ವಾಮಮಾರ್ಗದಲ್ಲಿ ಬಮೂಲ್ ಚುನಾವಣೆ ಗೆಲುವು

KannadaprabhaNewsNetwork |  
Published : May 29, 2025, 12:35 AM ISTUpdated : May 29, 2025, 12:45 PM IST
ಪೊಟೊ೨೮ಸಿಪಿಟಿ೧: ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಜಯಮುತ್ತು ಮಾತನಾಡಿದರು. | Kannada Prabha

ಸಾರಾಂಶ

 ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಮತದಾನದಲ್ಲಿ ಭಾಗವಹಿಸಬಾರದು ಎಂಬ ದುರುದ್ದೇಶದಿಂದ ಚುನಾವಣೆಯ ಹಿಂದಿನ ರಾತ್ರಿ 17 ಡೇರಿಗಳ ಪ್ರತಿನಿಧಿಗಳನ್ನು ಏಕಾಏಕಿ ಅನರ್ಹಗೊಳಿಸಲಾಗಿದೆ.  

ಚನ್ನಪಟ್ಟಣ : ಬಮೂಲ್ ನಿರ್ದೇಶಕ ಸ್ಥಾನದ ಚುನಾವಣೆಯಲ್ಲಿ ಜೆಡಿಎಸ್ ಬೆಂಬಲಿತ ಹಾಲು ಉತ್ಪಾದಕರ ಸಹಕಾರ ಸಂಘಗಳ ಪ್ರತಿನಿಧಿಗಳು ಮತದಾನದಲ್ಲಿ ಭಾಗವಹಿಸಬಾರದು ಎಂಬ ದುರುದ್ದೇಶದಿಂದ ಚುನಾವಣೆಯ ಹಿಂದಿನ ರಾತ್ರಿ ೧೭ ಡೇರಿಗಳ ಪ್ರತಿನಿಧಿಗಳನ್ನು ಏಕಾಏಕಿ ಅನರ್ಹಗೊಳಿಸಲಾಗಿದೆ. ಸಹಕಾರ ಸಂಘಗಳ ಸಹಾಯಕ ನಿಬಂಧಕರನ್ನು ಬಳಸಿಕೊಂಡು ಮಾರ್ಗದಿಂದ ಗೆಲುವು ಸಾಧಿಸಲಾಗಿದೆ ಎಂದು ಜೆಡಿಎಸ್ ತಾಲೂಕು ಅಧ್ಯಕ್ಷ ಎಚ್.ಸಿ.ಜಯಮುತ್ತು ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸಹಕಾರ ಸಂಘಗಳ ಚುನಾವಣೆಯ ಇತಿಹಾಸದಲ್ಲಿ ೧೭ ಡೇರಿಗಳನ್ನು ಚುನಾವಣೆ ಹಿಂದಿನ ದಿನ ಸೂಪರ್ ಸೀಡ್ ಮಾಡಿರುವುದು ಇದೇ ಮೊದಲು. ಜೆಡಿಎಸ್ ಬೆಂಬಲಿತ ಡೇರಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಚುನಾವಣೆಯಿಂದ ಅನರ್ಹಗೊಳಿಸಲಾಗಿದೆ ಎಂದು ಅಕ್ರೋಶ ವ್ಯಕ್ತಪಡಿಸಿದರು.

ಜೆಡಿಎಸ್ ಬೆಂಬಲಿತರು ಇದ್ದ ಡೇರಿಗಳ ವಿರುದ್ಧ ಸುಳ್ಳು ದೂರುಗಳನ್ನು ಸೃಷ್ಟಿಸಲಾಗಿದೆ. ದಿನಾಂಕವಿಲ್ಲದೇ, ವಿಳಾಸವಿಲ್ಲದೇ, ಸಂಘಗಳ ಅವ್ಯವಹಾರದ ದಾಖಲೆಗಳಿಲ್ಲದೇ ಬಹುಪಾಲು ದೂರು ಅರ್ಜಿ ಸೃಷ್ಟಿಸಲಾಗಿದೆ. 17  ಡೇರಿ ಪ್ರತಿನಿಧಿಗಳು ಚುನಾವಣೆಯಲ್ಲಿ ಮತದಾನ ಮಾಡದಂತೆ ತಡೆಯುವ ಉದ್ದೇಶದಿಂದ ಯಾವುದೇ ನೋಟಿಸ್ ನೀಡದೇ, ಪರಿಶೀಲನೆ ನಡೆಸದೇ, ಕಾನೂನುಬಾಹಿರವಾಗಿ ರಾತ್ರೋರಾತ್ರಿ ಅನರ್ಹಗೊಳಿಸಲಾಗಿದೆ ಎಂದು ದೂರಿದರು.

ಚುನಾವಣೆಯ ಹಿಂದಿನ ರಾತ್ರಿ ಕರೆ ಮಾಡಿದ ಎಆರ್ ಚುನಾವಣೆ ಏಜೆಂಟ್ ಅನ್ನು ಬದಲಿಸುವಂತೆ ಸೂಚಿಸುತ್ತಾರೆ. ನಮ್ಮದೇ ಸರ್ಕಾರ ಮತ್ತು ಶಾಸಕರು ಇದ್ದಾರೆ ಎಂದು ಇಂತ ಹುನ್ನಾರ ನಡೆಸಿದ್ದಾರೆ. ಇದು ಅನೈತಿಕ ಗೆಲುವು ಎಂದು ಕಿಡಿಕಾರಿದ ಅವರು, ಕುಕ್ಕೂರು, ಕುಕ್ಕೂರುದೊಡ್ಡಿ, ಮತ್ತೀಕೆರೆ, ಮಾಳಗಾಳು, ನಾರಾಯಣ ತಿಮ್ಮನದೊಡ್ಡಿ, ಬಲ್ಲಾಪಟ್ಟಣ ಡೇರಿಗಳಿಗೆ ಸ್ವಂತ ಕಟ್ಟಡವಿಲ್ಲ, ಕಟ್ಟಡವನ್ನೂ ನಿರ್ಮಾಣ ಮಾಡುತ್ತಿಲ್ಲ. ಆದರೆ, ಕಟ್ಟಡ ನಿರ್ಮಾಣದ ವೇಳೆ ಹಣ ದುರುಪಯೋಗದ ಕಾರಣ ನೀಡಿ ಅನರ್ಹಗೊಳಿಸಲಾಗಿದೆ. ಸಕಾರಣವಿಲ್ಲದೇ ಜೆಡಿಎಸ್ ಬೆಂಬಲತ ಸುಮಾರು ೩೦ಕ್ಕೂ ಹೆಚ್ಚು ಡೇರಿಗಳನ್ನು ಸೂಪರ್‌ಸೀಡ್ ಮಾಡಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಎಆರ್ ವಜಾಗೆ ಆಗ್ರಹ: ಸಹಾಯಕ ನಿಬಂಧಕರು ರಾಜಕೀಯ ಪ್ರೇರಣೆಯಿಂದ ಏಕಾಏಕಿ ೧೭ ಡೇರಿಗಳನ್ನು ಸೂಪರ್‌ಸೀಡ್ ಮಾಡಿದ್ದಾರೆ. ಸಹಕಾರ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಈ ಕೂಡಲೇ ಇವರನ್ನು ವಜಾಗೊಳಿಸಬೇಕು. ಸಹಾಯಕ ನಿಬಂಧಕರ ಆದೇಶದ ವಿರುದ್ಧ ಕಾನೂನು ಹೋರಾಟ ನಡೆಸಲಾಗುವುದು ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ಎಂ.ಎನ್.ಆನಂದಸ್ವಾಮಿ ಮಾತನಾಡಿ, ಬಮೂಲ್ ಚುನಾವಣೆ ಪಾರದರ್ಶಕವಾಗಿ ನಡೆದಿಲ್ಲ. ಒಂದೇ ಜಾಗದಲ್ಲಿ ಕುಳಿತು ನಮ್ಮ ಬೆಂಬಲಿತ ಡೇರಿಗಳ ವಿರುದ್ಧ ದೂರುಗಳನ್ನು ಸೃಷ್ಟಿಸಲಾಗಿದೆ. ಬಹುತೇಕ ದೂರು ಅರ್ಜಿಗಳಿಗೆ ಒಬ್ಬರೇ ಬೇರೆ, ಬೇರೆ ಹೆಸರಿನಲ್ಲಿ ಸಹಿ ಮಾಡಿದ್ದಾರೆ. ಮಹಿಳಾ ಹಾಲು ಉತ್ಪಾದಕರ ಸಹಕಾರ ಸಂಘಕ್ಕೂ ಪುರುಷರೇ ಸಹಿ ಮಾಡಿದ್ದಾರೆ. ಇದೇನು ರಿಪಬ್ಲಿಕ್ ಆಫ್ ರಾಮನಗರವಾ ಎಂದು ಕಿಡಿಕಾರಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಕಕ್ಕೂರುದೊಡ್ಡಿ ಜಯರಾಮು, ಮುಖಂಡರಾದ ಬೋರ್‌ವೆಲ್ ರಾಮಚಂದ್ರು, ಡಿಎಂಕೆ ಕುಮಾರ್, ಮಹೇಶ್ ಗೌಡ, ರೇಖಾ ಉಮಾಶಂಕರ್ ಇತರರಿದ್ದರು.

ಡೇರಿ ಕುರಿತು ದೂರು ನೀಡಿದರೆ ನೋಟಿಸ್ ನೀಡಿ ಕಾಲಾವಕಾಶ ನೀಡಬೇಕು. ಆದರೆ, ಇಲ್ಲಿ ಎಲ್ಲ ನಿಯಮಗಳನ್ನೂ ಗಾಳಿಗೆ ತೂರಲಾಗಿದೆ. ನಮ್ಮ ಡೇರಿಗೆ ಸಂಬಂಧಿಸಿದಂತೆ ಫ್ಯಾಟ್‌ಗೆ ತಕ್ಕ ಹಣ ನೀಡಿಲ್ಲ, ಬೋನಸ್ ನೀಡಲಿಲ್ಲ ಎಂದು ಸುಳ್ಳು ಆರೋಪ ಹೊರೆಸಲಾಗಿದೆ. ಕಟ್ಟಡ ನಿರ್ಮಾಣದ ವೇಳೆ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ್ದಾರೆ. ಆದರೆ, ಏಳು ವರ್ಷದ ಹಿಂದೆಯೇ ಡೈರಿ ಕಟ್ಟಡ ಕೆಡವಿದ್ದು, ಸಂಘ ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅವರ ಅನುಕೂಲಕ್ಕೆ ತಕ್ಕಂತೆ ಕಾರಣ ಸೃಷ್ಟಿಸಿ ಅಸಿಂಧು ಮಾಡಲಾಗಿದೆ. ಇದೆಂತಹ ಪ್ರಜಾತಂತ್ರ ವ್ಯವಸ್ಥೆ ?

-ಮೆಹರೀಶ್, ಮತ್ತಿಕೆರೆ ಡೈರಿ ಅಧ್ಯಕ್ಷ 

PREV
Read more Articles on

Recommended Stories

ದೇಶದ ನಾಯಕರಾಗಲು ಶಾಲೆಯಲ್ಲಿ ನಾಯಕತ್ವ ವಹಿಸಿಕೊಳ್ಳಿ
ಪರಿಷ್ಕೃತ ಜಿಎಸ್‌ಟಿ ಬಡ ಜನತೆಗೆ ಅನುಕೂಲ