಜ್ಜೆ ಹಾಕಿದರು.
ಬೆಳಗ್ಗೆ ಸಂತೆಕ್ಕೆಲ್ಲೂರಿನಿಂದ ಪ್ರಾರಂಭಗೊಂಡ ಎರಡನೇ ದಿನದ ಯಾತ್ರೆಯು ಮಧ್ಯಾಹ್ನದ ವೇಳೆಗೆ ಮುದಬಾಳ ಕ್ರಾಸ್ ವರೆಗೆ ನಡೆಯಿತು. ಊಟದ ಬಳಿಕ ಪುನರಾರಂಭಗೊಂಡ ಯಾತ್ರೆ ಮಸ್ಕಿ ಪಟ್ಟಣ ಪ್ರವೇಶಿಸಿ ಅಲ್ಲಿಂದ ಗುಡದೂರಿಗೆ ಬಂದು ತಂಗಿತು. ಹೀಗೆ ಎರಡನೇ ದಿನದ ಪಾದಯಾತ್ರೆಯು ಸುಮಾರು 22 ಕಿ.ಮೀ. ಕ್ರಮಿಸಿತು. ರೈತ ಜಮೀನಿಗೆ ಭೇಟಿ: ಮಸ್ಕಿ ಕಡೆ ಸಾಗುತ್ತಿದ್ದ ಪಾದಯಾತ್ರೆಯು ಅಂಕುಶದೊಡ್ಡಿ ಸಮೀಪದಲ್ಲಿ ಬರುತ್ತಿದ್ದಾಗ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ರಸ್ತೆ ಪಕ್ಕದ ರೈತರ ಜಮೀನಿಗೆ ಭೇಟಿ ನೀಡಿ, ಸಜ್ಜೆ ಬೆಳೆಯನ್ನು ಪರಿಶೀಲಿಸಿದರು. ಬೆಳೆನಷ್ಟದಿಂದ ಸಂಕಷ್ಟಕ್ಕೊಳಗಾಗಿರುವ ರೈತರೊಂದಿಗೆ ಮಾತುಕತೆ ನಡೆಸಿ, ಅವರ ಅಹವಾಲುಗಳನ್ನು ಆಲಿಸಿದರು. ರೈತರ ನೋವು ಹಾಗೂ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಸರ್ಕಾರ ವಿಫಲವಾಗಿದೆ.ರಾಜ್ಯದಲ್ಲಿ ತೀವ್ರ ಬರ ಆವರಿಸಿದ್ದರೂ ಸಹ ರಾಜ್ಯ ಸರ್ಕಾರವು ಗಂಭೀರವಾಗಿ ಪರಿಗಣಿಸದೇ ಇರುವುದು ಖಂಡನೀಯ. ಇದನ್ನು ಖಂಡಿಸಿ ರೈತರ ಪರವಾಗಿಯೇ ಈ ಪಾದಯಾತ್ರೆಯನ್ನು ನಡೆಸುತ್ತಿರುವುದಾಗಿ ನಾಯಕರು ನುಡಿದರು. ‘ಅನ್ನದಾತನ ಬೆವರಿಗೆ ನ್ಯಾಯ ನೀಡುವುದು ಸರ್ಕಾರದ ಕರ್ತವ್ಯ’ ಎಂದು ಪ್ರತಿಪಾದಿಸಿದ ಬಿಜೆಪಿ ನಾಯಕರು, ರೈತರ ಸಮಸ್ಯೆ ಅಧಿಕಾರಸ್ಥರ ಗಮನಕ್ಕೆ ತಲುಪಬೇಕು ಎಂಬ ಉದ್ದೇಶದಿಂದಲೇ ಜನಾಕ್ರೋಶ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಬಿ.ವೈ.ವಿ.ಗೆ ರಾಖಿಕಟ್ಟಿದ ಮಹಿಳಾ ಕಾರ್ಯಕರ್ತೆಯರು