ದಲಿತರಿಗೆ ದೇಗುಲ ಪ್ರವೇಶ ನಿರ್ಬಂಧ: ತಹಸೀಲ್ದಾರ್ ಭೇಟಿ

KannadaprabhaNewsNetwork |  
Published : Oct 01, 2026, 01:15 AM IST
ವೇಣುಗೋಪಾಲ್  | Kannada Prabha

ಸಾರಾಂಶ

ದೇವಸ್ಥಾನದ ಒಳಗೆ ತೆರಳಿ ದೇವರನ್ನು ನೇರವಾಗಿ ದರ್ಶನ ಮಾಡಬೇಕೆಂಬ ಆಸೆ ಇದೆ ಎಂದು ಪರಿಶಿಷ್ಟ ಸಮುದಾಯದವರು ಅಧಿಕಾರಿಗಳ ಮುಂದೆ ತಿಳಿಸಿದರು.

ಊಲವಾಡಿಯ ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ನಿರ್ಬಂಧ ಆರೋಪ

ಕನ್ನಡಪ್ರಭ ವಾರ್ತೆ ಚಿಂತಾಮಣಿ

ತಾಲೂಕಿನ ಊಲವಾಡಿ ಗ್ರಾಮದ ರುಕ್ಮಿಣಿ ಸತ್ಯಭಾಮ ಸಮೇತ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಪರಿಶಿಷ್ಟ ಸಮುದಾಯದವರಿಗೆ ಪ್ರವೇಶ ನಿರ್ಬಂಧವಿದೆಯೆಂಬ ಆರೋಪದ ಹಿನ್ನೆಲೆಯಲ್ಲಿ ತಾಲೂಕು ಆಡಳಿತ ವ್ಯವಸ್ಥೆ ಗ್ರಾಮಕ್ಕೆ ತೆರಳಿ ನಡೆಸಿದ ಪರಿಶೀಲನೆ ನಡೆಸಲಾಯಿತು.

ದೇವಸ್ಥಾನ ಪ್ರವೇಶಕ್ಕೆ ಯಾವುದೇ ನಿರ್ಬಂಧವಿಲ್ಲವೆಂದು ಗ್ರಾಮಸ್ಥರು ಸ್ಪಷ್ಟಪಡಿಸಿದರೆ, ದೇವಸ್ಥಾನದ ಒಳಗೆ ತೆರಳಿ ದೇವರನ್ನು ನೇರವಾಗಿ ದರ್ಶನ ಮಾಡಬೇಕೆಂಬ ಆಸೆ ಇದೆ ಎಂದು ಪರಿಶಿಷ್ಟ ಸಮುದಾಯದವರು ಅಧಿಕಾರಿಗಳ ಮುಂದೆ ತಿಳಿಸಿದರು.

ಶಾಸಕ ಪ್ರದೀಪ್ ಈಶ್ವರ್ ಅವರು ದೇವಸ್ಥಾನಕ್ಕೆ ದಲಿತರಿಗೆ ಮುಕ್ತ ಪ್ರವೇಶ ಕಲ್ಪಿಸಬೇಕು ಹಾಗೂ ತೆರವುಗೊಳಿಸಿರುವ ಅಂಬೇಡ್ಕರ್ ವಿಗ್ರಹವನ್ನು ಮರುಸ್ಥಾಪಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದ ಹಿನ್ನೆಲೆಯಲ್ಲಿ ಆಡಳಿತ ವ್ಯವಸ್ಥೆ ಚುರುಕುಗೊಂಡಿತು. ಸಮಸ್ಯೆ ಬಗೆಹರಿಯದಿದ್ದರೆ ದಲಿತರೊಂದಿಗೆ ದೇವಸ್ಥಾನ ಪ್ರವೇಶಿಸುವ ಅನಿವಾರ್ಯ ಪರಿಸ್ಥಿತಿ ಎದುರಾಗಲಿದೆಯೆಂದು ಅವರು ಮನವಿಯಲ್ಲಿ ತಿಳಿಸಿದ್ದರು.

ತಹಸೀಲ್ದಾರ್ ಸುದರ್ಶನ್ ಯಾದವ್ ನೇತೃತ್ವದ ಅಧಿಕಾರಿಗಳ ತಂಡ ಊಲವಾಡಿ ಗ್ರಾಮಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯನ್ನು ಪರಿಶೀಲಿಸಿತು. ತಾಪಂ ಇಒ ಆನಂದ್, ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಶಿವರಾಜ್, ಗ್ರಾಪಂ ಪಿಡಿಒ ದೇವಸ್ಥಾನ ಪ್ರವೇಶಕ್ಕೆ ಸಂಬಂಧಿಸಿದ ಆರೋಪಗಳ ಕುರಿತು ವಿಚಾರಣೆ ನಡೆಸಿದರು.

ಮುಜರಾಯಿ ಇಲಾಖೆಗೆ ಸೇರಿದ ವೇಣುಗೋಪಾಲಸ್ವಾಮಿ ದೇವಸ್ಥಾನಕ್ಕೆ ಯಾವುದೇ ಜಾತಿ ಅಥವಾ ಜನಾಂಗದವರ ಪ್ರವೇಶಕ್ಕೆ ನಿರ್ಬಂಧ ವಿಧಿಸಿಲ್ಲವೆಂದು ಗ್ರಾಮಸ್ಥರು ಅಧಿಕಾರಿಗಳ ಮುಂದೆ ಸ್ಪಷ್ಟಪಡಿಸಿದರು. ದೇವಸ್ಥಾನ ಪ್ರವೇಶಕ್ಕೆ ಯಾರಾದರೂ ಅಡ್ಡಿಪಡಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದೆಂದು ಅಧಿಕಾರಿಗಳು ಎಚ್ಚರಿಕೆ ನೀಡಿದರು.

ತಹಸೀಲ್ದಾರ್ ಮಾತನಾಡಿ ದೇವಸ್ಥಾನ ಪ್ರವೇಶಕ್ಕೆ ಯಾವುದೇ ಜನಾಂಗಕ್ಕೂ ನಿರ್ಬಂಧವಿಲ್ಲ. ಯಾರೇ ಆಗಲಿ ಈಗಲೇ ದೇವಸ್ಥಾನದೊಳಗೆ ಬರಬಹುದು. ದೇವಸ್ಥಾನಕ್ಕೆ ಬರಲು ಇಚ್ಛಿಸುವವರು ನನ್ನೊಂದಿಗೆ ಈಗಲೇ ಬನ್ನಿ ಎಂದು ಮುಕ್ತವಾಗಿ ಆಹ್ವಾನಿಸಿದರು. ಆದರೆ ತಕ್ಷಣವೇ ದೇವಸ್ಥಾನ ಪ್ರವೇಶಿಸಲು ಪರಿಶಿಷ್ಟ ಸಮುದಾಯದವರಿಂದ ಯಾರೂ ಮುಂದೆ ಬರಲಿಲ್ಲ. ಸ್ನಾನ ಮಾಡಿಕೊಂಡು ಬರುವುದಾಗಿ ಅವರು ತಿಳಿಸಿದರು. ಅಧಿಕಾರಿಗಳು ಸ್ಥಳದಲ್ಲೇ ಕಾಯುವುದಾಗಿ ತಿಳಿಸಿದರೂ ದೇವಸ್ಥಾನ ಪ್ರವೇಶಕ್ಕೆ ಯಾರೂ ಮುಂದಾಗಲಿಲ್ಲ. ಗ್ರಾಮದ ಹಿರಿಯರೆಲ್ಲರೂ ಸೇರಿ ಚರ್ಚಿಸಿ ದೇವಸ್ಥಾನ ಪ್ರವೇಶದ ದಿನಾಂಕವನ್ನು ತಿಳಿಸುವುದಾಗಿ ಪರಿಶಿಷ್ಟ ಸಮುದಾಯದವರು ಅಧಿಕಾರಿಗಳಿಗೆ ತಿಳಿಸಿದರು. ಬಳಿಕ ತಹಸೀಲ್ದಾರ್ ಸುದರ್ಶನ್ ಯಾದವ್ ಗ್ರಾಮಸ್ಥರೊಂದಿಗೆ ದೇವಸ್ಥಾನಕ್ಕೆ ತೆರಳಿ ಪೂಜೆ ಸಲ್ಲಿಸಿದರು.

ದೇವಸ್ಥಾನಕ್ಕೆ ಆಗಮಿಸುವ ಯಾವುದೇ ಜಾತಿ ಅಥವಾ ಧರ್ಮದ ಭಕ್ತರಿಗೆ ತಾರತಮ್ಯವಿಲ್ಲದೆ ಮುಕ್ತವಾಗಿ ಪೂಜೆ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಅರ್ಚಕರಿಗೆ ತಹಸೀಲ್ದಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.ಚಿತ್ರಶೀರ್ಷಿಕೆ: ತಹಸೀಲ್ದಾರ್ ಸುದರ್ಶನ್ ಯಾದವ್ ಊಲವಾಡಿ ಗ್ರಾಮಕ್ಕೆ ಭೇಟಿ ನೀಡಿ ಪರಿಶಿಷ್ಟ ಸಮುದಾಯದವರೊಂದಿಗೆ ನೇರವಾಗಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗ್ಯಾರಂಟಿ ಬಡವರ ಬದುಕಿನಲ್ಲಿ ಹೊಸ ಚೈತನ್ಯ ನೀಡಿವೆ: ಶಿವು ಚಂಗಾವರ
ಕಾಡುಗೊಲ್ಲ ಸಮುದಾಯ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡುವುದು ಅಗತ್ಯ: ಶ್ರೀ ಬಸವ ರಮಾನಂದ ಸ್ವಾಮೀಜಿ ಕರೆ