ಗಾಳಿ, ಮಳೆಗೆ ಬಾಳೆತೋಟ ನಾಶ: ರೈತರಿಗೆ ನಷ್ಟ

KannadaprabhaNewsNetwork |  
Published : May 29, 2025, 12:03 AM IST
ಗಾಳಿ,ಮಳೆಗೆ ಬಾಳೆ ತೋಟ ನಾಶ,ರೈತರಿಗೆ ನಷ್ಟ | Kannada Prabha

ಸಾರಾಂಶ

ಗುಂಡ್ಲುಪೇಟೆ ತಾಲೂಕಿನ ಶಿವಪುರ ಗ್ರಾಮದ ರೈತ ಮಹೇಶ್‌ಗೆ ಸೇರಿದ ಬಾಳೆ ಗಿಡ ಮುರಿದು ಬಿದ್ದಿವೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಕಳೆದ ನಾಲ್ಕು ದಿನಗಳಿಂದ ಬೀಳುತ್ತಿರುವ ಗಾಳಿ, ಮಳೆಗೆ ತಾಲೂಕಿನ ಹಲವು ಗ್ರಾಮಗಳಲ್ಲಿ ಬಾಳೆ ಗಿಡ ನೆಲಕ್ಕುರುಳಿವೆ. ಅಲ್ಲದೆ ಆಲತ್ತೂರು ಹಾಗೂ ಬೇರಂಬಾಡಿ ಗ್ರಾಮದಲ್ಲಿ ತಲಾ ಒಬ್ಬರ ಮನೆಗಳ ಗೋಡೆ ಕುಸಿದಿದೆ.

ತಾಲೂಕಿನ ಹಮೀರ್‌ ಹೊಸಹಳ್ಳಿ ಗ್ರಾಮದ ಕೆ.ಪಿ.ಮಹದೇವಸ್ವಾಮಿಗೆ ಸೇರಿದ ಅರ್ಧ ಎಕರೆ ಬಾಳೆ, ಶಿವಪುರ ಗ್ರಾಮದ ಮಹೇಶ್‌ ೧ ಎಕರೆ, ಕುಮಾರ್‌ ೧ ಎಕರೆ,ಗೋಪಾಲರಾಜು, ಸಿದ್ದಪ್ಪ, ನಂಜಪ್ಪ ಸೇರಿದಂತೆ ಹಲವು ರೈತರ ಜಮೀನಿನಲ್ಲಿ ಬೆಳೆದಿದ್ದ ಬಾಳೆ ಗಿಡಗಳು ನೆಲಕ್ಕುರಳಿವೆ.

ತಾಲೂಕಿನ ಆಲತ್ತೂರು ಗ್ರಾಮದ ಗೌರಮ್ಮನಿಗೆ ಸೇರಿದ ಮನೆಯ ಗೋಡೆ ಕುಸಿತಗೊಂಡಿದೆ. ಜೊತೆಗೆ ಬೇರಂಬಾಡಿ ಗೌರಮ್ಮನ ಮನೆಯ ಗೋಡೆಯೂ ಕುಸಿದಿದೆ. ಎಡಬಿಡದೆ ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ರೈತರು ಮಳೆ ಸಾಕಪ್ಪ ಎನ್ನುವಂತಾಗಿದೆ.

ಮಳೆ, ಗಾಳಿಗೆ ಹಾನಿಯಾದ ಪ್ರದೇಶಗಳಿಗೆ ಆಯಾಯ ಗ್ರಾಮ ಆಡಳಿತ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಹಸೀಲ್ದಾರ್‌ ಟಿ.ರಮೇಶ್‌ ಬಾಬು ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.

ಹಾನಿಯಾದ ಪ್ರದೇಶಕ್ಕೆ ಭೇಟಿ

ನೀಡಿ ತುರ್ತಾಗಿ ಪರಿಹಾರ ನೀಡಿ

ತಾಲೂಕಿನಾದ್ಯಂತ ಕಳೆದ ನಾಲ್ಕು ದಿನಗಳಿಂದ ಬೀಳುತ್ತಿರುವ ಮಳೆ, ಗಾಳಿಗೆ ರೈತರ ಫಸಲು ನಾಶವಾಗಿದ್ದು, ಜಿಲ್ಲಾಧಿಕಾರಿಗಳು ಹಾನಿಯಾದ ಸ್ಥಳಕ್ಕೆ ಭೇಟಿ ನೀಡಬೇಕು ಜೊತೆಗೆ ತುರ್ತಾಗಿ ಪರಿಹಾರ ನೀಡಬೇಕು ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಆಗ್ರಹಿಸಿದ್ದಾರೆ. ಕಳೆದ ವರ್ಷದಲ್ಲಾದ ಪ್ರಕೃತಿ ವಿಕೋಪದಲ್ಲಿ ರೈತರ ಫಸಲು ಮಳೆ, ಗಾಳಿಗೆ ಭಾರಿ ಪ್ರಮಾಣದಲ್ಲಿ ನಷ್ಟವಾಗಿದೆ ಆದರೂ ಜಿಲ್ಲಾಧಿಕಾರಿಗಳು ಭೇಟಿ ನೀಡಲೇ ಇಲ್ಲ, ಈ ಬಾರಿಯಾದರೂ ಭೇಟಿ ನೀಡಲಿ ಎಂದು ಒತ್ತಾಯಿಸಿದರು.

ಕಳೆದ ವರ್ಷದ ಚಾಮರಾಜನಗರ ಹಾಗೂ ಗುಂಡ್ಲುಪೇಟೆ ತಾಲೂಕಿನ ಬಾಳೆ ತೋಟದ ನಷ್ಟ ತುಂಬಿ ಕೊಡಲು ಆಗಿಲ್ಲ, ಈಗ ಮತ್ತೆ ಪ್ರಕೃತಿ ವಿಕೋಪಕ್ಕೆ ರೈತರ ಫಸಲು ಹಾನಿಯಾಗಿದೆ. ಹಾಗಾಗಿ ಕಂದಾಯ ಇಲಾಖೆ ಬೆಳೆ ನಷ್ಟ ದಾಖಲಿಸಲು ಕೂಡಲೇ ಸರ್ಕಾರ ಲಾಗಿನ್‌ ಓಪನ್‌ ಮಾಡಬೇಕು ಎಂದು ಆಗ್ರಹಿಸಿದರು. ಜಿಲ್ಲೆಯಲ್ಲಿ ಮಳೆ, ಗಾಳಿಗೆ ನಷ್ಟವಾಗಿರುವ ಸ್ಥಳಕ್ಕೆ ಜಿಲ್ಲಾಧಿಕಾರಿಗಳು ಭೇಟಿ ನೀಡಿ ನಷ್ಟ ಅಂದಾಜು ಮಾಡಬೇಕು. ಕಳೆದ ಸಾಲಿನ ಪರಿಹಾರ ಹಣ ನೀಡಬೇಕು. ಜೊತೆಗೆ ಪ್ರಸಕ್ತ ಸಾಲಿನ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ಉಸ್ತುವಾರಿ ಕಾರ್ಯದರ್ಶಿ ಎಲ್ಲಿ?

ಚಾಮರಾಜನಗರ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಿಲ್ಲಾ ಮಟ್ಟದ ಸಭೆಗೆ ಮಾತ್ರ ಸೀಮಿತರಾಗಿದ್ದಾರೆ. ಪ್ರಕೃತಿ ವಿಕೋಪದಡಿ ಬರಬೇಕಾದ ಪರಿಹಾರ ಹಣ ರೈತರಿಗೆ ಕಳೆದ ವರ್ಷದ್ದೇ ಕೊಡಿಸಿಲ್ಲ ಎಂದು ಜಿಲ್ಲಾ ರೈತಸಂಘದ ಅಧ್ಯಕ್ಷ ಶಿವಪುರ ಮಹದೇವಪ್ಪ ಆರೋಪಿಸಿದರು. ಉಸ್ತುವಾರಿ ಕಾರ್ಯದರ್ಶಿಗಳು ಜಿಲ್ಲಾದ್ಯಂತ ಪ್ರವಾಸ ಮಾಡಿ ಸಾರ್ವಜನಿಕರು ಹಾಗೂ ರೈತರ ಸಮಸ್ಯೆ ಆಲಿಸಬೇಕು. ಆ ಕೆಲಸ ಆಗುತ್ತಿಲ್ಲ. ಇನ್ನಾದರೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಲಿ ಎಂದರು.

PREV

Recommended Stories

ಸಾರಿಗೆ ನೌಕರರ ಜತೆ ಸರ್ಕಾರ ಸಂಧಾನ ವಿಫಲ
ಸುಹಾಸ್ ಶೆಟ್ಟಿ ಹ* ಕೇಸಲ್ಲಿ ಎನ್‌ಐಎನಿಂದ 18 ಕಡೆ ದಾಳಿ